Link to home pageLanguagesLink to all Bible versions on this site
ಕೀರ್ತನೆ 140
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.
1 ಯೆಹೋವ ದೇವರೇ, ಕೆಡುಕರಿಂದ ನನ್ನನ್ನು ತಪ್ಪಿಸಿರಿ,
ಬಲಾತ್ಕಾರಿಗಳಿಂದ ನನ್ನನ್ನು ತಪ್ಪಿಸಿ ಕಾಪಾಡಿರಿ.
2 ಅವರು ಹೃದಯದಲ್ಲಿ ಕೇಡನ್ನು ಕಲ್ಪಿಸುತ್ತಾರೆ;
ಅವರು ಪ್ರತಿದಿನ ಕಲಹವೆಬ್ಬಿಸುತ್ತಾರೆ.
3 ತಮ್ಮ ನಾಲಿಗೆಗಳನ್ನು ಹಾವಿನ ಹಾಗೆ ಹದಮಾಡುತ್ತಾರೆ;
ಸರ್ಪಗಳ ವಿಷವು ಅವರ ತುಟಿಗಳ ಕೆಳಗಿದೆ.
 
4 ಯೆಹೋವ ದೇವರೇ, ದುಷ್ಟರ ಕೈಗಳಿಂದ ನನ್ನನ್ನು ತಪ್ಪಿಸಿ ಕಾಯಿರಿ.
ಹಿಂಸಕರಿಂದ ನನ್ನನ್ನು ರಕ್ಷಿಸು,
ಅವರು ನನ್ನ ಮಾರ್ಗಗಳನ್ನು ಕೆಡಿಸುವುದಕ್ಕೆ ಉದ್ದೇಶಿಸುತ್ತಾರೆ.
5 ಗರ್ವಿಷ್ಠರು ನನಗೆ ಉರುಲನ್ನೂ, ಪಾಶಗಳನ್ನೂ ರಹಸ್ಯವಾಗಿ ಇಟ್ಟಿದ್ದಾರೆ;
ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ;
ನನಗೆ ಬೋನಿಟ್ಟಿದ್ದಾರೆ.
 
6 ನಾನು ಯೆಹೋವ ದೇವರಿಗೆ ಹೀಗೆ ಹೇಳಿದೆನು,
“ನೀವು ನನ್ನ ದೇವರಾಗಿದ್ದೀರಿ;
ಯೆಹೋವ ದೇವರೇ, ಕರುಣೆಗಾಗಿ ಬೇಡುವ ನನ್ನ ಮೊರೆಗೆ ಕಿವಿಗೊಡಿರಿ.
7 ನನ್ನ ರಕ್ಷಣೆಯ ಬಲವಾಗಿರುವ ಸಾರ್ವಭೌಮ ಯೆಹೋವ ದೇವರೇ,
ನನ್ನ ತಲೆಯನ್ನು ಯುದ್ಧದ ದಿವಸದಲ್ಲಿ ಕಾಪಾಡುತ್ತೀರಿ.
8 ಯೆಹೋವ ದೇವರೇ, ದುಷ್ಟರಿಗೆ ಅವರ ಇಷ್ಟಾರ್ಥವನ್ನು ಕೊಡಬೇಡಿರಿ;
ಅವರು ಉನ್ನತಕ್ಕೇರುವ ಹಾಗೆ ಅವರ ಯುಕ್ತಿಯನ್ನು ಪೂರೈಸಬೇಡಿರಿ.”
 
9 ನನ್ನನ್ನು ಸುತ್ತಿಕೊಂಡಿರುವವರ ತುಟಿಗಳ ಕೇಡು,
ಅವರ ತಲೆಯ ಮೇಲೇ ಬರಲಿ.
10 ಉರಿ ಕೆಂಡಗಳು ಅವರ ಮೇಲೆ ಬೀಳಲಿ;
ಬೆಂಕಿಯಲ್ಲಿಯೂ ಅವರು ಏಳಲಾರದ ಹಾಗೆ,
ಇತರರು ಅವರನ್ನು ಕುಣಿಯಲ್ಲಿ ಕೆಡವಲಿ.
11 ಚಾಡಿಕೋರರು ದೇಶದಲ್ಲಿ ಉಳಿಯದಿರಲಿ;
ಬಲಾತ್ಕಾರಿಯನ್ನು ಕೇಡು ಬೇಟೆಯಾಡಿ ಕೆಡವಲಿ.
 
12 ಯೆಹೋವ ದೇವರು ಬಡವನಿಗೆ ವ್ಯಾಜ್ಯವನ್ನು,
ಬಲಹೀನರಿಗೆ ನ್ಯಾಯವನ್ನೂ ತೀರಿಸುವರೆಂದೂ ನಾನು ಬಲ್ಲೆನು.
13 ನಿಶ್ಚಯವಾಗಿ ನೀತಿವಂತರು ನಿಮ್ಮ ಹೆಸರಿಗೆ ಉಪಕಾರ ಸ್ತುತಿಯನ್ನು ಮಾಡುವರು;
ಯಥಾರ್ಥರು ನಿಮ್ಮ ಸನ್ನಿಧಿಯಲ್ಲಿ ಬಾಳುವರು.

<- ಕೀರ್ತನೆಗಳು 139ಕೀರ್ತನೆಗಳು 141 ->