Link to home pageLanguagesLink to all Bible versions on this site
ಕೀರ್ತನೆ 88
ದುಃಖದಲ್ಲಿ ಮುಳುಗಿರುವವನ ಮೊರೆ; ಕೋರಹೀಯರ ಕೀರ್ತನೆ; ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ; ಮಹಲಾತ್ ಎಂಬ ರಾಗದ ಪ್ರಕಾರ ಹಾಡತಕ್ಕದ್ದು. ಮಸ್ಕೀಲ್ ರಾಗದಲ್ಲಿ ಜೇರಹ ಕುಲದವನಾದ ಹೇಮಾನನ ಪದ್ಯ.
1 ನನ್ನನ್ನು ರಕ್ಷಿಸುವ ದೇವರಾದ ಯೆಹೋವ ದೇವರೇ,
ಹಗಲಿರುಳು ನಿಮ್ಮ ಮುಂದೆ ಮೊರೆಯಿಡುತ್ತೇನೆ.
2 ನನ್ನ ಪ್ರಾರ್ಥನೆಯು ನಿಮ್ಮ ಮುಂದೆ ಬರಲಿ.
ನನ್ನ ಮೊರೆಗೆ ನಿಮ್ಮ ಕಿವಿಕೊಡಿರಿ.
 
3 ನನ್ನ ಪ್ರಾಣವು ಕಷ್ಟದಿಂದ ತುಂಬಿದೆ;
ನನ್ನ ಜೀವವು ಸಮಾಧಿಯ ಸಮೀಪಕ್ಕೆ ಎಳೆಯುತ್ತದೆ.
4 ಸಮಾಧಿ ಸೇರುವವರ ಸಂಗಡ ಎಣಿಸಲಾಗಿದ್ದೇನೆ;
ನಾನು ಬಲವಿಲ್ಲದ ಪುರುಷನ ಹಾಗಿದ್ದೇನೆ.
5 ಹತರಾದವರು ಸಮಾಧಿಯಲ್ಲಿ ಮಲಗಿದಂತೆ
ನಾನೂ ಸತ್ತವರೊಂದಿಗೆ ಸೇರಿರುತ್ತೇನೆ.
ಅವರನ್ನು ನೀನೆಂದೂ ಜ್ಞಾಪಿಸಿಕೊಳ್ಳುವುದಿಲ್ಲ.
ನಿಮ್ಮ ಪರಿಪಾಲನೆಯಿಂದ ದೂರವಾಗಿದ್ದಾರೆ.
 
6 ಅಧೋಲೋಕದಲ್ಲಿಯೂ ಗಾಡಾಂಧಕಾರದಲ್ಲಿಯೂ
ಅಗಾಧಗಳಲ್ಲಿಯೂ ನನ್ನನ್ನು ಇಟ್ಟಿದ್ದೀರಿ.
7 ನಿಮ್ಮ ಬೇಸರವು ನನ್ನ ಮೇಲೆ ಭಾರವಾಗಿದೆ.
ನಿಮ್ಮ ಅಲೆಗಳಿಂದೆಲ್ಲಾ ನನ್ನನ್ನು ಮುಳುಗಿಸಿದ್ದೀರಿ.
8 ನನ್ನ ಪರಿಚಿತರನ್ನು ನನ್ನಿಂದ ದೂರಮಾಡಿದ್ದೀರಿ.
ನಾನು ಅವರಿಗೆ ಬೇಡವಾಗಿದ್ದೇನೆ.
ನಾನು ಬಂಧಿತನಾಗಿದ್ದೇನೆ, ಹೊರಗೆ ಬರಲಾರೆನು.
9 ಬಾಧೆಯ ದೆಸೆಯಿಂದ ನನ್ನ ಕಣ್ಣು ಮಂದವಾಗಿ ಹೋಗಿದೆ.
 
ಯೆಹೋವ ದೇವರೇ, ದಿನವೆಲ್ಲಾ ನಿಮ್ಮನ್ನು ಕರೆಯುತ್ತೇನೆ.
ನಾನು ನಿಮ್ಮ ಕಡೆಗೆ ನನ್ನ ಕೈಗಳನ್ನು ಚಾಚುತ್ತೇನೆ.
10 ಸತ್ತವರಿಗೆ ಅದ್ಭುತಗಳನ್ನು ತೋರಿಸುವಿರೋ?
ಸತ್ತವರು ಎದ್ದು ನಿಮ್ಮನ್ನು ಕೊಂಡಾಡುವರೋ?
11 ಸಮಾಧಿಯಲ್ಲಿ ನಿಮ್ಮ ಪ್ರೀತಿ ಸಾರಲಾಗುವುದೇ?
ನಾಶನ ಸ್ಥಳದಲ್ಲಿ ನಿಮ್ಮ ನಂಬಿಗಸ್ತಿಕೆಯು ಹೇಳಲಾಗುವುದೋ?
12 ಕತ್ತಲೆಯಲ್ಲಿ ನಿಮ್ಮ ಅದ್ಭುತಗಳೂ ಮರೆತುಹೋಗಿರುವ ದೇಶದಲ್ಲಿ
ನಿಮ್ಮ ನೀತಿಯೂ ತಿಳಿಯಲಾಗುವುದೋ?
 
13 ಆದರೆ ನಾನು ಯೆಹೋವ ದೇವರೇ, ನಿಮ್ಮ ಕಡೆಗೆ ಮೊರೆಯಿಡುತ್ತೇನೆ.
ಉದಯಕಾಲದಲ್ಲಿ ನನ್ನ ಪ್ರಾರ್ಥನೆಯು ನಿಮ್ಮನ್ನು ಎದುರುಗೊಳ್ಳುವುದು.
14 ಯೆಹೋವ ದೇವರೇ, ನೀವೇಕೆ ನನ್ನನ್ನು ತಳ್ಳಿಬಿಟ್ಟಿದ್ದೀರಿ.
ನನಗೆ ನಿಮ್ಮ ಮುಖ ಮರೆಮಾಡುತ್ತೀರಿ?
 
15 ಬಾಲ್ಯದಿಂದಲೂ ನಾನು ಬಾಧಿತನು ಸಾಯುವುದಕ್ಕೆ ಸಿದ್ಧನೂ ಆಗಿದ್ದೇನೆ.
ನಿಮ್ಮ ದಂಡನೆಯನ್ನು ನಾನು ತಾಳುತ್ತಾ ಭ್ರಮೆಗೊಳ್ಳುತ್ತೇನೆ.
16 ನನ್ನ ಮೇಲೆ ನಿಮ್ಮ ಬೇಸರವು ಆವರಿಸಿದೆ.
ನಿಮ್ಮ ದಂಡನೆಗಳು ನನ್ನನ್ನು ಬಾಧಿಸಿರುತ್ತವೆ.
17 ಪ್ರವಾಹಗಳ ಹಾಗೆ ಅವು ಬಂದು ನನ್ನನ್ನು ದಿನವೆಲ್ಲಾ ಸುತ್ತಿಕೊಳ್ಳುತ್ತವೆ;
ಅವು ಸಂಪೂರ್ಣವಾಗಿ ನನ್ನನ್ನು ಮುತ್ತಿಕೊಳ್ಳುತ್ತವೆ.
18 ನನ್ನ ಆಪ್ತಮಿತ್ರರನ್ನು ದೂರ ಮಾಡಿದಿರಿ.
ಅಂಧಕಾರವೇ ನನ್ನ ಪರಿಚಯವು.

<- ಕೀರ್ತನೆಗಳು 87ಕೀರ್ತನೆಗಳು 89 ->