Link to home pageLanguagesLink to all Bible versions on this site
ಕೀರ್ತನೆ 71
1 ಯೆಹೋವ ದೇವರೇ, ನಿಮ್ಮಲ್ಲಿಯೇ ನಾನು ನನ್ನ ಭರವಸೆಯನ್ನಿಟ್ಟಿದ್ದೇನೆ.
ನನಗೆ ಎಂದೂ ಆಶಾಭಂಗವಾಗದಿರಲಿ.
2 ನಿಮ್ಮ ನೀತಿಯಿಂದ ನನ್ನನ್ನು ಬಿಡಿಸಿ, ನನ್ನನ್ನು ಪಾರುಮಾಡಿರಿ.
ನಿಮ್ಮ ಕಿವಿಯನ್ನು ನನ್ನ ಕಡೆಗೆ ತಿರುಗಿಸಿ, ನನ್ನನ್ನು ರಕ್ಷಿಸಿರಿ.
3 ನಾನು ಯಾವಾಗಲೂ ಆಶ್ರಯಿಸಿಕೊಳ್ಳುವ ಬಂಡೆಯಾಗಿರಿ.
ನನ್ನನ್ನು ರಕ್ಷಿಸುವುದಕ್ಕೆ ಆಜ್ಞಾಪಿಸಿರಿ.
ನನ್ನ ಬಂಡೆಯೂ
ನನ್ನ ಕೋಟೆಯೂ ನೀವೇ ಆಗಿದ್ದೀರಿ.
4 ನನ್ನ ದೇವರೇ, ದುಷ್ಟನ ಕೈಗೂ
ಅನ್ಯಾಯ ಮಾಡುವವನ ಮತ್ತು ಕ್ರೂರನ ಕೈಗೂ ನನ್ನನ್ನು ಸಿಕ್ಕಿಸದಿರಿ.
 
5 ಸಾರ್ವಭೌಮ ಯೆಹೋವ ದೇವರೇ, ನೀವು ನನ್ನ ನಿರೀಕ್ಷೆ ಆಗಿದ್ದೀರಿ.
ನನ್ನ ಯೌವನದಿಂದ ನನ್ನ ಭರವಸೆಯೂ ಆಗಿದ್ದೀರಿ.
6 ಹುಟ್ಟಿನಿಂದ ನೀವೇ ನನ್ನ ಭರವಸೆ.
ತಾಯಿಯ ಗರ್ಭದಿಂದ ನೀವೇ ನನ್ನನ್ನು ಹೊರಗೆ ತಂದಿದ್ದೀರಿ.
ನಾನು ಯಾವಾಗಲೂ ನಿಮ್ಮನ್ನು ಸ್ತುತಿಸುತ್ತಿರುವೆನು.
7 ಅನೇಕರು ನನ್ನ ಸ್ಥಿತಿಯನ್ನು ಕಂಡು ಆಶ್ಚರ್ಯ ಪಡುತ್ತಾರೆ.
ಆದರೆ ನೀವು ನನ್ನ ಬಲವಾದ ಆಶ್ರಯವಾಗಿದ್ದೀರಿ.
8 ನನ್ನ ಬಾಯಿ ನಿಮ್ಮ ಸ್ತೋತ್ರದಿಂದ ತುಂಬಿರಲಿ.
ನಾನು ದಿನವೆಲ್ಲಾ ನಿಮ್ಮ ವೈಭವವನ್ನೇ ಸಾರುತ್ತಿರುವೆ.
 
9 ನನ್ನ ಮುಪ್ಪಿನ ಕಾಲದಲ್ಲಿ ನನ್ನನ್ನು ತಳ್ಳಿಬಿಡಬೇಡಿರಿ.
ನನ್ನ ಶಕ್ತಿಯು ಕುಂದುತ್ತಿರುವಾಗ ನನ್ನನ್ನು ಕೈಬಿಡಬೇಡಿರಿ.
10 ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ;
ನನ್ನ ಪ್ರಾಣಕ್ಕೆ ಒಳಸಂಚು ಮಾಡುವವರು ಕೂಡಿಕೊಂಡು ದುರಾಲೋಚನೆ ಮಾಡುತ್ತಾರೆ.
11 ಅದೇನೆಂದರೆ, “ದೇವರು ಅವನನ್ನು ಕೈಬಿಟ್ಟಿದ್ದಾನೆ.
ಅವನನ್ನು ಬೆನ್ನಟ್ಟಿ ಹಿಡಿಯಿರಿ,
ಅವನನ್ನು ಬಿಡಿಸುವವರು ಯಾರೂ ಇಲ್ಲ,” ಎನ್ನುತ್ತಾರೆ.
12 ದೇವರೇ, ನನ್ನಿಂದ ದೂರವಾಗಿರಬೇಡಿರಿ.
ದೇವರೇ, ಬೇಗ ಬಂದು ನನಗೆ ಸಹಾಯಮಾಡಿರಿ.
13 ನನ್ನನ್ನು ಆರೋಪಿಸುವವರು,
ನಾಚಿಕೆಪಟ್ಟು ನಾಶವಾಗಲಿ.
ನನ್ನ ಕೇಡಿಗಾಗಿ ಹುಡುಕುವವರನ್ನು ನಿಂದಾಪಮಾನಗಳು ಕವಿಯಲಿ.
 
14 ಆದರೆ ನಾನು ಎಂದೆಂದೂ ನಿಮ್ಮನ್ನು ನಿರೀಕ್ಷಿಸುತ್ತಾ,
ನಿಮ್ಮನ್ನು ಇನ್ನೂ ಹೆಚ್ಚೆಚ್ಚಾಗಿ ಸ್ತುತಿಸುವೆನು.
 
15 ನನ್ನ ಬಾಯಿ ದಿನವೆಲ್ಲಾ ನಿಮ್ಮ ನೀತಿಯನ್ನೂ
ನಿಮ್ಮ ರಕ್ಷಣೆಯನ್ನೂ ಪ್ರಕಟಿಸುವುದು.
ಅವುಗಳನ್ನು ವಿವರಿಸಲು ನನಗೆ ತಿಳಿಯದು.
16 ಸಾರ್ವಭೌಮ ಯೆಹೋವ ದೇವರೇ ನಾನು ನಿಮ್ಮ ಮಹಾಕೃತ್ಯಗಳನ್ನು ಸಾರುವೆನು.
ನಿಮ್ಮ ನೀತಿ ಕೃತ್ಯಗಳನ್ನು ಪ್ರಕಟಪಡಿಸುವೆನು.
17 ದೇವರೇ, ನನ್ನ ಯೌವನದಿಂದ ನನಗೆ ನೀವು ಕಲಿಸಿದ್ದೀರಿ.
ಈವರೆಗೂ ನಿಮ್ಮ ಅದ್ಭುತಕಾರ್ಯಗಳನ್ನು ಘೋಷಿಸುತ್ತಿದ್ದೇನೆ.
18 ದೇವರೇ, ನಾನು ಮುಪ್ಪಿನವನೂ, ನೆರೆಕೂದಲಿನವನೂ ಆದಾಗ
ಈ ಸಂತತಿಯವರಿಗೆ ನಿಮ್ಮ ಶಕ್ತಿಯನ್ನೂ,
ಮುಂದಿನ ಪೀಳಿಗೆಗೆ ನಿಮ್ಮ ಪರಾಕ್ರಮವನ್ನೂ ತಿಳಿಸುವವರೆಗೂ
ನನ್ನನ್ನು ಕೈಬಿಡಬೇಡಿರಿ.
 
19 ದೇವರೇ, ನಿಮ್ಮ ನೀತಿಯು ಆಕಾಶವನ್ನು ಮುಟ್ಟುತ್ತದೆ.
ಮಹತ್ಕಾರ್ಯಗಳನ್ನು ಮಾಡಿದ ದೇವರೇ,
ನಿಮ್ಮ ಹಾಗೆ ಯಾರಿದ್ದಾರೆ?
20 ಅನೇಕ ಕಠಿಣವಾದ ಇಕ್ಕಟ್ಟುಗಳನ್ನು
ನೋಡ ಮಾಡಿದ ನನ್ನನ್ನು
ನೀವು ತಿರುಗಿ ಬದುಕಿಸಿದ್ದೀರಿ.
ಭೂಮಿಯ ಅಧೋಭಾಗದಿಂದ
ಪುನಃ ನನ್ನನ್ನು ಮೇಲಕ್ಕೆ ಎತ್ತುವಿರಿ.
21 ನೀವು ನನ್ನ ಗೌರವವನ್ನು ಹೆಚ್ಚಿಸಿ
ನನ್ನನ್ನು ಮತ್ತೊಮ್ಮೆ ಆದರಿಸಿರಿ.
 
22 ನನ್ನ ದೇವರೇ, ನಾನು ನಿಮ್ಮನ್ನು ಸ್ತುತಿಸುವೆನು.
ನಿಮ್ಮ ನಂಬಿಗಸ್ತಿಕೆಗಾಗಿ ವೀಣೆಯಿಂದ ಕೊಂಡಾಡುವೆನು.
ಇಸ್ರಾಯೇಲರ ಪರಿಶುದ್ಧರೇ,
ಕಿನ್ನರಿಯಿಂದ ನಿಮ್ಮನ್ನು ಸ್ತುತಿಸುವೆನು.
23 ನೀವು ನನ್ನನ್ನು ಬಿಡಿಸಿದ್ದಕ್ಕಾಗಿ
ನನ್ನ ತುಟಿಗಳು ಆನಂದದಿಂದ
ಹಾಡಿ ಸ್ತುತಿಸುತ್ತವೆ.
24 ನನ್ನ ನಾಲಿಗೆಯು ಸಹ ದಿನವೆಲ್ಲಾ
ನಿಮ್ಮ ನೀತಿಯನ್ನು ಮಾತನಾಡುವುದು,
ಏಕೆಂದರೆ ನನಗೆ ಕೇಡು ಬಗೆಯುವವರು
ನಾಚಿಕೊಂಡು ತಲೆ ತಗ್ಗಿಸಿದ್ದಾರೆ.

<- ಕೀರ್ತನೆಗಳು 70ಕೀರ್ತನೆಗಳು 72 ->