1 ಇಸ್ರಾಯೇಲರ ಸರ್ವ ಸಮೂಹದವರು ಚಿನ್ ಎಂಬ ಮರುಭೂಮಿಗೆ ಮೊದಲನೆಯ ತಿಂಗಳಿನಲ್ಲಿ ಬಂದರು. ಜನರು ಕಾದೇಶಿನಲ್ಲಿ ವಾಸಿಸುವಾಗ ಅಲ್ಲಿ ಮಿರ್ಯಾಮಳು ಮರಣಹೊಂದಿದಳು, ಆಕೆಯ ಶವವನ್ನು ಅಲ್ಲಿಯೇ ಸಮಾಧಿಮಾಡಿದರು.
2 ಆಗ ಜನರಿಗೆ ನೀರು ಇಲ್ಲದೆ ಇರಲಾಗಿ ಅವರು ಮೋಶೆಗೂ ಆರೋನನಿಗೂ ವಿರೋಧವಾಗಿ ಕೂಡಿಕೊಂಡರು. 3 ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ, “ನಮ್ಮ ಸಹೋದರರು ಯೆಹೋವ ದೇವರ ಮುಂದೆ ಸತ್ತು ಹೋದಾಗಲೇ, ನಾವು ಸಹ ಸತ್ತು ಹೋಗಿದ್ದರೆ ಚೆನ್ನಾಗಿತ್ತು. 4 ನಾವೂ ನಮ್ಮ ಪಶುಗಳೂ ಸಾಯುವ ಹಾಗೆ ನೀವು ಏಕೆ ಯೆಹೋವ ದೇವರ ಸಭೆಯವರಾದ ನಮ್ಮನ್ನೂ ಈ ಮರುಭೂಮಿಗೆ ತಂದಿರಿ. 5 ಈ ಕೆಟ್ಟ ಸ್ಥಳಕ್ಕೆ ನಮ್ಮನ್ನು ತರುವುದಕ್ಕೆ ಏಕೆ ನಮ್ಮನ್ನು ಈಜಿಪ್ಟ್ ದೇಶದೊಳಗಿಂದ ಕರಕೊಂಡು ಬಂದಿರಿ. ಈ ಸ್ಥಳದಲ್ಲಿ ಧಾನ್ಯವಾದರೂ ಅಂಜೂರವಾದರೂ ದ್ರಾಕ್ಷಿ ತೋಟವಾದರೂ ದಾಳಿಂಬೆ ಹಣ್ಣಾದರೂ ಇಲ್ಲ. ಕುಡಿಯುವುದಕ್ಕೆ ನೀರು ಸಹ ಇಲ್ಲ,” ಎಂದರು.
6 ಆಗ ಮೋಶೆ, ಆರೋನನೂ ಜನಸಮೂಹದ ಎದುರಿನಿಂದ ದೇವದರ್ಶನ ಗುಡಾರದ ಬಾಗಿಲಿನೊಳಗೆ ಹೋಗಿ, ಸಾಷ್ಟಾಂಗವೆರಗಿದರು. ಯೆಹೋವ ದೇವರ ಮಹಿಮೆಯು ಅವರಿಗೆ ಕಾಣಬಂತು. 7 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, 8 “ಕೋಲನ್ನು ತೆಗೆದುಕೊಂಡು ನೀನು ನಿನ್ನ ಸಹೋದರ ಆರೋನನು ಜನರನ್ನು ಕೂಡಿಸಿಕೊಂಡು, ಅವರ ಕಣ್ಣುಗಳ ಮುಂದೆ ಬಂಡೆಯ ಸಂಗಡ ಮಾತನಾಡಿರಿ. ಅದು ತನ್ನ ನೀರನ್ನು ಕೊಡುವುದು. ನೀನು ಅವರಿಗೋಸ್ಕರ ಬಂಡೆಯೊಳಗಿಂದ ನೀರನ್ನು ಹೊರಗೆ ತರುವೆ, ಜನರಿಗೂ ಅವರ ಪಶುಗಳಿಗೂ ನೀನು ಕುಡಿಯಲು ಕೊಡಬಹುದು,” ಎಂದು ಹೇಳಿದರು.
9 ಆಗ ಮೋಶೆಯು ಯೆಹೋವ ದೇವರ ಸನ್ನಿಧಿಯಿಂದ ಹೊರಟು, ತನಗೆ ಆಜ್ಞಾಪಿಸಿದ ಹಾಗೆ ಕೋಲನ್ನು ತೆಗೆದುಕೊಂಡನು. 10 ಮೋಶೆಯೂ, ಆರೋನನೂ ಜನರನ್ನು ಬಂಡೆಯ ಮುಂದೆ ಕೂಡಿಸಿ, ಅವರಿಗೆ, “ತಿರುಗಿ ಬಿದ್ದವರೇ ಕೇಳಿರಿ, ನಾವು ನಿಮಗೋಸ್ಕರ ಈ ಬಂಡೆಯೊಳಗಿಂದ ನೀರನ್ನು ಹೊರಡಿಸಬೇಕೋ?” ಎಂದರು. 11 ಮೋಶೆಯು ತನ್ನ ಕೈಯನ್ನು ಎತ್ತಿ, ತನ್ನ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು. ಆಗ ಬಹಳ ನೀರು ಹೊರಗೆ ಬಂತು, ಜನರೂ ಅವರ ಪಶುಗಳೂ ಕುಡಿದರು.
12 ಆಗ ಯೆಹೋವ ದೇವರು ಮೋಶೆ ಮತ್ತು ಆರೋನನ ಸಂಗಡ ಮಾತನಾಡಿ, “ನನ್ನಲ್ಲಿ ವಿಶ್ವಾಸವಿಡದೆ ಹೋದಕಾರಣ ನೀವು ಇಸ್ರಾಯೇಲರ ಕಣ್ಣುಗಳ ಮುಂದೆ ನನ್ನನ್ನು ಪರಿಶುದ್ಧನಾಗಿ ಗೌರವಿಸುವುದಕ್ಕೆ, ನಾನು ಅವರಿಗೆ ಕೊಡುವ ದೇಶದಲ್ಲಿ ನೀವು ಅವರನ್ನು ಸೇರಿಸುವುದಿಲ್ಲ,” ಎಂದರು.
13 ಇಸ್ರಾಯೇಲರು ಯೆಹೋವ ದೇವರ ಸಂಗಡ ವ್ಯಾಜ್ಯವಾಡಿದ್ದಕ್ಕಾಗಿ ದೇವರು ಅವರಲ್ಲಿ ತಮ್ಮನ್ನು ಪರಿಶುದ್ಧ ಮಾಡಿಕೊಂಡ ಮೆರೀಬಾ ಸ್ಥಳದ ನೀರು ಇದೇ.
ಎದೋಮ್ಯರು ತಮ್ಮ ದೇಶವನ್ನು ದಾಟಿಹೋಗುವುದಕ್ಕೆ ಇಸ್ರಾಯೇಲರಿಗೆ ಅಪ್ಪಣೆ ಕೊಡದೆ ಹೋದದ್ದು
“ನಿಮ್ಮ ಸಹೋದರರಾದ ಇಸ್ರಾಯೇಲರು ಹೇಳುವುದೇನೆಂದರೆ, ನಮಗೆ ಉಂಟಾದ ಸಕಲ ಆಯಾಸವನ್ನು ನೀನು ಅರಿತಿದ್ದೀ. 15 ನಮ್ಮ ಪಿತೃಗಳು ಈಜಿಪ್ಟಿಗೆ ಇಳಿದು ಹೋದರು. ಈಜಿಪ್ಟಿನಲ್ಲಿ ಬಹಳ ದಿವಸ ವಾಸವಾಗಿದ್ದೆವು ಮತ್ತು ಈಜಿಪ್ಟಿನವರು ನಮಗೂ, ನಮ್ಮ ಪಿತೃಗಳಿಗೆ ಕೇಡನ್ನು ಮಾಡಿದರು. 16 ಆದಕಾರಣ ನಾವು ಯೆಹೋವ ದೇವರಿಗೆ ಕೂಗಿದೆವು. ಅವರು ನಮ್ಮ ಧ್ವನಿಯನ್ನು ಕೇಳಿ, ದೂತನನ್ನು ಕಳುಹಿಸಿ, ನಮ್ಮನ್ನು ಈಜಿಪ್ಟಿನೊಳಗಿಂದ ನಮ್ಮನ್ನು ಹೊರಗೆ ತಂದರು.
“ನಾವು ನಿನ್ನ ಮೇರೆಯ ಕಡೇ ಊರಾದ ಕಾದೇಶಿಯದಲ್ಲಿ ಇದ್ದೇವೆ. 17 ನಮ್ಮನ್ನು ನಿನ್ನ ದೇಶದೊಳಗಿಂದ ದಾಟಿ ಹೋಗಗೊಡಿಸು; ನಾವು ಹೊಲವನ್ನಾದರೂ, ದ್ರಾಕ್ಷಿ ತೋಟವನ್ನಾದರೂ ದಾಟಿ ಹೋಗುವುದಿಲ್ಲ; ರಾಜಮಾರ್ಗದಲ್ಲಿ ಮಾತ್ರ ಹೋಗುತ್ತೇವೆ; ನಿನ್ನ ಮೇರೆಯನ್ನು ನಾವು ದಾಟುವವರೆಗೆ ಬಲಗಡೆಗಾದರೂ, ಎಡಗಡೆಗಾದರೂ ನಾವು ತಿರುಗುವುದಿಲ್ಲ,” ಎಂದು ವಿನಂತಿಸಿದನು.
18 ಎದೋಮ್ಯರು ದೂತರಿಗೆ,
“ನೀನು ಈ ಕಡೆಯಲ್ಲಿ ದಾಟಿ ಹೋಗಬೇಡ. ಹೋದರೆ ನಾನು ಖಡ್ಗದಿಂದ ನಿನ್ನ ಮೇಲೆ ದಾಳಿಗೆ ಬರುವೆನು,” ಎಂದನು.
19 ಅದಕ್ಕೆ ಇಸ್ರಾಯೇಲರು ಅವನಿಗೆ,
“ನಾವು ರಾಜಮಾರ್ಗದಲ್ಲಿ ಹೋಗುತ್ತೇವೆ. ನಮ್ಮ ಪಶುಗಳು ನಿನ್ನ ನೀರು ಕುಡಿದರೆ, ಅದರ ಕ್ರಯವನ್ನು ಕೊಡುತ್ತೇವೆ. ನಮ್ಮ ಕಾಲುಗಳಿಂದ ದಾಟಿ ಹೋಗುವುದೇ ಹೊರತು ಮತ್ತೇನೂ ಮಾಡುವುದಿಲ್ಲ,” ಎಂದು ಹೇಳಿ ಕಳುಹಿಸಿದನು.
20 ಆದರೆ ಅವನು,
“ನೀವು ದಾಟಬಾರದು,” ಎಂದನು.
ಎದೋಮ್ಯರು ಬಹುಜನರಿಂದಲೂ, ಬಲವುಳ್ಳ ಕೈಯಿಂದಲೂ ಅವರಿಗೆ ಎದುರಾಗಿ ಯುದ್ಧಕ್ಕೆ ಬಂದರು. 21 ಈ ಪ್ರಕಾರ ಎದೋಮ್ಯನು ಇಸ್ರಾಯೇಲರನ್ನು ತನ್ನ ಮೇರೆಯಲ್ಲಿ ದಾಟಗೊಡಿಸಲಿಲ್ಲ. ಆದಕಾರಣ ಇಸ್ರಾಯೇಲರು ಅವನ ಕಡೆಯಿಂದ ತಿರುಗಿಕೊಂಡು ಹೊರಟು ಹೋದರು.
ಆರೋನನ ಮರಣ
22 ಇಸ್ರಾಯೇಲರ ಸಮಸ್ತ ಸಮೂಹದವರು ಕಾದೇಶಿನಿಂದ ಪ್ರಯಾಣಮಾಡಿ, ಹೋರ್ ಎಂಬ ಬೆಟ್ಟದ ಬಳಿಗೆ ಬಂದರು. 23 ಆಗ ಯೆಹೋವ ದೇವರು ಎದೋಮ್ಯ ದೇಶದ ಮೇರೆಯ ಮೇಲಿರುವ ಹೋರ್ ಎಂಬ ಬೆಟ್ಟದಲ್ಲಿ ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ, 24 “ಆರೋನನು ತನ್ನ ಪಿತೃಗಳ ಸಂಗಡ ಸೇರುವನು, ಏಕೆಂದರೆ ನೀವು ಮೆರೀಬಾದ ನೀರಿನ ಹತ್ತಿರ ನನ್ನ ಮಾತಿಗೆ ತಿರುಗಿಬಿದ್ದದರಿಂದ, ನಾನು ಇಸ್ರಾಯೇಲರಿಗೆ ಕೊಡುವ ದೇಶಕ್ಕೆ ಅವನು ಪ್ರವೇಶಿಸುವುದಿಲ್ಲ. 25 ಆರೋನನನ್ನೂ, ಅವನ ಮಗ ಎಲಿಯಾಜರನನ್ನೂ ತೆಗೆದುಕೊಂಡು, ಅವರನ್ನು ಹೋರ್ ಬೆಟ್ಟಕ್ಕೆ ಕರೆದುಕೊಂಡು ಬಾ. 26 ಆರೋನನ ವಸ್ತ್ರಗಳನ್ನು ತೆಗೆದು, ಅವುಗಳನ್ನು ಅವನ ಮಗ ಎಲಿಯಾಜರನಿಗೆ ತೊಡಿಸು. ಆರೋನನು ಅಲ್ಲಿ ದೇಹವನ್ನು ಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಬೇಕು,” ಎಂದರು.
27 ಮೋಶೆಯು ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರ ಮಾಡಿದನು. ಅವರು ಸಮಸ್ತ ಸಭೆಯವರು ನೋಡುತ್ತಿರುವಾಗ ಹೋರ್ ಬೆಟ್ಟವನ್ನೇರಿದರು. 28 ಮೋಶೆಯು ಆರೋನನ ವಸ್ತ್ರಗಳನ್ನು ತೆಗೆದು, ಅವನ ಮಗ ಎಲಿಯಾಜರನಿಗೆ ತೊಡಿಸಿದನು. ಆಗ ಆರೋನನು ಬೆಟ್ಟದ ತುದಿಯಲ್ಲಿ ಸತ್ತನು. ಮೋಶೆಯೂ, ಎಲಿಯಾಜರನೂ ಬೆಟ್ಟದಿಂದ ಇಳಿದರು. 29 ಆರೋನನು ತೀರಿಹೋದನೆಂದು ಸಭೆಯೆಲ್ಲಾ ನೋಡಿದಾಗ, ಇಸ್ರಾಯೇಲರೆಲ್ಲರೂ ಆರೋನನಿಗೋಸ್ಕರ ಮೂವತ್ತು ದಿವಸಗಳವರೆಗೂ ದುಃಖಿಸಿದರು.