Link to home pageLanguagesLink to all Bible versions on this site
ಕೀರ್ತನೆ 41
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.
1 ಬಡವರನ್ನು ಪರಾಮರಿಸುವವರು ಧನ್ಯರು;
ಕೇಡಿನ ಸಮಯದಲ್ಲಿ ಯೆಹೋವ ದೇವರು ಅವರನ್ನು ತಪ್ಪಿಸುವರು.
2 ಯೆಹೋವ ದೇವರು ಅವರನ್ನು ಕಾಪಾಡಿ ಸುರಕ್ಷಿತವಾಗಿಡುವರು;
ಅವರು ಭೂಮಿಯಲ್ಲಿ ಧನ್ಯರಾಗಿರುವರು;
ದೇವರು ಅವರ ಶತ್ರುಗಳ ಇಚ್ಛೆಗೆ ಅವರನ್ನು ಒಪ್ಪಿಸಿಕೊಡರು.
3 ಬಡವರನ್ನು ಪರಾಮರಿಸುವವರನ್ನು ಯೆಹೋವ ದೇವರು ವ್ಯಾಧಿಯ ಮಂಚದಲ್ಲಿ ಬಲಪಡಿಸುವರು;
ಅವರ ಅಸ್ವಸ್ಥತೆಯನ್ನು ಯೆಹೋವ ದೇವರು ಹೋಗಲಾಡಿಸಿ ಮರುಸ್ಥಾಪಿಸುವರು.
 
4 “ಯೆಹೋವ ದೇವರೇ, ನನಗೆ ಕರುಣೆ ತೋರಿಸಿ ನನ್ನನ್ನು ಸ್ವಸ್ಥಮಾಡಿರಿ,
ಏಕೆಂದರೆ ನಿಮಗೆ ವಿರೋಧವಾಗಿ ಪಾಪಮಾಡಿದ್ದೇನೆ,”
ಎಂದು ನಾನು ಹೇಳಿ ಬೇಡುವೆನು.
5 “ಅವನು ಸತ್ತು ಅವನ ಹೆಸರು ನಾಶವಾಗುವುದು ಯಾವಾಗ?”
ಎಂದು ನನ್ನ ಶತ್ರುಗಳು ನನ್ನ ಕೇಡನ್ನು ಬಯಸಿ ಮಾತನಾಡುತ್ತಾರೆ.
6 ನನ್ನನ್ನು ನೋಡುವುದಕ್ಕೆ ಅವರಲ್ಲಿ ಒಬ್ಬನು ಬಂದರೆ, ಕಪಟವಾಗಿ ಮಾತನಾಡುತ್ತಾನೆ.
ಅವನ ಹೃದಯ ಕೇಡನ್ನು ಕೂಡಿಟ್ಟುಕೊಳ್ಳುತ್ತಿದೆ.
ಅವನು ಹೊರಗೆ ಹೋದ ಮೇಲೆ ಕೇಡನ್ನು ಹಬ್ಬಿಸುತ್ತಾನೆ.
 
7 ನನ್ನ ಶತ್ರುಗಳೆಲ್ಲರೂ ಸೇರಿ ನನ್ನ ಮೇಲೆ ಪಿಸುಗುಟ್ಟುತ್ತಾರೆ;
ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸುತ್ತಾರೆ.
8 “ಕೆಟ್ಟ ರೋಗವು ಅವನನ್ನು ಹಿಡಿದಿದೆ,
ಈಗ ಅವನು ಹಾಸಿಗೆ ಹಿಡಿದಿದ್ದಾನೆ ಎಂದಿಗೂ ಏಳುವುದಿಲ್ಲ,”
ಎಂದು ಹೇಳಿಕೊಳ್ಳುತ್ತಾರೆ.
9 ನನ್ನ ರೊಟ್ಟಿಯನ್ನು ತಿಂದವನೂ
ನಾನು ನಂಬಿದ್ದವನೂ
ಆಗಿರುವ ನನ್ನ ಆಪ್ತ ಸ್ನೇಹಿತನು ಸಹ
ನನಗೆ ವಿರೋಧವಾಗಿ ತನ್ನ ಕಾಲನ್ನು ಎತ್ತಿದ್ದಾನೆ.
 
10 ಆದರೆ ಯೆಹೋವ ದೇವರೇ, ನೀವು ನನ್ನನ್ನು ಕರುಣಿಸಿ ನಾನು ಏಳುವಂತೆ ಮಾಡಿರಿ.
ನಾನು ಅವರಿಗೆ ಮುಯ್ಯಿಗೆ ಮುಯ್ಯಿತೀರಿಸುವೆನು.
11 ನನ್ನ ಶತ್ರು ನನ್ನ ಮೇಲೆ ಜಯ ಹೊಂದದೆ ಇರುವುದರಿಂದಲೇ,
ನೀವು ನನ್ನನ್ನು ಮೆಚ್ಚಿದ್ದೀರಿ ಎಂದು ನಾನು ತಿಳಿದುಕೊಳ್ಳುವೆ.
12 ಆದರೆ ನೀವು ನನ್ನ ಪ್ರಾಮಾಣಿಕತೆಯ ಕಾರಣ ನನ್ನನ್ನು ಎತ್ತಿ ಹಿಡಿದಿರುವಿರಿ;
ನೀವು ನನ್ನನ್ನು ನಿತ್ಯವಾಗಿ ನಿಮ್ಮ ಸಮ್ಮುಖದಲ್ಲಿ ಇರಿಸುವಿರಿ.
 
 
13 ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರಿಗೆ,
ಯುಗಯುಗಕ್ಕೂ ಸ್ತುತಿಯಾಗಲಿ.
ಆಮೆನ್, ಆಮೆನ್.

<- ಕೀರ್ತನೆಗಳು 40ಕೀರ್ತನೆಗಳು 42 ->