Link to home pageLanguagesLink to all Bible versions on this site
4
ಪ್ರಿಯಕರ
1 ಇಗೋ, ನನ್ನ ಪ್ರಿಯಳೇ,
ನೀನು ಎಷ್ಟು ಸುಂದರಿ!
ಆಹಾ, ನೀನು ಎಷ್ಟು ಸುಂದರಿಯು.
ನಿನ್ನ ಮುಸುಕಿನೊಳಗಿನ ನಿನ್ನ ಕಣ್ಣುಗಳು ಪಾರಿವಾಳಗಳೇ.
ನಿನ್ನ ತಲೆಕೂದಲು ಗಿಲ್ಯಾದಿನ ಪರ್ವತದಿಂದ ಇಳಿದು ಬರುವ ಮೇಕೆ ಮಂದೆಯ ಹಾಗೆ ಇದೆ.
2 ನಿನ್ನ ಹಲ್ಲುಗಳ ಹೊಳಪು
ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಗೆ ಸಮಾನ.
ಅವು ಜೊತೆಯಾಗಿಯೇ ಇರುತ್ತವೆ.
ಅವುಗಳಲ್ಲಿ ಒಂದೂ ಒಂಟಿಯಾಗಿರದು.
3 ನಿನ್ನ ತುಟಿ ಕೆಂಪು ದಾರದ ಹಾಗೆ ಇವೆ.
ನಿನ್ನ ಮಾತು ರಮ್ಯ.
ಮುಸುಕಿನೊಳಗಿನ ನಿನ್ನ ಕೆನ್ನೆ
ವಿಭಾಗಿಸಿದ ದಾಳಿಂಬೆಯ ಹಣ್ಣಿನ ಹಾಗೆ ಇದೆ.
4 ನಿನ್ನ ಕೊರಳು ದಾವೀದನ ಆಯುಧ ಶಾಲೆಗೋಸ್ಕರ
ಕಟ್ಟಿಸಲಾದ ಬುರುಜಿನ ಹಾಗೆ ಇದೆ.
ಅದರಲ್ಲಿ ಶೂರರ ಸಾವಿರ ಗುರಾಣಿಗಳು
ತೂಗುಹಾಕಿ ಇವೆ.
5 ನಿನ್ನ ಎರಡು ಸ್ತನಗಳು
ನೆಲದಾವರೆಯ ನಡುವೆ ಮೇಯುವ
ಹುಲ್ಲೆಯ ಅವಳಿಮರಿಗಳ ಹಾಗಿವೆ.
6 ಹೊತ್ತು ಮೂಡುವವರೆಗೂ
ನೆರಳು ಓಡಿ ಹೋಗುವವರೆಗೂ
ನಾನು ರಕ್ತಬೋಳದ ಪರ್ವತಕ್ಕೂ
ಸಾಂಬ್ರಾಣಿಯ ಗುಡ್ಡಕ್ಕೂ ಹೋಗುವೆನು.
7 ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿ,
ನಿನ್ನಲ್ಲಿ ದೋಷವೇನೂ ಇಲ್ಲ.
 
8 ಬಾ, ವಧುವೇ, ಲೆಬನೋನಿನಿಂದ ಬಾ,
ಲೆಬನೋನಿನಿಂದ ನನ್ನೊಡನೆ ಬಾ.
ಅಮಾನದ ಶಿಖರಗಳಿಂದ,
ಸೆನೀರ್, ಹೆರ್ಮೋನ್ ಶಿಖರಗಳಿಂದ,
ಸಿಂಹದ ಗವಿಗಳಿಂದ,
ಚಿರತೆಗಳ ಪರ್ವತಗಳಿಂದ ಇಳಿದು ಬಾ.
9 ನನ್ನ ಹೃದಯವನ್ನು ನೀನು ಸೆಳಕೊಂಡಿರುವೆ. ನನ್ನ ಪ್ರಿಯಳೇ, ನನ್ನ ವಧುವೇ,
ನೀನು ನಿನ್ನ ಒಂದೇ ಕಿರುನೋಟದಿಂದಲೂ,
ನಿನ್ನ ಕೊರಳಿನ ಒಂದೇ ಕಂಠ ಹಾರದಿಂದಲೂ,
ನನ್ನ ಹೃದಯವನ್ನು ಸೆಳಕೊಂಡಿರುವೆ.
10 ನನ್ನ ಪ್ರಿಯಳೇ, ವಧುವೇ! ನಿನ್ನ ಪ್ರೀತಿಯು ಎಷ್ಟೋ ಚೆಂದ.
ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ!
ಎಲ್ಲಾ ಸುಗಂಧಗಳಿಗಿಂತ
ನಿನ್ನ ತೈಲದ ಸುವಾಸನೆಯು ಎಷ್ಟೋ ಉತ್ತಮ!
11 ನನ್ನ ವಧುವೇ, ನಿನ್ನ ತುಟಿಗಳಿಂದ ಜೇನು ಸುರಿಯುತ್ತಿದೆ.
ಹಾಲೂ, ಜೇನೂ ನಿನ್ನ ನಾಲಿಗೆ ಅಡಿಯಲ್ಲಿವೆ.
ನಿನ್ನ ವಸ್ತ್ರಗಳ ಸುವಾಸನೆಯು
ಲೆಬನೋನಿನ ಸುಗಂಧದಂತಿದೆ.
12 ನನ್ನ ಪ್ರಿಯಳೇ, ನನ್ನ ವಧುವೇ, ನೀನು ಭದ್ರ ತೋಟವೂ ಬೇಲಿಯೊಳಗಿನ ಬುಗ್ಗೆಯೂ
ಮುದ್ರಿಸಿದ ಬಾವಿಯೂ ಆಗಿರುವೆ.
13 ನಿನ್ನ ತೋಟದಲ್ಲಿ ದಾಳಿಂಬೆ ವನವೂ
ಫಲಕೊಡುವ ಉತ್ತಮ ಗಿಡಗಳೂ
ಕರ್ಪೂರವೂ ಜಟಾಮಾಂಸಿಯೂ ಇವೆ.
14 ಜಟಾಮಾಂಸಿ ಅಷ್ಟೇ ಅಲ್ಲದೆ ಕೇಸರಿಯೂ
ಬಜೆಯೂ ದಾಲ್ಚಿನ್ನಿಯೂ
ಸಕಲ ಸಾಂಬ್ರಾಣಿ ಗಿಡಮೂಲಿಕೆಗಳೂ
ರಕ್ತಬೋಳವೂ ಅಗರೂ
ಸಕಲವಿಧ ಶ್ರೇಷ್ಠ ಸುಗಂಧ ದ್ರವ್ಯಗಳೂ ಬೆಳೆದಿವೆ.
15 ನೀನು ತೋಟದ ಬುಗ್ಗೆಯೂ
ಉಕ್ಕಿಬರುವ ಒರತೆಯೂ
ಲೆಬನೋನಿನಿಂದ ಹರಿಯುವ ಹೊಳೆಯೂ ಆಗಿರುವೆ.
ಪ್ರಿಯತಮೆ
16 ಉತ್ತರಗಾಳಿಯೇ, ಬೀಸು,
ದಕ್ಷಿಣ ಗಾಳಿಯೇ ಬಾ
ನನ್ನ ತೋಟದ ಮೇಲೆ ಬೀಸು.
ಸುಗಂಧ ಸುವಾಸನೆ ಹರಡಲಿ.
ನನ್ನ ಪ್ರಿಯನು ತನ್ನ ತೋಟಕ್ಕೆ ಬಂದು ಉತ್ತಮ ಫಲಗಳನ್ನು ರುಚಿಸಲಿ.

<- ಪರಮಗೀತೆ 3ಪರಮಗೀತೆ 5 ->