Link to home pageLanguagesLink to all Bible versions on this site
ಭಾಗ 2
42
ಕೀರ್ತನೆಗಳು 42–72
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯರ ಮಕ್ಕಳ ಮಾಸ್ಕಿಲ[a] ಪದ್ಯ.
1 ದೇವರೇ, ಜಿಂಕೆಯು ನೀರಿನ ತೊರೆಗಳನ್ನು ಹೇಗೆ ಬಯಸುವುದೋ,
ಹಾಗೆಯೇ ನನ್ನ ಪ್ರಾಣವು ನಿಮ್ಮನ್ನು ಬಯಸುತ್ತದೆ.
2 ದೇವರಿಗೋಸ್ಕರ ಹೌದು ಜೀವವುಳ್ಳ ದೇವರಿಗೋಸ್ಕರ ನನ್ನ ಪ್ರಾಣವು ದಾಹಗೊಳ್ಳುತ್ತದೆ.
ನಾನು ಯಾವಾಗ ಹೋಗಿ ದೇವರ ಮುಂದೆ ಕಾಣಿಸಿಕೊಳ್ಳಲಿ?
3 “ನಿನ್ನ ದೇವರು ಎಲ್ಲಿ?” ಎಂದು ಜನರು,
ದಿನವೆಲ್ಲಾ ನನ್ನನ್ನು ಕೇಳುವುದರಿಂದ
ಹಗಲುರಾತ್ರಿ ನನ್ನ ಕಣ್ಣೀರೇ ನನಗೆ ಆಹಾರವಾಗಿದೆ.
4 ಜನಸಮೂಹದೊಂದಿಗೆ ನಾನು ಉತ್ಸಾಹದಿಂದಲೂ ಸ್ತೋತ್ರದಿಂದಲೂ
ಹಬ್ಬವನ್ನಾಚರಿಸಲು ದೇವರ ಆಲಯಕ್ಕೆ ಹೋಗಿದ್ದನ್ನು ನೆನಪಿಸಿಕೊಳ್ಳುತ್ತಾ
ನನ್ನೊಳಗೆ ನಾನೇ ಹಂಬಲಿಸುತ್ತಿರುವೆನು.
 
5 ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ?
ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ?
ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ.
ಹೌದು, ನಾನು
ದೇವರನ್ನೇ ಕೊಂಡಾಡುತ್ತಿರುವೆನು.
 
6 ನನ್ನ ದೇವರೇ, ನನ್ನ ಪ್ರಾಣವು ನನ್ನಲ್ಲಿ ಕುಗ್ಗಿಹೋಗಿದೆ;
ಆದ್ದರಿಂದ ಯೊರ್ದನ್ ನಾಡಿನಿಂದಲೂ
ಹೆರ್ಮೋನ್ ಬೆಟ್ಟಗಳಿಂದಲೂ
ಮಿಸಾರ್ ಬೆಟ್ಟದಿಂದಲೂ ನಿಮ್ಮನ್ನು ಜ್ಞಾಪಕಮಾಡಿಕೊಳ್ಳುತ್ತೇನೆ.
7 ನಿಮ್ಮ ಜಲಪಾತಗಳ ಶಬ್ದವು
ಒಂದು ಪ್ರವಾಹವು ಮತ್ತೊಂದು ಪ್ರವಾಹಕ್ಕೆ ಕರೆಯುವಂತಿದೆ.
ಅದರಂತೆಯೇ ನಿಮ್ಮ ಎಲ್ಲಾ ಅಲೆಗಳೂ ತೆರೆಗಳೂ
ನನ್ನ ಮೇಲೆ ಹಾದು ಹೋದಂತಿವೆ.
 
8 ಆದರೂ ಹಗಲಿನಲ್ಲಿ ಯೆಹೋವ ದೇವರು ತಮ್ಮ ಪ್ರೀತಿಯನ್ನು ಆಜ್ಞಾಪಿಸುವರು.
ರಾತ್ರಿಯಲ್ಲಿ ದೇವರ ಹಾಡನ್ನು ಹಾಡುವೆನು.
ನನ್ನ ಜೀವವಾಗಿರುವ ದೇವರಿಗೆ ನಾನು ಪ್ರಾರ್ಥನೆ ಮಾಡುವೆನು.
 
9 “ದೇವರೇ, ಏಕೆ ನನ್ನನ್ನು ಮರೆತುಬಿಟ್ಟಿದ್ದೀರಿ?
ಏಕೆ ನಾನು ಶತ್ರುವಿನ ಬಾಧೆಪೀಡಿತನಾಗಿ
ದುಃಖದಲ್ಲಿ ಸಾಗಬೇಕು?” ಎಂದು
ನನ್ನ ಶರಣನಾದ ದೇವರಿಗೆ ಮೊರೆಯಿಡುವೆನು.
10 “ನಿನ್ನ ದೇವರು ಎಲ್ಲಿ?”
ಎಂದು ದಿನವೆಲ್ಲಾ ನನಗೆ ಹೇಳಿ
ನನ್ನ ವೈರಿಗಳು ಅಪಹಾಸ್ಯ ಮಾಡುವುದರಿಂದ
ನನ್ನ ಎಲಬುಗಳೆಲ್ಲಾ ಮುರಿದುಹೊದಂತೆ ಇವೆ.
 
11 ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ?
ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ?
ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ.
ಹೌದು, ನಾನು
ದೇವರನ್ನೇ ಕೊಂಡಾಡುತ್ತಿರುವೆನು.

<- ಕೀರ್ತನೆಗಳು 41ಕೀರ್ತನೆಗಳು 43 ->