Link to home pageLanguagesLink to all Bible versions on this site
2
ಅಳತೆಯ ನೂಲಿನವನು
1 ಆಗ ನಾನು ಕಣ್ಣೆತ್ತಿ ನೋಡಲು, ತನ್ನ ಕೈಯಲ್ಲಿ ಅಳೆಯುವ ನೂಲು ಉಳ್ಳ ಒಬ್ಬ ಮನುಷ್ಯನನ್ನು ಕಂಡೆನು. 2 ಆಗ ನಾನು, “ನೀನು ಎಲ್ಲಿಗೆ ಹೋಗುತ್ತೀ?” ಎಂದೆನು.
ಅದಕ್ಕೆ ಆತನು ನನಗೆ, “ಯೆರೂಸಲೇಮನ್ನು ಅಳತೆಮಾಡಿ, ಅದರ ಅಗಲವೆಷ್ಟು? ಅದರ ಉದ್ದವೆಷ್ಟು? ಎಂದು ನೋಡುವುದಕ್ಕೆ ಹೋಗುತ್ತೇನೆ,” ಎಂದನು.

3 ನನ್ನ ಸಂಗಡ ಮಾತನಾಡಿದ ದೂತನು ಬರುತ್ತಿರಲು, ಇನ್ನೊಬ್ಬ ದೂತನು ಅವನನ್ನು ಎದುರುಗೊಂಡು, 4 “ಓಡಿಹೋಗಿ ಈ ಯೌವನಸ್ಥನಿಗೆ, ‘ಯೆರೂಸಲೇಮು, ಅದರಲ್ಲಿರುವ ಮನುಷ್ಯರ ಮತ್ತು ದನಗಳ ಸಂಖ್ಯೆ ಹೆಚ್ಚಾಗಿರುವುದು. ಯೆರೂಸಲೇಮು ಗೋಡೆ ಇಲ್ಲದ ಊರುಗಳಂತೆ ಇರುವುದು. 5 ನಾನೇ ಅದರ ಸುತ್ತಲೂ ಬೆಂಕಿಯ ಗೋಡೆಯಾಗಿಯೂ, ಅದರ ಮಧ್ಯದಲ್ಲಿ ಮಹಿಮೆಯಾಗಿಯೂ ಇರುವೆನು ಎಂದು ಹೇಳು,’ ಎಂದನು,” ಎಂದು ಯೆಹೋವ ದೇವರು ಹೇಳುತ್ತಾರೆ.

6 “ಎಲೈ, ನೀವು ಹೊರಗೆ ಬಂದು ಉತ್ತರ ದೇಶದಿಂದ ಓಡಿಹೋಗಿರಿ. ಏಕೆಂದರೆ ಆಕಾಶದ ನಾಲ್ಕು ದಿಕ್ಕುಗಳಿಗೆ ನಿಮ್ಮನ್ನು ಚದರಿಸಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.

7 “ಚೀಯೋನೇ, ಬನ್ನಿರಿ, ಬಾಬಿಲೋನಿನ ಪುತ್ರಿಯ ಬಳಿಯಲ್ಲಿ ವಾಸವಾಗಿರುವವಳೇ, ತಪ್ಪಿಸಿಕೋ.” 8 ಏಕೆಂದರೆ ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, “ನಿಮ್ಮನ್ನು ಸುಲಿದುಕೊಂಡ ಜನಾಂಗಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ. ಏಕೆಂದರೆ ನಿಮ್ಮನ್ನು ಮುಟ್ಟುವವನು ಯೆಹೋವ ದೇವರ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ. 9 ನಾನು ನನ್ನ ಕೈಯನ್ನು ಅವರ ಮೇಲೆ ಎತ್ತುವೆನು. ಆಗ ಅವರು ತಮ್ಮ ದಾಸರಿಗೆ ಕೊಳ್ಳೆಯಾಗುವರು. ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ಕಳುಹಿಸಿದರೆಂದು ನೀವು ತಿಳಿಯುವಿರಿ.

10 “ಚೀಯೋನ್ ಪುತ್ರಿಯೇ, ಹಾಡಿ ಹರ್ಷಿಸು. ಏಕೆಂದರೆ, ನಾನು ಬರುವೆನು ಮತ್ತು ನಾನು ನಿಮ್ಮ ಮಧ್ಯದಲ್ಲಿ ವಾಸಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. 11 “ಆ ದಿವಸದಲ್ಲಿ ಅನೇಕ ಜನಾಂಗಗಳು ಯೆಹೋವ ದೇವರನ್ನು ಅಂಟಿಕೊಂಡು ನನ್ನ ಜನರಾಗುವರು, ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು. ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆಂದು ತಿಳಿದುಕೊಳ್ಳುವೆ. 12 ಇದಲ್ಲದೆ ಯೆಹೋವ ದೇವರು ತಮ್ಮ ಭಾಗವಾದ ಯೆಹೂದವನ್ನು ಪರಿಶುದ್ಧ ದೇಶದಲ್ಲಿ ಸೊತ್ತಾಗಿ ಹೊಂದುವರು. ಯೆರೂಸಲೇಮನ್ನು ತಿರುಗಿ ಆಯ್ದುಕೊಳ್ಳುವರು. 13 ಎಲ್ಲಾ ಮನುಷ್ಯರೇ, ಯೆಹೋವ ದೇವರ ಮುಂದೆ ಮೌನವಾಗಿರಿ. ಏಕೆಂದರೆ ಅವರು ತಮ್ಮ ಪರಿಶುದ್ಧ ನಿವಾಸದೊಳಗಿಂದ ಎದ್ದಿದ್ದಾರೆ.”

<- ಜೆಕರ್ಯ 1ಜೆಕರ್ಯ 3 ->