2
ಮನುಷ್ಯನ ಯೋಜನೆ ಹಾಗೂ ದೇವರ ಯೋಜನೆ
1 ಅಪರಾಧವನ್ನು ಯೋಚಿಸಿ ಅಪರಾಧವನ್ನು ಕಲ್ಪಿಸಿ,
ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡೆಸುವವರಿಗೆ ಕಷ್ಟ!
ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ.
ಏಕೆಂದರೆ ಅದು ಅವರ ಕೈಶಕ್ತಿಯಲ್ಲಿದೆ.
2 ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತೆಗೆದುಕೊಳ್ಳುತ್ತಾರೆ.
ಮನೆಗಳನ್ನೂ ಸಹ ತೆಗೆದುಕೊಳ್ಳುತ್ತಾರೆ.
ಮನುಷ್ಯನಿಗೂ ಅವನ ಮನೆಗೂ
ಇತರರಿಗೂ ಅವನ ಸ್ವಾಸ್ತ್ಯವನ್ನು ಕಸಿದುಕೊಳ್ಳುತ್ತಾರೆ.
3 ಆದ್ದರಿಂದ ಯೆಹೋವ ದೇವರು ಹೀಗೆನ್ನುತ್ತಾರೆ,
“ಇಗೋ, ನಾನು ಈ ವಂಶಕ್ಕೆ ವಿರೋಧವಾಗಿ ನಾಶನವನ್ನು ಯೋಚಿಸುತ್ತೇನೆ.
ಇದರಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಲಾರಿರಿ.
ಅಹಂಕಾರವಾಗಿ ನಡೆಯದೆ ಇರುವಿರಿ.
ಇದು ವಿಪತ್ತಿನ ಕಾಲವೇ,
4 ಆ ದಿನದಲ್ಲಿ ಜನರು ನಿಮ್ಮನ್ನು ಅಪಹಾಸ್ಯ ಮಾಡುವರು.
‘ನಾವು ಸಂಪೂರ್ಣವಾಗಿ ಹಾಳಾಗಿದ್ದೇವೆ.
ನನ್ನ ಪ್ರಜೆಗಳ ಆಸ್ತಿ ವಿಭಾಗವಾಗಿದೆ.
ಆತನು ಅದನ್ನು ನನ್ನಿಂದ ತೆಗೆದುಕೊಳ್ಳುವನು.
ಆತನು ನಮ್ಮ ಹೊಲಗಳನ್ನು ದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ,’ ”
ಎಂಬ ದುಃಖದಾಯಕ ಸಂಗೀತದಿಂದ ಹಾಸ್ಯಮಾಡುವರು.
5 ಆದ್ದರಿಂದ ಚೀಟುಹಾಕಿ ದೇಶವನ್ನು
ಹಂಚುವದಕ್ಕೆ ಯೆಹೋವ ದೇವರ ಸಭೆಯಲ್ಲಿ ನಿನಗೆ ಯಾರೂ ಇರುವುದಿಲ್ಲ.
ಸುಳ್ಳು ಪ್ರವಾದಿಗಳು
6 “ಪ್ರವಾದಿಸಬೇಡ, ಈ ಸಂಗತಿಗಳ ಬಗ್ಗೆ ಪ್ರವಾದನೆ ಹೇಳಬೇಡ.
ಅವಮಾನ ನಮ್ಮ ಮೇಲೆ ಬರುವುದೇ ಇಲ್ಲ,”
ಎಂದು ಅವರ ಪ್ರವಾದಿಗಳು ಹೇಳುತ್ತಾರೆ.
7 ಯಾಕೋಬಿನ ಮನೆತನದವರೇ,
“ಯೆಹೋವ ದೇವರ ಆತ್ಮವು ಕೋಪಗೊಂಡಿದೆಯೇ?
ಅವರು ಇಂಥ ಕಾರ್ಯ ಮಾಡುವರೋ?”
“ಯಥಾರ್ಥವಾಗಿ ನಡೆಯುವವನಿಗೆ
ನನ್ನ ಮಾತುಗಳು ಒಳ್ಳೆಯದನ್ನು ಮಾಡುವುದಿಲ್ಲವೋ?
8 ಇತ್ತೀಚೆಗೆ ನನ್ನ ಜನರು
ವೈರಿಯ ಹಾಗೆ ಎದ್ದಿದ್ದಾರೆ.
ಯುದ್ಧದಿಂದ ತಿರುಗಿಕೊಂಡು ನಿರ್ಭಯವಾಗಿ
ಹೋಗುವವರ ವಸ್ತ್ರದ ಸಂಗಡ
ನಿಲುವಂಗಿಯನ್ನು ನೀವು ಕಿತ್ತುಕೊಳ್ಳುತ್ತೀರಿ.
9 ನನ್ನ ಜನರ ಸ್ತ್ರೀಯರನ್ನು
ಅವರ ರಮ್ಯವಾದ ಮನೆಗಳೊಳಗಿಂದ ಹೊರಡಿಸಿದ್ದೀರಿ.
ಅವರ ಮಕ್ಕಳಿಂದ
ನನ್ನ ಆಶೀರ್ವಾದವನ್ನು ಎಂದೆಂದಿಗೂ ತೆಗೆದಿದ್ದೀರಿ.
10 ಎದ್ದು ಹೋಗಿರಿ;
ಇದು ನಿಮ್ಮ ವಿಶ್ರಾಂತಿಯ ಸ್ಥಳವಲ್ಲ,
ಏಕೆಂದರೆ ಇದಕ್ಕೆ ಹೊಲಸು ಅಂಟಿಕೊಂಡು,
ಯಾವ ಸುಧಾರಣೆಗೂ ಒಳಗಾಗದಂತೆ ಹಾಳಾಗಿ ಹೋಗಿಬಿಟ್ಟಿದೆ.
11 ಒಬ್ಬ ಸುಳ್ಳುಗಾರನೂ ಮೋಸಗಾರನೂ ಬಂದು,
‘ನಿನಗೆ ದ್ರಾಕ್ಷಾರಸವೂ ಮದ್ಯಪಾನವೂ ಯಥೇಚ್ಛವಾಗಿ
ದೊರೆಯುವುದೆಂದು ನಾನು ಪ್ರವಾದಿಸುವೆನು,’
ಎಂದು ಹೇಳಿದರೆ, ಇವನೇ ಈ ಜನರಿಗೆ ಪ್ರವಾದಿಯಾಗಿರುವನು.
ಇಸ್ರಾಯೇಲಿಗೆ ರಕ್ಷಣೆ ವಾಗ್ದಾನ
12 “ಯಾಕೋಬೇ, ನಿನ್ನವರನ್ನೆಲ್ಲಾ ನಿಶ್ಚಯವಾಗಿ ಕೂಡಿಸುವೆನು.
ಇಸ್ರಾಯೇಲಿನಲ್ಲಿ ಉಳಿದವರನ್ನು ನಿಶ್ಚಯವಾಗಿ ಕೂಡಿಸುವೆನು.
ಬೊಚ್ರದ ಕುರಿಗಳಂತೆಯೂ ತಮ್ಮ ಹಟ್ಟಿಯ ನಡುವೆ ಇರುವ ಮಂದೆಯಂತೆಯೂ
ಅವರನ್ನು ಒಟ್ಟಾಗಿ ಕೂಡಿಸುವೆನು.
ಹುಲ್ಲುಗಾವಲಿನ ಕುರಿಮಂದೆಯಂತೆ, ಸ್ಥಳವು ಜನರಿಂದ ತುಂಬಿ ತುಳುಕುವುದು.
13 ಮಾರ್ಗ ತೆರೆಯುವಾತನು ಅವರ ಮುಂದೆ ಹೋಗುವನು.
ಅವರು ಬಾಗಿಲು ತೆರೆದು ಹೊರಗೆ ಹೋಗುವರು.
ಅವರ ಅರಸನು ಅವರ ಮುಂದೆ ಹಾದು ಹೋಗುತ್ತಾನೆ.