ಅರಸ ಲೆಮೂವೇಲನ ಹೇಳಿಕೆಗಳು
31
1 ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವಿಕ ಬುದ್ಧಿಮಾತುಗಳು:
2 ನನ್ನ ಮಗನೇ ಕೇಳು, ನನ್ನ ಗರ್ಭಪುತ್ರನೇ ಕೇಳು!
ನನ್ನ ಪ್ರಾರ್ಥನೆಗೆ ಉತ್ತರವಾದ ನನ್ನ ಮಗನೇ ಕೇಳು!
3 ನಿನ್ನ ತ್ರಾಣವನ್ನು ಸ್ತ್ರೀಯರಿಗೆ ಒಪ್ಪಿಸದಿರು.
ರಾಜರನ್ನೇ ಹಾಳುಮಾಡಬಲ್ಲ ಸ್ತ್ರೀಯರಿಗೆ ನಿನ್ನ ಹಣ ಸಮಯವನ್ನು ವ್ಯಯಮಾಡದಿರು.
4 ಲೆಮೂವೇಲನೇ, ಕುಡುಕತನವು ರಾಜರಿಗಾಗಿ ಅಲ್ಲ,
ದ್ರಾಕ್ಷಾರಸ ಕುಡಿಯುವದು ರಾಜರಿಗೆ ಯೋಗ್ಯವಲ್ಲ.
ಮದ್ಯಪಾನ ಅಧಿಕಾರಿಗಳಿಗೆ ಯೋಗ್ಯವಲ್ಲ;
5 ಕುಡಿದರೆ ಅವರು ನಿಯಮವನ್ನು ಮರೆತು,
ಬಾಧಿತರಿಗೆ ನ್ಯಾಯವನ್ನು ನೀಡುವುದಿಲ್ಲ.
6 ನಾಶವಾಗುವವರಿಗೆ ಮದ್ಯಪಾನವಿರಲಿ.
ಮನೋವ್ಯಥೆಪಡುವವರಿಗೆ ಮದ್ಯವಿರಲಿ.
7 ಅವರು ಕುಡಿದು ಬಡತನವನ್ನು ಮರೆಯಲಿ.
ತಮ್ಮ ಯಾತನೆಯನ್ನು ಜ್ಞಾಪಕಕ್ಕೆ ತಾರದಿರಲಿ.
8 ತಮಗಾಗಿ ಮಾತನಾಡಲು ಸಾಧ್ಯವಾಗದವರಿಗಾಗಿ ಮಾತನಾಡು,
ಅನಾಥರ ಪರವಾಗಿ ನ್ಯಾಯ ದೊರಕುವಂತೆ ಬಾಯಿಬಿಟ್ಟು ಮಾತನಾಡು.
9 ಅವರ ಪರವಾಗಿ ಮಾತನಾಡಿ, ನೀತಿನ್ಯಾಯವನ್ನು ಸ್ಥಾಪಿಸು.
ಬಡವರಿಗಾಗಿಯೂ ದಿಕ್ಕಿಲ್ಲದವರಿಗಾಗಿಯೂ ಹಕ್ಕುಬಾಧ್ಯತೆಯನ್ನು ಕಾಪಾಡು.
ಉಪಸಂಹಾರ: ಗುಣವತಿಯಾದ ಹೆಂಡತಿ
10 ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು?
ಅವಳು ಹವಳಕ್ಕಿಂತಲೂ ಬಹು ಅಮೂಲ್ಯಳು.
11 ಅವಳ ಪತಿಯ ಹೃದಯವು ಅವಳಲ್ಲಿ ಭರವಸೆ ಇಡುತ್ತದೆ,
ಅವನಿಗೆ ಯಾವ ಆದಾಯದ ಕೊರತೆಯೂ ಇರುವುದಿಲ್ಲ.
12 ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ,
ಒಳ್ಳೆಯದನ್ನೇ ಮಾಡುವಳು.
13 ಆಕೆಯು ಉಣ್ಣೆಯನ್ನೂ ಸೆಣಬನ್ನೂ ತಂದು,
ತನ್ನ ಚಟುವಟಿಕೆಯ ಕೈಗಳಿಂದ ಕೆಲಸ ಮಾಡುವಳು.
14 ಆಕೆಯು ವರ್ತಕರ ಹಡಗುಗಳಂತೆ ಇರುವಳು;
ದೂರದಿಂದ ಆಹಾರವನ್ನು ಆಕೆಯು ತರುವಳು.
15 ಇನ್ನೂ ಕತ್ತಲಿರುವಾಗಲೇ ಆಕೆಯು ಏಳುವಳು;
ತನ್ನ ಮನೆಯವರಿಗೆ ಆಹಾರವನ್ನು ಕೊಟ್ಟು,
ತನ್ನ ದಾಸಿಯರಿಗೆ ದಿನದ ಕೆಲಸವನ್ನು ಹಂಚುವಳು.
16 ಆಕೆಯು ಹೊಲವನ್ನು ನೋಡಿ, ಅದನ್ನು ಕೊಂಡುಕೊಳ್ಳುತ್ತಾಳೆ.
ತನ್ನ ಕೈಕೆಲಸದ ಆದಾಯದಿಂದ ದ್ರಾಕ್ಷಾಲತೆಗಳನ್ನು ನೆಡುತ್ತಾಳೆ.
17 ಆಕೆಯು ನಡುಕಟ್ಟಿ ಆಸಕ್ತಿಯಿಂದ ಕೆಲಸ ಮಾಡುತ್ತಾಳೆ.
ತನ್ನ ಶಕ್ತಿಯುತ ತೋಳುಗಳಿಂದ ಕೆಲಸ ಮಾಡುತ್ತಾಳೆ.
18 ತನ್ನ ವ್ಯಾಪಾರವು ಲಾಭದಾಯಕವೆಂದು ಅವಳು ನೋಡುತ್ತಾಳೆ.
ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು.
19 ಅವಳು ರಾಟೆಯ ಮೇಲೆ ಕೈಹಾಕಿ,
ಕದಿರನ್ನು ಹಿಡಿಯುತ್ತಾಳೆ.
20 ಆಕೆಯು ಬಡವರಿಗಾಗಿ ಕೈ ಬಿಚ್ಚಿ ಕೊಡುತ್ತಾಳೆ.
ಹೌದು, ದಿಕ್ಕಿಲ್ಲದವರಿಗೆ ದಾನ ಮಾಡುತ್ತಾಳೆ.
21 ಚಳಿಗಾಲದಲ್ಲಿ ತನ್ನ ಮನೆಯವರ ಬಗ್ಗೆ ಆಕೆಯು ಚಿಂತಿಸಬೇಕಾಗಿಲ್ಲ.
ಏಕೆಂದರೆ ಆಕೆಯ ಮನೆಯವರೆಲ್ಲರಿಗೂ ಬೆಚ್ಚನೆಯ ಕಂಬಳಿಗಳಿವೆ.
22 ಆಕೆಯು ತಾನೇ ಕಂಬಳಿಗಳನ್ನು ನೇಯುತ್ತಾಳೆ.
ಆಕೆಯ ಉಡುಪೋ ನಾರುಮಡಿ, ರಕ್ತಾಂಬರ.
23 ಆಕೆಯ ಪತಿಯು ಪಟ್ಟಣದಲ್ಲಿ ಸನ್ಮಾನಿತ.
ದೇಶದ ಹಿರಿಯರ ಮಧ್ಯದಲ್ಲಿ ಪ್ರಸಿದ್ಧನಾಗಿ ಕುಳಿತಿರುವನು.
24 ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ.
ಆಕೆಯು ನಡುಕಟ್ಟುಗಳನ್ನು ತಯಾರಿಸಿ ವರ್ತಕರಿಗೆ ಒದಗಿಸುತ್ತಾಳೆ.
25 ಆಕೆಯ ಉಡುಪು ಬಲವೂ ಘನತೆಯೂ ಆಗಿವೆ.
ಭವಿಷ್ಯತ್ತಿನ ಭಯವಿಲ್ಲದೆ ಆಕೆಯು ನಗುವಳು.
26 ಆಕೆಯು ಜ್ಞಾನದಿಂದ ಮಾತನಾಡುತ್ತಾಳೆ.
ಆಕೆಯ ನಾಲಿಗೆಯ ಮೇಲೆ ನಂಬಿಗಸ್ತ ಶಿಕ್ಷಣ ಇದೆ.
27 ಆಕೆಯು ತನ್ನ ಗೃಹಕೃತ್ಯಗಳನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ.
ಸೋಮಾರಿಯಾಗಿ ಕೆಲಸಮಾಡದೆ ಆಹಾರವನ್ನು ತಿನ್ನುವುದಿಲ್ಲ.
28 ಆಕೆಯ ಮಕ್ಕಳು ಎದ್ದು, ಆಕೆಯನ್ನು ಧನ್ಯಳೆಂದು ಕರೆಯುವರು.
ಆಕೆಯ ಪತಿಯು ಸಹ ಆಕೆಯನ್ನು,
29 “ಬಹುಮಂದಿ ಸ್ತ್ರೀಯರು ಗುಣವತಿಯರಾಗಿದ್ದಾರೆ.
ಆದರೆ ನೀನು ಅವರೆಲ್ಲರಿಗಿಂತಲೂ ಶ್ರೇಷ್ಠಳು,” ಎಂದು ಹೊಗಳುವನು.
30 ಸೌಂದರ್ಯವು ಮೋಸಕರವಾದದ್ದು, ಸೌಂದರ್ಯವು ಶಾಶ್ವತವಲ್ಲ.
ಆದರೆ ಯೆಹೋವ ದೇವರಿಗೆ ಭಯಪಡುವವಳೇ ಪ್ರಶಂಸನೀಯಳು.
31 ಆಕೆಯ ಕೈಕೆಲಸಕ್ಕೆ ತಕ್ಕ ಪ್ರತಿಫಲವನ್ನು ಸಲ್ಲಿಸಿ ಗೌರವಿಸಿರಿ.