6
ಇಸ್ರಾಯೇಲರ ವಿರುದ್ಧ ಯೆಹೋವ ದೇವರ ವ್ಯಾಜ್ಯ
1 ಯೆಹೋವ ದೇವರು ಹೇಳುವುದನ್ನು ಈಗ ಕೇಳಿರಿ,
ಎದ್ದೇಳು, ಬೆಟ್ಟಗಳ ಮುಂದೆ ವ್ಯಾಜ್ಯವಾಡು;
ನೀನು ಹೇಳುವುದನ್ನು ಗುಡ್ಡಗಳು ಕೇಳಲಿ.
2 ಬೆಟ್ಟಗಳೇ, ಯೆಹೋವ ದೇವರ ಆಪಾದನೆಯನ್ನು ಕೇಳಿರಿ.
ಭೂಮಿಯ ಶಾಶ್ವತವಾದ ಅಸ್ತಿವಾರಗಳೇ ಕಿವಿಗೊಡಿರಿ.
ಏಕೆಂದರೆ ಯೆಹೋವ ದೇವರಿಗೆ ತಮ್ಮ ಜನರ ವಿರುದ್ಧ ವ್ಯಾಜ್ಯವಿದೆ,
ಅವರು ಇಸ್ರಾಯೇಲಿನ ವಿರುದ್ಧ ಆರೋಪಿಸುತ್ತಾರೆ.
3 ನನ್ನ ಜನರೇ, ನಾನು ನಿಮಗೆ ಏನು ಮಾಡಿದ್ದೇನೆ?
ನಾನು ನಿಮ್ಮ ಮೇಲೆ ಭಾರ ಹಾಕಿದ್ದೇನೋ? ನನಗೆ ಉತ್ತರಕೊಡಿರಿ.
4 ನಾನು ಈಜಿಪ್ಟ್ ದೇಶದೊಳಗಿಂದ ನಿನ್ನನ್ನು ಮೇಲೆ ಬರಮಾಡಿ,
ದಾಸತ್ವದ ದೇಶದೊಳಗಿಂದ ನಿನ್ನನ್ನು ವಿಮೋಚಿಸಿ,
ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು
ನಿನಗೆ ನಾಯಕರನ್ನಾಗಿ ಕಳುಹಿಸಿದೆನು.
5 ನನ್ನ ಜನರೇ,
ಮೋವಾಬಿನ ಅರಸನಾದ ಬಾಲಾಕನು ಯೋಚಿಸಿದ್ದನ್ನೂ
ಬೆಯೋರನ ಮಗ ಬಿಳಾಮನು ಅವನಿಗೆ ಉತ್ತರವಾಗಿ ಹೇಳಿದ್ದನ್ನೂ
ಶಿಟ್ಟೀಮು ಮೊದಲುಗೊಂಡು ಗಿಲ್ಗಾಲಿನ ವರೆಗೆ ಆದ
ನಿಮ್ಮ ಪ್ರಯಾಣವನ್ನೂ ಈಗ ಜ್ಞಾಪಕಮಾಡಿಕೊಳ್ಳಿರಿ.
ಆಗ ಯೆಹೋವ ದೇವರ ನೀತಿಯ ಕೃತ್ಯಗಳನ್ನು ತಿಳಿದುಕೊಳ್ಳುವಿರಿ.
6 ನಾನು ಯಾವುದರೊಂದಿಗೆ ಯೆಹೋವ ದೇವರ ಮುಂದೆ ಬಂದು,
ಯಾವುದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ?
ದಹನಬಲಿಗಳ ಮತ್ತು
ಒಂದು ವರ್ಷದ ಕರುಗಳ ಸಂಗಡ ಆತನ ಮುಂದೆ ಹೋಗಲೇ?
7 ಯೆಹೋವ ದೇವರು ಸಾವಿರ ಟಗರುಗಳಿಗಾದರೂ
ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಮೆಚ್ಚುವರೋ?
ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗನನ್ನೂ
ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನೂ ಕೊಡಲೋ?
8 ಮನುಷ್ಯನೇ, ಒಳ್ಳೆಯದೇನೆಂದು ನಿನಗೆ ದೇವರು ತೋರಿಸಿದ್ದಾರೆ.
ಹೌದು, ನ್ಯಾಯವನ್ನು ಕೈಗೊಳ್ಳುವದೂ ಕರುಣೆಯನ್ನು ಪ್ರೀತಿಸುವುದೂ
ನಿನ್ನ ದೇವರ ಮುಂದೆ ನಮ್ರನಾಗಿ ನಡೆದುಕೊಳ್ಳುವದೂ
ಇದನ್ನೇ ಹೊರತು ಯೆಹೋವ ದೇವರು ನಿನ್ನಿಂದ ಇನ್ನೇನನ್ನು ಅಪೇಕ್ಷಿಸುತ್ತಾರೆ?
ಇಸ್ರಾಯೇಲರ ವಂಚನೆ ಮತ್ತು ಶಿಕ್ಷೆ
9 ಕೇಳು! ಯೆಹೋವ ದೇವರು ಪಟ್ಟಣವನ್ನು ಕರೆಯುತ್ತಿದ್ದಾರೆ.
ನಿಮ್ಮ ನಾಮಕ್ಕೆ ಭಯಪಡುವುದು ಜ್ಞಾನ.
ಕೋಲು ಮತ್ತು ಅದನ್ನು ನೇಮಿಸಿದ ವ್ಯಕ್ತಿಯನ್ನು ಎಚ್ಚರಿಕೆಯಿಂದ ಆಲಿಸಿರಿ.
10 ದುಷ್ಟಮನೆತನವೇ ನೀನು ಕೆಟ್ಟದ್ದಾಗಿ ಸಂಪಾದಿಸಿದ್ದನ್ನು ಶಾಪಗ್ರಸ್ತರಾದ
ಕಡಿಮೆ ಅಳತೆಯನ್ನು ನಾನು ಮರೆಯಬೇಕೋ?
11 ನಾನು ದುಷ್ಟತ್ವದ ತಕ್ಕಡಿಗಳುಳ್ಳವರನ್ನು
ಮೋಸವಾದ ಕಲ್ಲುಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ?
12 ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿದ್ದಾರೆ.
ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವರಾಗಿದ್ದಾರೆ.
ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ.
13 ಆದ್ದರಿಂದ ನಾನು ಸಹ ನಿನ್ನನ್ನು ಹೊಡೆದು
ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು.
14 ನೀನು ಉಂಡರೂ ತೃಪ್ತಿಯಾಗದೆ ಇರುವೆ;
ನಿನ್ನೊಳಗೆ ಹಸಿವೆಯು ಇರುವುದು;
ನೀವು ಸಂಗ್ರಹಿಸುತ್ತೀರಿ ಆದರೆ ಏನನ್ನೂ ಉಳಿಸುವುದಿಲ್ಲ,
ಏಕೆಂದರೆ ನೀವು ಉಳಿಸುವದನ್ನು ನಾನು ಕತ್ತಿಗೆ ಕೊಡುತ್ತೇನೆ.
15 ನೀನು ಬೀಜ ಬಿತ್ತಿ ಕೊಯ್ಯದೆ ಇರುವೆ;
ಹಿಪ್ಪೆಗಳನ್ನು ತುಳಿದು ಎಣ್ಣೆ ಹಚ್ಚಿಕೊಳ್ಳದೆ ಇರುವೆ;
ದ್ರಾಕ್ಷಾರಸಮಾಡಿ ಕುಡಿಯದೆ ಇರುವೆ.
16 ಏಕೆಂದರೆ ಒಮ್ರಿಯ ನಿಯಮಗಳನ್ನೂ ಕೈಕೊಳ್ಳುತ್ತೀರಿ.
ಅಹಾಬ್ ಮನೆತನದ ದುರಾಚಾರಗಳನ್ನೂ
ಅವರ ಸಂಪ್ರದಾಯಗಳನ್ನೂ ಅನುಸರಿಸುತ್ತಾ ಬಂದಿದ್ದೀರಿ.
ಆದ್ದರಿಂದ ನೀವು ನಾಶವಾಗುವಂತೆ ಮಾಡುವೆನು.
ನಿಮ್ಮ ಜನರನ್ನು ಅಪಹಾಸ್ಯಕ್ಕೆ ಗುರಿಮಾಡುವೆನು.