5 ನಾವು ಕ್ರಿಸ್ತ ಯೇಸುವಿನೊಂದಿಗೆ ಸೇರಿ ಅವರ ಮರಣದಲ್ಲಿ ಪಾಲುಗಾರರಾದರೆ, ಅವರ ಪುನರುತ್ಥಾನದಲ್ಲಿಯೂ ಪಾಲುಗಾರರಾಗುವೆವು. 6 ನಮ್ಮ ಪಾಪದ ಶರೀರವು ನಾಶವಾಗಿ ನಾವು ಇನ್ನು ಮುಂದೆ ಎಂದಿಗೂ ಪಾಪಕ್ಕೆ ಗುಲಾಮರಾಗದಂತೆ, ನಮ್ಮ ಹಳೆಯ ಮನುಷ್ಯ ಸ್ವಭಾವ ಯೇಸುವಿನೊಂದಿಗೆ ಶಿಲುಬೆಗೆ ಹಾಕಲಾಯಿತು ಎಂದು ನಾವು ಬಲ್ಲೆವು. 7 ಮರಣ ಹೊಂದಿರುವ ಯಾರೇ ಆದರೂ ಪಾಪದಿಂದ ಮುಕ್ತರಾಗಿರುತ್ತಾರೆ.
8 ನಾವು ಈಗ ಕ್ರಿಸ್ತ ಯೇಸುವಿನೊಂದಿಗೆ ಸತ್ತಿರುವುದಾದರೆ, ಅವರೊಂದಿಗೆ ಬದುಕುವೆವು ಎಂದು ನಂಬುತ್ತೇವೆ. 9 ಕ್ರಿಸ್ತ ಯೇಸು ಮರಣದಿಂದ ಜೀವಿತರಾಗಿ ಎದ್ದು ಬಂದದ್ದರಿಂದ ಅವರು ಪುನಃ ಸಾಯಲಾರರೆಂದು ಬಲ್ಲೆವು. ಇನ್ನು ಮುಂದೆ ಅವರ ಮೇಲೆ ಮರಣಕ್ಕೆ ಅಧಿಕಾರವಿಲ್ಲ. 10 ಕ್ರಿಸ್ತ ಯೇಸು ಪಾಪದ ಪಾಲಿಗೆ ಸತ್ತದ್ದೂ ಒಂದೇ ಸಾರಿಯಾಗಿರುತ್ತದೆ. ಆದರೆ, ಅವರು ಜೀವಿಸುವ ಜೀವಿತವು ದೇವರಿಗಾಗಿಯೇ.
11 ಅದೇ ರೀತಿಯಲ್ಲಿ, ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ಕ್ರಿಸ್ತ ಯೇಸುವಿನಲ್ಲಿ ದೇವರಿಗಾಗಿ ಜೀವಿಸುವವರೆಂದೂ ಎಣಿಸಿಕೊಳ್ಳಿರಿ. 12 ಆದ್ದರಿಂದ ನೀವು ದೇಹದ ಆಶೆಗಳಿಗೆ ಒಳಗಾಗದಂತೆ ನಿಮ್ಮ ನಶ್ವರ ದೇಹಗಳಲ್ಲಿ ಪಾಪವು ಅಧಿಕಾರ ನಡೆಸಲು ಬಿಡಬೇಡಿರಿ. 13 ನಿಮ್ಮ ದೇಹದ ಅವಯವಗಳನ್ನು ಅನೀತಿಯನ್ನು ನಡೆಸುವ ಸಾಧನಗಳಾಗುವಂತೆ ಪಾಪಕ್ಕೆ ಒಪ್ಪಿಸಬೇಡಿರಿ. ಆದರೆ ಅದರ ಬದಲಾಗಿ ಮರಣದಿಂದ ಜೀವಕ್ಕೆ ಬಂದವರಂತೆ ನಿಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳಿರಿ. ನಿಮ್ಮ ದೇಹದ ಅವಯವಗಳನ್ನು ನೀತಿಯ ಸಾಧನಗಳಾಗಿರುವುದಕ್ಕಾಗಿ ದೇವರಿಗೆ ಸಮರ್ಪಿಸಿರಿ. 14 ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು; ಏಕೆಂದರೆ ನೀವು ನಿಯಮಕ್ಕೆ ಅಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಿ.
19 ನೀವು ಶರೀರಭಾವದಲ್ಲಿ ಬಲಹೀನರಾಗಿರುವುದರಿಂದ ನಾನು ಮಾನವ ಮಾತುಗಳಲ್ಲಿ ಇದನ್ನು ಹೇಳುತ್ತಿದ್ದೇನೆ. ನಿಮ್ಮ ದೇಹದ ಅವಯವಗಳನ್ನು ಅಶುದ್ಧತೆಗೂ ಅಧರ್ಮಕ್ಕೂ ದಾಸತ್ವದಲ್ಲಿ ಒಪ್ಪಿಸಿ ಕೊಡುತ್ತಿದ್ದಂತೆಯೇ ನೀವು ಈಗ ಅವುಗಳನ್ನು ಪರಿಶುದ್ಧತೆಗೆ ನಡೆಸುವ ನೀತಿಗೆ ಗುಲಾಮರಾಗಿ ಒಪ್ಪಿಸಿರಿ. 20 ನೀವು ಪಾಪಕ್ಕೆ ಗುಲಾಮರಾಗಿದ್ದಾಗ ನೀತಿಗೆ ಅಧೀನರಾಗಿರಲಿಲ್ಲ. 21 ಆದ್ದರಿಂದ ಈಗ ನೀವು ನಾಚಿಕೆ ಪಟ್ಟುಕೊಳ್ಳುತ್ತಿರುವ ಸಂಗತಿಗಳಿಂದ ನಿಮಗಾದ ಲಾಭವೇನು? ಅವು ಮರಣದಲ್ಲಿ ಸಮಾಪ್ತವಾಗುತ್ತವೆ! 22 ಆದರೆ ಈಗ ನೀವು ಪಾಪದಿಂದ ಬಿಡುಗಡೆ ಹೊಂದಿದವರಾಗಿ ದೇವರಿಗೆ ಗುಲಾಮರಾಗಿರುವುದರಿಂದ, ಪವಿತ್ರವಾಗಿರುವುದೇ ನಿಮಗೆ ದೊರಕುವ ಫಲವು. ಕಡೆಗೆ ದೊರೆಯುವಂಥದು ನಿತ್ಯಜೀವವಾಗಿರುತ್ತದೆ. 23 ಏಕೆಂದರೆ ಪಾಪವು ಕೊಡುವ ಸಂಬಳ ಮರಣ, ದೇವರ ಉಚಿತ ವರವಾದರೋ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ಇರುವ ನಿತ್ಯಜೀವ.
<- ರೋಮಾಪುರದವರಿಗೆ 5ರೋಮಾಪುರದವರಿಗೆ 7 ->