Link to home pageLanguagesLink to all Bible versions on this site
ಕೀರ್ತನೆ 62
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು; ದಾವೀದನ ಕೀರ್ತನೆ.
1 ದೇವರಲ್ಲಿಯೇ ನನ್ನ ಪ್ರಾಣಕ್ಕೆ ಶಾಂತಿ,
ನನ್ನ ರಕ್ಷಣೆಯು ದೇವರಿಂದಲೇ.
2 ದೇವರು ಮಾತ್ರವೇ ನನ್ನ ಬಂಡೆಯೂ ನನ್ನ ರಕ್ಷಣೆಯೂ,
ನನ್ನ ಕೋಟೆಯೂ ಆಗಿದ್ದಾರೆ. ನಾನೆಂದಿಗೂ ಕದಲೆನು.
 
3 ಹಾನಿಮಾಡುವವರೇ, ಎಷ್ಟರವರೆಗೆ ನೀವು ದಾಳಿಮಾಡುವಿರಿ.
ಬಾಗುವ ಗೋಡೆಯಂತೆಯೂ,
ಅಲ್ಲಾಡುವ ಬೇಲಿಯಂತೆಯೂ ನನ್ನನ್ನು ಕೆಡವಲು ಯತ್ನಿಸುವಿರಾ?
4 ಅವರು ನನ್ನನ್ನು ಉನ್ನತ ಸ್ಥಾನದಿಂದ ದಬ್ಬುವುದಕ್ಕೆ ಆಲೋಚಿಸುತ್ತಿದ್ದಾರೆ.
ಅವರು ಸುಳ್ಳನ್ನು ಇಷ್ಟಪಡುತ್ತಾರೆ;
ತಮ್ಮ ಬಾಯಿಂದ ಆಶೀರ್ವದಿಸಿ, ಹೃದಯದಲ್ಲಿ ಶಪಿಸುತ್ತಾರೆ.
 
5 ಹೌದು, ದೇವರಲ್ಲಿಯೇ ನನ್ನ ಪ್ರಾಣಕ್ಕೆ ಶಾಂತಿ.
ನನ್ನ ನಿರೀಕ್ಷೆಯು ದೇವರಿಂದಲೇ.
6 ದೇವರೇ ನನ್ನ ಬಂಡೆಯೂ ನನ್ನ ರಕ್ಷಣೆಯೂ,
ನನ್ನ ಕೋಟೆಯೂ ಆಗಿದ್ದಾರೆ. ನಾನೆಂದಿಗೂ ಕದಲೆನು.
7 ದೇವರು ನನ್ನ ರಕ್ಷಣೆಗೂ ನನ್ನ ಗೌರವಕ್ಕೂ ಆಧಾರವಾಗಿದ್ದಾರೆ.
ದೇವರು ನನ್ನ ಬಲವಾದ ಬಂಡೆಯೂ ನನ್ನ ಆಶ್ರಯವೂ ಆಗಿದ್ದಾರೆ.
8 ಜನರೇ, ಎಲ್ಲಾ ಕಾಲದಲ್ಲಿಯೂ ದೇವರಲ್ಲಿ ಭರವಸೆ ಇಡಿರಿ.
ನಿಮ್ಮ ಹೃದಯವನ್ನು ದೇವರ ಮುಂದೆ ಒಯ್ಯಿರಿ.
ದೇವರು ನಮಗೆ ಆಶ್ರಯವಾಗಿದ್ದಾರೆ.
 
9 ಸಾಮಾನ್ಯ ಜನರು ಬರೀ ಉಸಿರೇ,
ಉನ್ನತ ಜನರು ಬರೀ ಸುಳ್ಳೇ.
ತಕ್ಕಡಿಯಲ್ಲಿ ತೂಗಿದರೆ ಅವರೇನೂ ಇಲ್ಲ,
ಎಲ್ಲರೂ ಬರೀ ಉಸಿರೇ.
10 ಅನ್ಯಾಯದ ಸುಲಿಗೆಯಲ್ಲಿ
ಭರವಸೆ ಇಡಬೇಡಿರಿ.
ಸೂರೆಮಾಡಿದ್ದರಲ್ಲಿ ಗರ್ವಪಡಬೇಡಿರಿ.
ಆಸ್ತಿಯು ಹೆಚ್ಚಾದರೆ ಅದರ ಮೇಲೆ ಮನಸ್ಸಿಡಬೇಡಿರಿ.
 
11 ಒಂದು ಸಾರಿ ದೇವರು ಮಾತನಾಡಿದ್ದಾರೆ.
ನಾನು ಎರಡು ಸಾರಿ ಇದನ್ನು ಹೀಗೆಂದು ಕೇಳಿದ್ದೇನೆ:
“ದೇವರೇ, ಶಕ್ತಿಯು ನಿಮಗೇ ಸೇರಿದೆ.
12 ಯೆಹೋವ ದೇವರೇ, ನಿಮ್ಮಲ್ಲಿ ಒಡಂಬಡಿಕೆಯ ಪ್ರೀತಿ ಇದೆ.
ನೀವು ಪ್ರತಿ ಮನುಷ್ಯನಿಗೂ
ಅವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುತ್ತೀರಿ.”

<- ಕೀರ್ತನೆಗಳು 61ಕೀರ್ತನೆಗಳು 63 ->