1 “ಆ ದಿವಸದಲ್ಲಿ ದಾವೀದನ ಮನೆತನದವರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ಅವರ ಪಾಪದಿಂದ ಮತ್ತು ಅಶುದ್ಧತೆಯಿಂದ ಶುದ್ಧೀಕರಿಸಲು ಒಂದು ಬುಗ್ಗೆಯು ತೆರೆಯಲಾಗುವುದು.
2 “ಆ ದಿನದಲ್ಲಿ, ನಾನು ವಿಗ್ರಹಗಳ ಹೆಸರುಗಳನ್ನು ದೇಶದೊಳಗಿಂದ ಕಡಿದುಬಿಡುವೆನು. ಅವು ಇನ್ನು ಮೇಲೆ ಜ್ಞಾಪಕಕ್ಕೆ ಬರುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಪ್ರವಾದಿಗಳನ್ನೂ, ಅಶುದ್ಧ ಆತ್ಮವನ್ನೂ ದೇಶದೊಳಗಿಂದ ತೊಲಗಿಹೋಗುವಂತೆ ಮಾಡುವೆನು. 3 ಯಾವನಾದರೂ ಇನ್ನು ಪ್ರವಾದಿಸಿದರೆ, ಅವನ ಹೆತ್ತವರಾದ ತಂದೆತಾಯಿಗಳು ಅವನಿಗೆ, ‘ನೀನು ಬದುಕಬಾರದು, ಏಕೆಂದರೆ ಯೆಹೋವ ದೇವರ ಹೆಸರಿನಲ್ಲಿ ಸುಳ್ಳು ಹೇಳುತ್ತೀ,’ ಎಂದು ಹೇಳುವರು. ಅವನು ಪ್ರವಾದಿಸುವಾಗ ಅವನ ತಂದೆತಾಯಿಗಳು ಅವನನ್ನು ಇರಿದುಬಿಡುವರು.
4 “ಆ ದಿವಸದಲ್ಲಿ, ಪ್ರವಾದಿಗಳು ಪ್ರವಾದಿಸುವಾಗ, ಅವರು ತಮ್ಮ ತಮ್ಮ ದರ್ಶನಗಳಿಗೆ ನಾಚಿಕೆಪಡುವರು. ಅವರು ಮೋಸಗೊಳಿಸಲು ಪ್ರವಾದಿಯ ಒರಟಾದ ವಸ್ತ್ರವನ್ನು ಧರಿಸುವುದಿಲ್ಲ. 5 ಆದರೆ ಅವನು, ‘ನಾನು ಪ್ರವಾದಿಯಲ್ಲ, ನಾನು ಹೊಲದಲ್ಲಿ ವ್ಯವಸಾಯ ಮಾಡುವವನು, ಚಿಕ್ಕಂದಿನಿಂದ ನಾನು ಗುಲಾಮನಾಗಿದ್ದೇನೆ,’ ಎಂದು ಹೇಳುವನು. 6 ಆಗ ಒಬ್ಬನು ಅವನಿಗೆ, ‘ನಿನ್ನ ಕೈಗಳಲ್ಲಿರುವ ಈ ಗಾಯಗಳು ಏನು?’ ಎಂದು ಕೇಳಿದರೆ, ಅವನು, ‘ನನ್ನ ಸ್ನೇಹಿತರ ಮನೆಯಲ್ಲಿ ನನಗುಂಟಾದ ಗಾಯಗಳೇ,’ ಅನ್ನುವನು.