5
ವ್ಯಭಿಚಾರವನ್ನು ಕುರಿತು ಎಚ್ಚರಿಕೆ
1 ಮಗನೇ, ನನ್ನ ಜ್ಞಾನಕ್ಕೆ ಗಮನಕೊಡು;
ನನ್ನ ಒಳನೋಟದ ಮಾತುಗಳಿಗೆ ಕಿವಿಗೊಡು.
2 ಆಗ ನಿನ್ನ ವಿವೇಚನೆಯನ್ನು ಉಳಿಸಿಕೊಳ್ಳುವೆ.
ನಿನ್ನ ತುಟಿಗಳು ತಿಳುವಳಿಕೆಯನ್ನು ಕಾಪಾಡುವವು.
3 ಏಕೆಂದರೆ ಜಾರಿಣಿಯ ತುಟಿಗಳು ಜೇನುಗರೆಯುವುದು;
ಅವಳ ಮಾತು ಎಣ್ಣೆಗಿಂತಲೂ ಮೃದು.
4 ಆದರೆ ಅಂತ್ಯದಲ್ಲಿ ಅವಳು ಮಾಚಿಪತ್ರೆಯಂತೆ ಕಹಿಯೂ,
ಇಬ್ಬಾಯಿ ಖಡ್ಗದಂತೆ ಹರಿತವೂ ಆಗಿರುವಳು.
5 ಅವಳ ಪಾದಗಳು ಮರಣದ ಕಡೆಗೆ ಇಳಿದುಹೋಗುತ್ತವೆ;
ಅವಳ ಹೆಜ್ಜೆಗಳು ನೇರವಾಗಿ ಪಾತಾಳಕ್ಕೆ ನಡೆಸುತ್ತವೆ.
6 ಜೀವಮಾರ್ಗದ ವಿಚಾರ ಅವಳಿಗಿಲ್ಲ;
ಆದ್ದರಿಂದ ಅವಳ ಮಾರ್ಗಗಳು ಚಂಚಲವಾಗಿವೆ, ಅದರ ಅರಿವೂ ಅವಳಿಗಿಲ್ಲ.
7 ಮಕ್ಕಳಿರಾ, ನನ್ನ ಕಡೆಗೆ ಈಗ ಕಿವಿಗೊಡಿರಿ;
ನನ್ನ ಬಾಯಿಯ ಮಾತುಗಳಿಂದ ದೂರವಾಗಬೇಡಿರಿ.
8 ಅವಳ ಕಡೆಯಿಂದ ನಿನ್ನ ದಾರಿಯನ್ನು ದೂರಮಾಡು;
ಅವಳ ಮನೆಯ ಬಾಗಿಲ ಹತ್ತಿರಕ್ಕೆ ಹೋಗದೆ ಇರು.
9 ನೀನು ನಿನ್ನ ಗೌರವವನ್ನು ಬೇರೆಯವರಿಗೆ ಕಳೆಯಬೇಡ,
ನಿನ್ನ ಘನತೆನ್ನು ಕ್ರೂರನಿಗೂ ಕೊಡಬೇಡ.
10 ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳದಂತೆ ಎಚ್ಚರಿಕೆ,
ನಿನ್ನ ಪ್ರಯಾಸದ ಫಲವು ಪರರ ಮನೆ ಸೇರದಂತೆ ನೋಡಿಕೋ.
11 ನಿನ್ನ ಜೀವನದ ಅಂತ್ಯದಲ್ಲಿ
ನಿನ್ನ ದೇಹವೂ ಕ್ಷೀಣಿಸಿದಾಗ, ನೀನು ನರಳಬೇಕಾದೀತು.
12 ಆಗ ನೀನು, “ಶಿಸ್ತನ್ನು ನಾನು ಎಷ್ಟೋ ಹಗೆ ಮಾಡಿದೆ;
ನನ್ನ ಹೃದಯವು ಗದರಿಕೆಯನ್ನು ತಿರಸ್ಕಾರ ಮಾಡಿತು.
13 ನನ್ನ ಬೋಧಕರ ಸ್ವರಕ್ಕೆ ನಾನು ವಿಧೇಯನಾಗದೆ ಹೋದೆ.
ನನ್ನ ಉಪದೇಶಕರಿಗೆ ನಾನು ಕಿವಿಗೊಡದೆ ಹೋದೆ.
14 ನಾನು ದೇವರ ಸಭೆಯಲ್ಲಿ
ಗಂಭೀರ ಸಮಸ್ಯೆಗೆ ಒಳಗಾದೆ,” ಎಂದು ಹೇಳುವೆ.
15 ನಿನ್ನ ಸ್ವಂತ ಕೊಳದ ನೀರನ್ನು ಕುಡಿ,
ನಿನ್ನ ಸ್ವಂತ ಬಾವಿಯೊಳಗಿಂದ ಉಕ್ಕಿಬರುವ ಜಲವನ್ನು ಕುಡಿ.
16 ನಿನ್ನ ಬುಗ್ಗೆಗಳು ಬೀದಿಗಳಲ್ಲಿ ಹರಡುವುದು ಯುಕ್ತವೋ?
ನೀರಿನ ಒರತೆಗಳು ಬೀದಿಚೌಕಗಳಲ್ಲಿ ಹರಿಯುವುದು ಸರಿಯೇ?
17 ಅವು ನಿನಗೆ ಸ್ವಂತವಾಗಿರಲಿ;
ಪರರು ಭಾಗಿಗಳಾಗಿರಬಾರದು.
18 ನಿನ್ನ ಬುಗ್ಗೆಯು ಆಶೀರ್ವಾದ ಹೊಂದಲಿ;
ನಿನ್ನ ಆನಂದವು ಯೌವನದ ಕಾಲದ ಹೆಂಡತಿಯೊಂದಿಗಿರಲಿ.
19 ಆಕೆಯು ಮನೋಹರವಾದ ಹರಿಣಿ, ಅಂದವಾದ ಜಿಂಕೆಯ ಹಾಗೆಯೂ;
ಆಕೆಯ ಎದೆಯು ನಿನ್ನನ್ನು ಸದಾ ತೃಪ್ತಿಪಡಿಸಲಿ;
ಆಕೆಯ ಪ್ರೀತಿಯಿಂದ ನೀನು ಸದಾ ಪರವಶನಾಗಿರು.
20 ಮಗನೇ, ಬೇರೆಯವನ ಹೆಂಡತಿಗೆ ವಶವಾಗುವುದೇಕೆ?
ಅನ್ಯಳ ಎದೆಯನ್ನೇಕೆ ಅಪ್ಪಿಕೊಳ್ಳುವೆ?
21 ನಿನ್ನ ಮಾರ್ಗಗಳು ಯೆಹೋವ ದೇವರ ಮುಂದೆಯೇ ಇವೆ.
ಅವರು ನಿನ್ನ ಮಾರ್ಗಗಳನ್ನೆಲ್ಲಾ ಪರೀಕ್ಷಿಸುತ್ತಾರೆ.
22 ದುಷ್ಟನನ್ನು ಅವನ ಸ್ವಂತ ದ್ರೋಹಗಳೇ ಹಿಡಿಯುತ್ತವೆ;
ತನ್ನ ಪಾಪಗಳ ಪಾಶಗಳೇ ಅವನನ್ನು ಬಂಧಿಸುತ್ತದೆ.
23 ಶಿಸ್ತುಪಾಲನೆಯಿಲ್ಲದೆ ಅವನು ನಾಶವಾಗುವನು;