Link to home pageLanguagesLink to all Bible versions on this site
ಕೀರ್ತನೆ 148
1 ಯೆಹೋವ ದೇವರನ್ನು ಸ್ತುತಿಸಿರಿ.
 
ಆಕಾಶ ಮಂಡಲದಿಂದ ಯೆಹೋವ ದೇವರಿಗೆ ಸ್ತುತಿ ಸಲ್ಲಲಿ!
ಮಹೋನ್ನತದ ದೇವರನ್ನು ಸ್ತುತಿಸಿರಿ.
2 ದೇವರ ದೂತರುಗಳೇ, ದೇವರನ್ನು ಸ್ತುತಿಸಿರಿ;
ದೇವರ ಪರಲೋಕದ ಎಲ್ಲಾ ಸೈನ್ಯಗಳೇ, ದೇವರನ್ನು ಸ್ತುತಿಸಿರಿ.
3 ಸೂರ್ಯ, ಚಂದ್ರರೇ, ದೇವರನ್ನು ಸ್ತುತಿಸಿರಿ;
ಬೆಳಕುಳ್ಳ ಎಲ್ಲಾ ನಕ್ಷತ್ರಗಳೇ, ದೇವರನ್ನು ಸ್ತುತಿಸಿರಿ.
4 ಉನ್ನತ ಆಕಾಶಗಳೇ, ಆಕಾಶಗಳ ಮೇಲೆ ಇರುವ
ಜಲಸಮೂಹವೇ, ದೇವರನ್ನು ಸ್ತುತಿಸಿರಿ.
 
5 ಯೆಹೋವ ದೇವರ ಹೆಸರನ್ನು ಅವು ಸ್ತುತಿಸಲಿ,
ಏಕೆಂದರೆ ದೇವರು ಆಜ್ಞಾಪಿಸಲು, ಅವು ನಿರ್ಮಿಸಲಾದವು.
6 ಅವುಗಳನ್ನು ಯುಗ ಯುಗಗಳಿಗೂ ಸ್ಥಾಪಿಸಿದ್ದಾರೆ;
ದೇವರು ತೀರ್ಪನ್ನು ಕೊಟ್ಟಿದ್ದಾರೆ, ಅದು ಮೀರಿ ಹೋಗುವುದಿಲ್ಲ.
 
7 ಭೂಮಿಯಿಂದ ಯೆಹೋವ ದೇವರನ್ನು ಸ್ತುತಿಸಿರಿ;
ಎಲ್ಲಾ ಅಗಾಧಗಳೇ,
8 ಮಿಂಚೇ, ಕಲ್ಮಳೆಯೇ, ಹಿಮವೇ, ಹಬೆಯೇ,
ದೇವರ ಮಾತನ್ನು ಕೇಳುವ ಬಿರುಗಾಳಿಯೇ,
9 ಬೆಟ್ಟಗಳೇ, ಎಲ್ಲಾ ಗುಡ್ಡಗಳೇ,
ಹಣ್ಣಿನ ಮರಗಳೇ, ಎಲ್ಲಾ ದೇವದಾರುಗಳೇ,
10 ಕಾಡುಮೃಗಗಳೇ, ಎಲ್ಲಾ ಪಶುಗಳೇ,
ಹರಿದಾಡುವ ಜೀವಜಂತುಗಳೇ, ಹಾರುವ ಪಕ್ಷಿಗಳೇ,
11 ಭೂರಾಜರೇ, ಎಲ್ಲಾ ಪ್ರಜೆಗಳೇ,
ಪ್ರಧಾನರೇ, ಭೂಮಿಯ ಎಲ್ಲಾ ನ್ಯಾಯಾಧಿಪತಿಗಳೇ,
12 ಪ್ರಾಯಸ್ಥರೇ, ಕನ್ಯೆಯರೇ,
ಮಕ್ಕಳೇ, ವೃದ್ಧರೇ.
 
13 ಯೆಹೋವ ದೇವರ ಹೆಸರನ್ನು ಸ್ತುತಿಸಿರಿ;
ಅವರ ಹೆಸರು ಮಾತ್ರ ಶ್ರೇಷ್ಠವಾಗಿದೆ;
ಅವರ ಮಹಿಮೆಯು ಭೂಮ್ಯಾಕಾಶಗಳನ್ನು ಆವರಿಸಿದೆ.
14 ದೇವರು ತಮ್ಮ ಜನರ ಬಲವನ್ನು ಮೇಲಕ್ಕೆತ್ತಿದ್ದಾರೆ.
ದೇವರ ಇಸ್ರಾಯೇಲರೆಲ್ಲರೂ,
ಭಕ್ತರೆಲ್ಲರೂ, ದೇವರಿಗೆ ಸಮೀಪವಾದ ಜನರೂ ದೇವರನ್ನು ಕೊಂಡಾಡಿರಿ.
 
ಯೆಹೋವ ದೇವರನ್ನು ಸ್ತುತಿಸಿರಿ.

<- ಕೀರ್ತನೆಗಳು 147ಕೀರ್ತನೆಗಳು 149 ->