2 ಆಗ ಮಹಾ ಭೂಕಂಪವಾಯಿತು. ಕರ್ತನ ದೂತನು ಪರಲೋಕದಿಂದ ಇಳಿದುಬಂದು, ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಅದರ ಮೇಲೆ ಕುಳಿತುಕೊಂಡನು. 3 ಅವನ ರೂಪವು ಮಿಂಚಿನಂತೆಯೂ ಅವನ ಉಡುಪು ಹಿಮದಂತೆಯೂ ಬಿಳುಪಾಗಿತ್ತು. 4 ಕಾವಲುಗಾರರು ಅವನಿಗೆ ಭಯಪಟ್ಟು ನಡುಗುತ್ತಾ ಸತ್ತಂತಾದರು.
5 ಆ ದೂತನು ಸ್ತ್ರೀಯರಿಗೆ, “ನೀವು ಭಯಪಡಬೇಡಿರಿ. ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು. 6 ಅವರು ಇಲ್ಲಿ ಇಲ್ಲ. ಅವರು ಹೇಳಿದಂತೆಯೇ ಜೀವಂತರಾಗಿ ಎದ್ದಿದ್ದಾರೆ. ಕರ್ತನನ್ನು ಇಟ್ಟಿದ್ದ ಸ್ಥಳವನ್ನು ಬಂದು ನೋಡಿರಿ. 7 ಬೇಗನೆ ಹೋಗಿ ಅವರ ಶಿಷ್ಯರಿಗೆ, ‘ಅವರು ಮರಣದಿಂದ ಎದ್ದಿದ್ದಾರೆ. ಅವರು ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತಾರೆ. ನೀವು ಅಲ್ಲಿಯೇ ಅವರನ್ನು ಕಾಣುವಿರಿ,’ ಎಂದು ತಿಳಿಸಿರಿ. ಇದೇ ನಾನು ನಿಮಗೆ ತಿಳಿಸಬೇಕಾದ ಸಂಗತಿ,” ಎಂದನು.
8 ಅವರು ಭಯದಿಂದಲೂ ಮಹಾ ಸಂತೋಷದಿಂದಲೂ ಸಮಾಧಿಯಿಂದ ಬೇಗನೆ ಹೊರಟು, ಶಿಷ್ಯರಿಗೆ ತಿಳಿಸುವುದಕ್ಕಾಗಿ ಓಡಿಹೋದರು. 9 ಅವರು ಶಿಷ್ಯರಿಗೆ ತಿಳಿಸುವುದಕ್ಕೆ ಹೋಗುತ್ತಿದ್ದಾಗ, ಯೇಸು ಅವರನ್ನು ಸಂಧಿಸಿ, “ಶುಭವಾಗಲಿ” ಎಂದರು. ಅವರು ಬಂದು ಯೇಸುವಿನ ಪಾದಗಳನ್ನು ಹಿಡಿದು ಅವರನ್ನು ಆರಾಧಿಸಿದರು. 10 ಆಗ ಯೇಸು ಅವರಿಗೆ, “ಭಯಪಡಬೇಡಿರಿ, ನನ್ನ ಸಹೋದರರು ಗಲಿಲಾಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ಹೋಗಿ ಅವರಿಗೆ ಹೇಳಿರಿ,” ಎಂದರು.