Link to home pageLanguagesLink to all Bible versions on this site
22
ಮದುವೆ ಔತಣದ ಸಾಮ್ಯ
1 ಯೇಸು ಪುನಃ ಸಾಮ್ಯಗಳ ಮೂಲಕ ಅವರ ಕೂಡ ಮಾತನಾಡುತ್ತಾ: 2 “ಪರಲೋಕ ರಾಜ್ಯವು ಮಗನ ಮದುವೆ ಮಾಡಿದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. 3 ಅವನು ಮದುವೆಗೆ ಆಹ್ವಾನಿತರಾಗಿದ್ದವರನ್ನು ಕರೆಯುವುದಕ್ಕೆ ತನ್ನ ಸೇವಕರನ್ನು ಕಳುಹಿಸಿದನು. ಆದರೆ ಅವರು ಬರಲು ಒಪ್ಪಲಿಲ್ಲ.

4 “ಅವನು ಪುನಃ ಬೇರೆ ಸೇವಕರನ್ನು ಕಳುಹಿಸಿ ಅವರಿಗೆ, ‘ಇಗೋ ಔತಣವು ಸಿದ್ಧವಾಗಿದೆ. ಶ್ರೇಷ್ಠ ಔತಣ ಮಾಡಿಸಿದ್ದೇನೆ: ಎಲ್ಲವೂ ಸಿದ್ಧವಾಗಿವೆ. ಮದುವೆಗೆ ಬನ್ನಿರಿ ಎಂದು ಆಹ್ವಾನಿತರಿಗೆ ಹೇಳಿರಿ,’ ಎಂದನು.

5 “ಆದರೆ ಅವರು ಅದನ್ನು ಅಲಕ್ಷ್ಯಮಾಡಿ, ಒಬ್ಬನು ತನ್ನ ಹೊಲಕ್ಕೂ ಇನ್ನೊಬ್ಬನು ತನ್ನ ವ್ಯಾಪಾರಕ್ಕೂ ಹೊರಟು ಹೋದರು. 6 ಉಳಿದವರು ಅವನ ಸೇವಕರನ್ನು ಹಿಡಿದು ಅವಮಾನಪಡಿಸಿ, ಅವರನ್ನು ಕೊಂದುಹಾಕಿದರು. 7 ಆದರೆ ಅರಸನು ಅದನ್ನು ಕೇಳಿ ಬಹುಕೋಪಗೊಂಡು ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.

8 “ತರುವಾಯ ಅವನು ತನ್ನ ಸೇವಕರಿಗೆ, ‘ಮದುವೆಯ ಔತಣ ಸಿದ್ಧವಾಗಿದೆ, ಆದರೆ ಆಹ್ವಾನಿತರು ಸಿದ್ಧರಾಗಿರಲಿಲ್ಲ. 9 ಆದ್ದರಿಂದ ನೀವು ಮುಖ್ಯ ಬೀದಿಗಳಿಗೆ ಹೊರಟುಹೋಗಿ ಅಲ್ಲಿ ಕಂಡವರನ್ನೆಲ್ಲಾ ಮದುವೆಗೆ ಆಹ್ವಾನಿಸಿರಿ,’ ಎಂದನು. 10 ಆಗ ಆ ಸೇವಕರು ಮುಖ್ಯ ಬೀದಿಗಳಿಗೆ ಹೋಗಿ ತಾವು ಕಂಡ ಕೆಟ್ಟವರನ್ನೂ ಒಳ್ಳೆಯವರನ್ನೂ ಕರೆತಂದರು. ಹೀಗೆ ಮದುವೆ ಮಂಟಪವು ಅತಿಥಿಗಳಿಂದ ತುಂಬಿಹೋಯಿತು.

11 “ಅನಂತರ ಅರಸನು ಅತಿಥಿಗಳನ್ನು ನೋಡುವುದಕ್ಕಾಗಿ ಒಳಗೆ ಬಂದಾಗ, ಅಲ್ಲಿ ಮದುವೆಯ ವಸ್ತ್ರವಿಲ್ಲದೆ ಇದ್ದ ಒಬ್ಬ ಮನುಷ್ಯನನ್ನು ಕಂಡನು. 12 ಅರಸನು ಆ ಮನುಷ್ಯನಿಗೆ, ‘ಸ್ನೇಹಿತನೇ, ಮದುವೆಯ ವಸ್ತ್ರವಿಲ್ಲದೆ ನೀನು ಒಳಗೆ ಹೇಗೆ ಬಂದೆ?’ ಎಂದು ಕೇಳಲು ಅವನು ಸುಮ್ಮನಿದ್ದನು.

13 “ಆಗ ಅರಸನು ಸೇವಕರಿಗೆ, ‘ಅವನ ಕೈಕಾಲುಗಳನ್ನು ಕಟ್ಟಿ ತೆಗೆದುಕೊಂಡು ಹೊರಗೆ ಕತ್ತಲೆಯಲ್ಲಿ ಹಾಕಿರಿ. ಅಲ್ಲಿ ಹಲ್ಲು ಕಡಿಯುತ್ತಾ ಗೋಳಾಡುತ್ತಿರಲಿ,’ ಎಂದು ಹೇಳಿದನು.

14 “ಹೀಗೆಯೇ ಆಹ್ವಾನಿತರಾದವರು ಅನೇಕರು, ಆದರೆ ಆಯ್ಕೆಯಾದವರು ಕೆಲವರು ಮಾತ್ರ,” ಎಂದನು.

ಚಕ್ರವರ್ತಿಗೆ ತೆರಿಗೆ ಕೊಡುವುದು
15 ಆಗ ಫರಿಸಾಯರು ಹೊರಟುಹೋಗಿ ಯೇಸುವನ್ನು ಮಾತಿನಲ್ಲಿ ಹೇಗೆ ಸಿಕ್ಕಿಸಬೇಕೆಂದು ಆಲೋಚನೆ ಮಾಡಿಕೊಂಡರು. 16 ಅವರು ತಮ್ಮ ಶಿಷ್ಯರನ್ನು ಹೆರೋದ್ಯರೊಂದಿಗೆ*ಈ ಜನರು ಹೆರೋದನ ತಲೆಮಾರಿನವರು ಮತ್ತು ರೋಮನ್ನರ ಆಳ್ವಿಕೆ ಬಯಸುವವರಾಗಿದ್ದರು ಯೇಸುವಿನ ಬಳಿಗೆ ಕಳುಹಿಸಿ, “ಬೋಧಕರೇ, ನೀವು ಸತ್ಯವಂತರು, ದೇವರ ಮಾರ್ಗವನ್ನು ಸತ್ಯದಿಂದಲೇ ಬೋಧಿಸುವವರು, ನೀವು ಯಾರನ್ನೂ ಲಕ್ಷ್ಯ ಮಾಡುವವರಲ್ಲ, ನೀವು ಮುಖದಾಕ್ಷಿಣ್ಯ ಮಾಡುವವರೂ ಅಲ್ಲ ಎಂದು ನಮಗೆ ಗೊತ್ತಿದೆ. 17 ಆದ್ದರಿಂದ ಕೈಸರನಿಗೆ ತೆರಿಗೆರೋಮನವರು ಅಲ್ಲದವರು ತೆರಿಗೆ ಕಟ್ಟಬೇಕಾಗಿತ್ತು. ಕೊಡುವುದು ಧರ್ಮಸಮ್ಮತವೋ ಅಲ್ಲವೋ? ನಿಮ್ಮ ಅಭಿಪ್ರಾಯವೇನು? ನಮಗೆ ಹೇಳು,” ಎಂದರು.

18 ಯೇಸು ಅವರ ಕುಯುಕ್ತಿಯನ್ನು ತಿಳಿದುಕೊಂಡು, “ಕಪಟಿಗಳೇ, ನೀವು ನನ್ನನ್ನೇಕೆ ಪರೀಕ್ಷಿಸುತ್ತೀರಿ? 19 ತೆರಿಗೆಯ ನಾಣ್ಯವನ್ನು ನನಗೆ ತೋರಿಸಿರಿ,” ಎಂದರು. ಆಗ ಅವರು ಒಂದು ನಾಣ್ಯವನ್ನು ತಂದು ಕೊಟ್ಟರು. 20 ಯೇಸು ಅವರಿಗೆ, “ಇದರ ಮುಖ ಮುದ್ರೆಯು ಮತ್ತು ಇದರ ಮೇಲಿರುವ ಲಿಪಿ ಯಾರದು?” ಎಂದು ಕೇಳಿದರು.

21 ಅದಕ್ಕೆ ಅವರು, “ಕೈಸರನದು,” ಎಂದರು.

ಆಗ ಯೇಸು, “ಕೈಸರನಿಗೆ ಸಲ್ಲತಕ್ಕದ್ದನ್ನು ಕೈಸರನಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಕೊಡಿರಿ,” ಎಂದರು.

22 ಅವರು ಇದನ್ನು ಕೇಳಿ ಆಶ್ಚರ್ಯಪಟ್ಟು, ಯೇಸುವನ್ನು ಬಿಟ್ಟು ಹೊರಟು ಹೋದರು.

ಪುನರುತ್ಥಾನದಲ್ಲಿ ಮದುವೆ ಬಗ್ಗೆ ಪ್ರಶ್ನೆ
23 ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅದೇ ದಿನದಲ್ಲಿ ಯೇಸುವಿನ ಬಳಿಗೆ ಬಂದು, 24 “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ವಿಧವೆಯನ್ನು ಮದುವೆಯಾಗಿ ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ. 25 ಹೀಗಿರಲಾಗಿ ನಮ್ಮಲ್ಲಿ ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಮಾಡಿಕೊಂಡು ಸತ್ತನು. ಸಂತಾನವಿಲ್ಲದ ಕಾರಣ ತನ್ನ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು. 26 ಅದರಂತೆಯೇ ಎರಡನೆಯವನು ಮತ್ತು ಮೂರನೆಯವನು ಹೀಗೆ ಏಳನೆಯವನವರೆಗೂ ಸಂಭವಿಸಿತು. 27 ಕಡೆಯದಾಗಿ, ಆ ಸ್ತ್ರೀಯೂ ಸತ್ತಳು. 28 ಆದ್ದರಿಂದ, ಪುನರುತ್ಥಾನದ ಜೀವನದಲ್ಲಿ, ಆ ಏಳುಮಂದಿಯಲ್ಲಿ ಆಕೆ ಯಾರಿಗೆ ಹೆಂಡತಿಯಾಗಿರುವಳು? ಏಕೆಂದರೆ ಅವರೆಲ್ಲರೂ ಆಕೆಯನ್ನು ಮದುವೆ ಮಾಡಿಕೊಂಡಿದ್ದರಲ್ಲಾ?” ಎಂದು ಕೇಳಿದರು.

29 ಅದಕ್ಕೆ ಯೇಸು ಉತ್ತರವಾಗಿ, “ನೀವು ಪವಿತ್ರ ವೇದವನ್ನಾಗಲಿ ದೇವರ ಶಕ್ತಿಯನ್ನಾಗಲಿ ಅರ್ಥ ಮಾಡಿಕೊಳ್ಳದೆ ತಪ್ಪುತ್ತಿದ್ದೀರಿ. 30 ಏಕೆಂದರೆ ಪುನರುತ್ಥಾನದ ಜೀವನದಲ್ಲಿ ಅವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ. 31 ಆದರೆ ಸತ್ತವರ ಪುನರುತ್ಥಾನದ ವಿಷಯವಾಗಿ, 32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಆಗಿದ್ದೇನೆ,’ವಿಮೋ 3:6 ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ,” ಎಂದು ಹೇಳಿದರು.

33 ಜನಸಮೂಹದವರು ಇದನ್ನು ಕೇಳಿದಾಗ, ಯೇಸುವಿನ ಬೋಧನೆಗೆ ವಿಸ್ಮಯಗೊಂಡರು.

ಮಹಾ ಆಜ್ಞೆ
34 ಯೇಸು ಸದ್ದುಕಾಯರ ಬಾಯನ್ನು ಮುಚ್ಚಿದನೆಂದು ಫರಿಸಾಯರು ಕೇಳಿದಾಗ ಅವರು ಯೇಸುವಿನ ಬಳಿಗೆ ಬಂದರು. 35 ಅವರಲ್ಲಿ ಮೋಶೆಯ ನಿಯಮ ಬೋಧಕನಾಗಿದ್ದ ಒಬ್ಬನು, ಯೇಸುವನ್ನು ಪರೀಕ್ಷಿಸುವುದಕ್ಕಾಗಿ, 36 “ಬೋಧಕರೇ, ನಿಯಮದಲ್ಲಿ ಅತ್ಯಂತ ಮಹಾ ಆಜ್ಞೆ ಯಾವುದು?” ಎಂದು ಪ್ರಶ್ನಿಸಿದನು.

37 ಯೇಸು ಅವನಿಗೆ, “ ‘ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’§ಧರ್ಮೋ 6:5 38 ಇದೇ ಅತ್ಯಂತ ಮಹಾ ಆಜ್ಞೆಯೂ ಮೊದಲನೆಯ ಆಜ್ಞೆಯೂ ಆಗಿದೆ. 39 ಇದರಂತೆಯೇ ಇರುವ ಎರಡನೆಯ ಆಜ್ಞೆಯು: ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’*ಯಾಜಕ 19:18 ಎಂಬುದೇ. 40 ಇಡೀ ನಿಯಮವೂ ಪ್ರವಾದಿಗಳ ಗ್ರಂಥಗಳೂ ಈ ಎರಡು ಆಜ್ಞೆಗಳ ಮೇಲೆ ಆಧಾರಗೊಂಡಿವೆ,” ಎಂದರು.

ಕ್ರಿಸ್ತನು ಯಾರ ಪುತ್ರನು
41 ಫರಿಸಾಯರು ಕೂಡಿಬಂದಿದ್ದಾಗ ಯೇಸು ಅವರಿಗೆ, 42 “ಕ್ರಿಸ್ತನ ವಿಷಯವಾಗಿ ನಿಮ್ಮ ಅಭಿಪ್ರಾಯವೇನು? ಆತನು ಯಾರ ಪುತ್ರನು?” ಎಂದು ಕೇಳಿದ್ದಕ್ಕೆ ಅವರು ಯೇಸುವಿಗೆ,
“ದಾವೀದನ ಪುತ್ರನು,” ಎಂದರು.

43 “ಹಾಗಾದರೆ ದಾವೀದನು ಆತ್ಮದಲ್ಲಿ ಆತನಿಗೆ, ‘ಕರ್ತನು’ ಎಂದು ಕರೆದು,

44 “ ‘ಕರ್ತದೇವರು ನನ್ನ ಕರ್ತದೇವರಿಗೆಅಂದರೆ ತಂದೆಯಾದ ದೇವರು ಕ್ರಿಸ್ತ ಯೇಸುವಿಗೆ:
“ನಾನು ನಿನ್ನ ವಿರೋಧಿಗಳನ್ನು
ನಿನ್ನ ಪಾದದಡಿಯಲ್ಲಿ ಹಾಕುವವರೆಗೆ
ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು,” ’ಕೀರ್ತನೆ 110:1
ಎಂದು ಹೇಳಿದನಲ್ಲವೇ? 45 ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರೇ’ ಎಂದು ಕರೆಯುವುದಾದರೆ, ಆತನು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದನು. 46 ಅದಕ್ಕೆ ಯಾರೂ ಒಂದು ಮಾತನ್ನು ಸಹ ಯೇಸುವಿಗೆ ಉತ್ತರ ಕೊಡಲಾರದೆ ಹೋದರು. ಇದಲ್ಲದೆ ಆ ದಿನದಿಂದ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರಿಗೂ ಧೈರ್ಯ ಬರಲಿಲ್ಲ.

<- ಮತ್ತಾಯ 21ಮತ್ತಾಯ 23 ->