Link to home pageLanguagesLink to all Bible versions on this site
ಕೀರ್ತನೆ 54
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ಜಿಫೆಂಬ ಸ್ಥಳದವರು ಸೌಲನ ಬಳಿಗೆ ಬಂದು ದಾವೀದನು ತಮ್ಮಲ್ಲೇ ಅಡಗಿಕೊಂಡಿದ್ದಾನೆಂದು ತಿಳಿಸಿದಾಗ, ಮಸ್ಕಿಲ್ ರಾಗದಲ್ಲಿ ದಾವೀದನು ರಚಿಸಿದ ಕೀರ್ತನೆ.
1 ದೇವರೇ, ನಿಮ್ಮ ಹೆಸರಿನಿಂದ ನನ್ನನ್ನು ರಕ್ಷಿಸಿರಿ.
ನಿಮ್ಮ ಬಲದಿಂದ ನನಗೆ ನ್ಯಾಯತೀರಿಸಿರಿ.
2 ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ.
ನನ್ನ ಬಾಯಿಯ ಮಾತಿಗೆ ಕಿವಿಕೊಡಿರಿ.
 
3 ಗರ್ವಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ.
ಕ್ರೂರಿಗಳು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ.
ಅವರು ದೇವರನ್ನು ಲಕ್ಷಿಸುವದೇ ಇಲ್ಲ.
 
4 ನಿಜವಾಗಿಯೂ ದೇವರು ನನ್ನ ಸಹಾಯಕರು.
ಯೆಹೋವ ದೇವರು ನನ್ನ ಪ್ರಾಣವನ್ನು ಕಾಪಾಡುವವರು.
 
5 ನನ್ನ ಕೆಡುಕನ್ನು ಬಯಸುವವರು ಕೇಡನ್ನು ಅನುಭವಿಸಲಿ.
ನಿಮ್ಮ ನಂಬಿಗಸ್ತಿಕೆಯಿಂದ ನೀವು ಅವರನ್ನು ದಂಡಿಸಿರಿ.
 
6 ನಾನು ನಿಮಗೆ ಸ್ವಂತ ಇಚ್ಛೆಯಿಂದ ಬಲಿಯನ್ನು ಅರ್ಪಿಸುವೆನು.
ಯೆಹೋವ ದೇವರೇ, ನಿಮ್ಮ ಒಳ್ಳೆಯ ಹೆಸರನ್ನು ಕೊಂಡಾಡುವೆನು.
7 ಏಕೆಂದರೆ ಎಲ್ಲಾ ಇಕ್ಕಟ್ಟಿನಿಂದ ನನ್ನನ್ನು ಬಿಡಿಸಿದ ದೇವರು ನೀವೇ.
ನನ್ನ ವೈರಿಗಳ ಮೇಲೆ ಜಯ ಸಾಧಿಸಿದ್ದನ್ನು ನಾನು ನೋಡುವೆನು.

<- ಕೀರ್ತನೆಗಳು 53ಕೀರ್ತನೆಗಳು 55 ->