Link to home pageLanguagesLink to all Bible versions on this site
12
ಸಜೀವ ಯಜ್ಞಗಳು
1 ಆದ್ದರಿಂದ, ಪ್ರಿಯರೇ ದೇವರ ಕರುಣೆಯಿಂದ ಬೇಡಿಕೊಳ್ಳುವುದೇನೆಂದರೆ, ನೀವು ನಿಮ್ಮ ದೇಹಗಳನ್ನು ದೇವರಿಗೆ ಪರಿಶುದ್ಧವೂ ಮೆಚ್ಚುಗೆಯೂ ಆಗಿರುವ ಸಜೀವ ಯಜ್ಞವಾಗಿ ಸಮರ್ಪಿಸಿರಿ. ಇದೇ ನಿಮ್ಮ ವಿವೇಕ ಪೂರ್ವಕವಾದ ಆರಾಧನೆಯು. 2 ಈ ಲೋಕದ ನಡುವಳಿಕೆಯನ್ನು ಹೊಂದಿಕೊಳ್ಳದೇ, ನಿಮ್ಮ ಮನಸ್ಸನ್ನು ರೂಪಾಂತರಿಸಿಕೊಂಡು ನವೀಕರಿಸಿಕೊಳ್ಳಿರಿ. ಆಗ ನೀವು ಉತ್ತಮವಾದ, ಮೆಚ್ಚುಗೆಯಾಗಿರುವಂಥ ಮತ್ತು ಪರಿಪೂರ್ಣವಾದ ದೇವರ ಚಿತ್ತ ಯಾವುದು ಎಂಬುದನ್ನು ತಿಳಿದುಕೊಳ್ಳುವಿರಿ.
ಕ್ರಿಸ್ತನ ದೇಹದಲ್ಲಿನ ದೀನಸೇವೆ
3 ನನಗೆ ದಯಪಾಲಿಸಿರುವ ಕೃಪೆಯಿಂದ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಾನು ಹೇಳುವುದೇನೆಂದರೆ, ನೀವು ಭಾವಿಸುವುದಕ್ಕಿಂತ ಹೆಚ್ಚಾಗಿ ಯಾರೂ ನಿಮ್ಮನ್ನು ನೀವೇ ಉನ್ನತವಾಗಿ ಭಾವಿಸಿಕೊಳ್ಳಬೇಡಿರಿ. ಅದರ ಬದಲಾಗಿ ದೇವರು ನಿಮಗೆ ಅನುಗ್ರಹಿಸಿರುವ ವಿಶ್ವಾಸದ ಅಳತೆಗೆ ಅನುಸಾರವಾಗಿ ಸ್ವಸ್ಥಚಿತ್ತವುಳ್ಳವರಾಗಿ ಭಾವಿಸಿಕೊಳ್ಳಿರಿ. 4 ನಮ್ಮಲ್ಲಿ ಪ್ರತಿಯೊಬ್ಬನಿಗೂ ಅನೇಕ ಅಂಗಗಳಿಂದ ಕೂಡಿದ ಒಂದು ದೇಹವಿರುವ ಹಾಗೆಯೇ ಮತ್ತು ಹೇಗೆ ಈ ಅಂಗಾಂಗಗಳಿಗೆಲ್ಲಾ ಒಂದೇ ಕೆಲಸವಿರುವುದ್ಲಿಲವೋ, 5 ಅದೇ ರೀತಿಯಲ್ಲಿ, ಅನೇಕರಾಗಿರುವ ನಾವು ಕ್ರಿಸ್ತನಲ್ಲಿ ಒಂದೇ ದೇಹವಾಗುತ್ತೇವೆ ಮತ್ತು ಪ್ರತಿಯೊಬ್ಬನೂ ಒಬ್ಬರಿಗೊಬ್ಬರು ಅಂಗಗಳಾಗಿರುತ್ತೇವೆ. 6 ನಮಗೆ ಕೊಟ್ಟಿರುವ ದೇವರ ಕೃಪೆಗೆ ಅನುಸಾರವಾಗಿ ನಮಗೆ ಬೇರೆ ಬೇರೆ ವರಗಳಿರುತ್ತವೆ. ಒಬ್ಬನಿಗೆ ಪ್ರವಾದನಾ ವರವಾಗಿದ್ದರೆ, ಅದನ್ನು ಅವನ ವಿಶ್ವಾಸದ ಅಳತೆಗೆ ತಕ್ಕ ರೀತಿಯಲ್ಲಿ ಉಪಯೋಗಿಸಲಿ. 7 ಅದು ಇತರರಿಗೆ ಸೇವೆ ಸಲ್ಲಿಸುವುದಾಗಿದ್ದರೆ, ಅದನ್ನು ಇತರರಿಗೆ ಸೇವೆ ಸಲ್ಲಿಸುವುದರಲ್ಲಿ ಉಪಯೋಗಿಸಲಿ. ಅದು ಬೋಧಿಸುವ ವರವಾಗಿದ್ದರೆ, ಅವನು ಬೋಧಿಸಲಿ. 8 ಅದು ಪ್ರೋತ್ಸಾಹಗೊಳಿಸುವುದಾಗಿದ್ದರೆ, ಅವನು ಪ್ರೋತ್ಸಾಹಗೊಳಿಸಲಿ. ದಾನಕೊಡುವ ವರವಾಗಿದ್ದರೆ, ಅವನು ಧಾರಾಳವಾಗಿ ಕೊಡಲಿ. ನಾಯಕತ್ವ ವಹಿಸುವ ವರವಾಗಿದ್ದರೆ, ಅವನು ಶ್ರದ್ಧೆಯಿಂದ ಮಾಡಲಿ ದಯೆ ತೋರಿಸುವ ವರವಾಗಿದ್ದರೆ ಅದನ್ನು ಅವನು ಸಂತೋಷದಿಂದ ಮಾಡಲಿ.
ಪ್ರೀತಿ
9 ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿ ಒಳ್ಳೆಯದಕ್ಕೆ ಅಂಟಿಕೊಳ್ಳಿರಿ. 10 ಒಬ್ಬರಿಗೊಬ್ಬರು ಸಹೋದರ ಪ್ರೀತಿಯಲ್ಲಿ ಸಮರ್ಪಿತರಾಗಿರಿ. ಗೌರವಿಸುವುದರಲ್ಲಿ ಒಬ್ಬರಿಗೊಬ್ಬರು ಮುಂದಾಗಿರಿ. 11 ಉತ್ಸಾಹದಲ್ಲಿ ಆಲಸ್ಯರಾಗದೆ, ಆತ್ಮದಲ್ಲಿ ಬೆಂಕಿಯುಳ್ಳವರಾಗಿ ಕರ್ತನ ಸೇವೆಯನ್ನು ಮಾಡಿರಿ. 12 ನಿರೀಕ್ಷೆಯಲ್ಲಿ ಸಂತೋಷವುಳ್ಳವರೂ ಸಂಕಟಗಳಲ್ಲಿ ಸಹನೆಯುಳ್ಳವರೂ ಪ್ರಾರ್ಥನೆಯಲ್ಲಿ ದೃಢಮನಸ್ಸುಳ್ಳವರೂ ಆಗಿ ಮುಂದುವರಿಯಿರಿ. 13 ಕೊರತೆ ಇರುವ ದೇವಜನರೊಂದಿಗೆ ನಿಮಗೆ ಇರುವುದನ್ನು ಹಂಚಿಕೊಳ್ಳಿರಿ, ಅತಿಥಿ ಸತ್ಕಾರವನ್ನು ಮಾಡುತ್ತಾ ಇರಿ.

14 ನಿಮ್ಮನ್ನು ಹಿಂಸಿಸುವರನ್ನು ಆಶೀರ್ವದಿಸಿರಿ, ಶಪಿಸಬೇಡಿರಿ. 15 ಸಂತೋಷ ಪಡುವವರೊಂದಿಗೆ ಸಂತೋಷಪಡಿರಿ, ಅಳುವವರೊಂದಿಗೆ ಅಳಿರಿ. 16 ಒಬ್ಬರಿಗೊಬ್ಬರು ಒಂದೇ ಮನಸ್ಸುಳ್ಳವರಾಗಿರಿ. ನೀವು ಮನಸ್ಸಿನಲ್ಲಿ ಅಹಂಕಾರಿಗಳಾಗಿರದೆ, ದೀನರೊಂದಿಗೆ ಸಂತೋಷದಿಂದ ಸಹಭಾಗಿಗಳಾಗಿರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಭಾವಿಸಿಕೊಳ್ಳಬೇಡಿರಿ.

17 ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿಯೂ ಒಳ್ಳೆಯದನ್ನು ಮಾಡಿರಿ. 18 ಸಾಧ್ಯವಾದರೆ, ನಿಮ್ಮಿಂದ ಆದಷ್ಟು ಎಲ್ಲರೊಂದಿಗೂ ಸಮಾಧಾನದಿಂದಿರಿ. 19 ಪ್ರಿಯರೇ, ಮುಯ್ಯಿಗೆ ಮುಯ್ಯಿ ತೀರಿಸದೆ, ಅದನ್ನು ದೇವರ ಕೋಪಕ್ಕೆ ಬಿಟ್ಟುಬಿಡಿರಿ. ಏಕೆಂದರೆ, “ಮುಯ್ಯಿ ತೀರಿಸುವುದು ನನಗೆ ಸೇರಿದ್ದು. ನಾನು ಅದನ್ನು ತೀರಿಸುವೆನು,*ಧರ್ಮೋ 32:35 ಎಂದು ಕರ್ತನು ಹೇಳುತ್ತಾರೆ,” ಎಂದು ಪವಿತ್ರ ವೇದದಲ್ಲಿ ಬರೆಯಲಾಗಿದೆ.

20 “ಆದರೆ, ನಿನ್ನ ವೈರಿಯು ಹಸಿದಿದ್ದರೆ, ಅವನಿಗೆ ಆಹಾರ ಕೊಡು,
ಅವನು ಬಾಯಾರಿದ್ದರೆ ಕುಡಿಯಲು ಕೊಡು.
ಹೀಗೆ ಮಾಡುವುದರಿಂದ ನೀನು ಅವನ ತಲೆಯ ಮೇಲೆ ಉರಿಯುವ ಕೆಂಡವನ್ನು ಸುರಿದಂತಾಗುವುದು.”ಜ್ಞಾನೋಕ್ತಿ 25:21,22
21 ಕೆಟ್ಟದ್ದಕ್ಕೆ ಸೋಲಬೇಡಿರಿ, ಕೆಟ್ಟದ್ದನ್ನು ಒಳ್ಳೆಯದರಿಂದ ಜಯಿಸಿರಿ.

<- ರೋಮಾಪುರದವರಿಗೆ 11ರೋಮಾಪುರದವರಿಗೆ 13 ->