Link to home pageLanguagesLink to all Bible versions on this site
17
ಆರೋನನ ಕೋಲನ್ನು ಚಿಗುರಿಸಿದ್ದು
1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, 2 “ನೀನು ಇಸ್ರಾಯೇಲರ ಸಂಗಡ ಮಾತನಾಡಿ ಅವರಿಂದ ಅವರ ಪಿತೃಗಳ ಗೋತ್ರಗಳ ಪ್ರಕಾರ, ಅವರ ಪ್ರಧಾನರೆಲ್ಲರ ಪಿತೃಗಳ ಮನೆಯ ಪ್ರಕಾರ ಕೋಲುಗಳನ್ನು ತೆಗೆದುಕೊಂಡು, ಒಬ್ಬೊಬ್ಬನ ಹೆಸರನ್ನು ಅವನವನ ಕೋಲಿನ ಮೇಲೆ ನೀನು ಬರೆ. 3 ಆರೋನನ ಹೆಸರನ್ನು ಲೇವಿಯ ಕೋಲಿನ ಮೇಲೆ ಬರೆಯಬೇಕು. ಏಕೆಂದರೆ ಅವರ ಪಿತೃಗಳ ಗೋತ್ರದ ಮುಖ್ಯಸ್ಥನಿಗೆ ಒಂದು ಕೋಲು ಇರಬೇಕು. 4 ಅವುಗಳನ್ನು ದೇವದರ್ಶನ ಗುಡಾರದಲ್ಲಿ ನಾನು ನಿಮ್ಮ ಸಂಗಡ ಸಂಧಿಸುವ ಒಡಂಬಡಿಕೆಯ ಮಂಜೂಷದ ಮುಂದೆ ಇಡಬೇಕು. 5 ನಾನು ಯಾವನನ್ನು ಆಯ್ದುಕೊಳ್ಳುತ್ತೇನೋ, ಆ ಮನುಷ್ಯನ ಕೋಲು ಚಿಗುರುವುದು. ಹೀಗೆ ಇಸ್ರಾಯೇಲರು ನಿಮಗೆ ವಿರೋಧವಾಗಿ ಗೊಣಗುಟ್ಟುವುದನ್ನು ನಾನು ನಿಲ್ಲಿಸಿಬಿಡುವೆನು,” ಎಂದರು.

6 ಹಾಗೆಯೇ ಮೋಶೆಯು ಇಸ್ರಾಯೇಲರ ಸಂಗಡ ಮಾತನಾಡಿದನು. ಅವರ ಪ್ರಧಾನರೆಲ್ಲರೂ ತಮ್ಮ ಪಿತೃಗಳ ಗೋತ್ರಗಳ ಪ್ರಕಾರ ಒಬ್ಬೊಬ್ಬ ಪ್ರಧಾನನಿಗೋಸ್ಕರ ಒಂದೊಂದು ಕೋಲಿನ ಪ್ರಕಾರ ಹನ್ನೆರಡು ಕೋಲುಗಳನ್ನು ಕೊಟ್ಟರು. ಆರೋನನ ಕೋಲು ಸಹ ಅವರ ಕೋಲುಗಳ ಮಧ್ಯದಲ್ಲಿ ಇತ್ತು. 7 ಆಗ ಮೋಶೆಯು ಆ ಕೋಲುಗಳನ್ನು ಸಾಕ್ಷಿಯ ಗುಡಾರದ ಒಳಗೆ ಯೆಹೋವ ದೇವರ ಸಮ್ಮುಖದಲ್ಲಿ ಇಟ್ಟನು.

8 ಮರುದಿವಸದಲ್ಲಿ, ಮೋಶೆಯು ಸಾಕ್ಷಿ ಗುಡಾರದೊಳಗೆ ಪ್ರವೇಶಿಸುವಾಗ, ಲೇವಿಯ ಮನೆಯ ಕೋಲಾಗಿದ್ದ ಆರೋನನ ಕೋಲು ಚಿಗುರಿ, ಮೊಗ್ಗು ಬಿಟ್ಟು, ಹೂವು ಅರಳಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು. 9 ಆಗ ಮೋಶೆಯು ಕೋಲುಗಳನ್ನು ಯೆಹೋವ ದೇವರ ಸನ್ನಿಧಿಯಿಂದ ಎಲ್ಲಾ ಇಸ್ರಾಯೇಲರಿಗೆ ತೋರಿಸುವುದಕ್ಕಾಗಿ ಹೊರಗೆ ತಂದನು. ಆಗ ಅವರು ನೋಡಿ ತಮ್ಮ ತಮ್ಮ ಕೋಲುಗಳನ್ನು ತೆಗೆದುಕೊಂಡರು.

10 ಯೆಹೋವ ದೇವರು ಮೋಶೆಗೆ, “ಆರೋನನ ಕೋಲನ್ನು ಎದುರು ಬೀಳುವವರಿಗೆ ಗುರುತಾಗಿ ಇಟ್ಟುಕೊಳ್ಳುವುದಕ್ಕೆ ಒಡಂಬಡಿಕೆಯ ಮಂಜೂಷದ ಮುಂದೆ ತಿರುಗಿ ಇಡು. ಗೊಣಗುಟ್ಟುವುದನ್ನು ನೀನು ಸಂಪೂರ್ಣವಾಗಿ ತೆಗೆದುಬಿಡಬೇಕು,” ಎಂದರು. 11 ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರವೇ ಮೋಶೆ ಮಾಡಿದನು.

12 ಆಗ ಇಸ್ರಾಯೇಲರು ಮೋಶೆಯ ಸಂಗಡ ಮಾತನಾಡಿ, “ನಾವೆಲ್ಲರೂ ಸಾಯುತ್ತೇವೆ, ನಾಶವಾಗುತ್ತೇವೆ. ನಾವೆಲ್ಲರೂ ನಾಶವಾಗುತ್ತೇವೆ. 13 ಯೆಹೋವ ದೇವರ ಗುಡಾರದ ಸಮೀಪಕ್ಕೆ ಬರುವವರೆಲ್ಲರೂ ಸಾಯುವರು. ಹಾಗೆಯೇ ನಾವೆಲ್ಲರೂ ಸಾಯಬೇಕೋ?” ಎಂದರು.

<- ಅರಣ್ಯಕಾಂಡ 16ಅರಣ್ಯಕಾಂಡ 18 ->