Link to home pageLanguagesLink to all Bible versions on this site
10
ಯೇಸು ಶಿಷ್ಯರನ್ನು ಕಳುಹಿಸಿದ್ದು
1 ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ಅಶುದ್ಧಾತ್ಮಗಳನ್ನು ಓಡಿಸುವುದಕ್ಕೂ ಎಲ್ಲಾ ತರವಾದ ವ್ಯಾಧಿಯನ್ನೂ ರೋಗವನ್ನೂ ಸ್ವಸ್ಥಮಾಡುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು.
 
2 ಆ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಹೀಗಿದ್ದವು:
 
ಮೊದಲನೆಯವನು, ಪೇತ್ರ ಎಂದು ಎನಿಸಿಕೊಂಡ ಸೀಮೋನ, ಅವನ ಸಹೋದರ ಅಂದ್ರೆಯ;
ಜೆಬೆದಾಯನ ಮಗ ಯಾಕೋಬ ಮತ್ತು ಅವನ ಸಹೋದರ ಯೋಹಾನ;
3 ಫಿಲಿಪ್ಪ, ಬಾರ್ತೊಲೊಮಾಯ;
ತೋಮ, ಸುಂಕದವನಾದ ಮತ್ತಾಯ;
ಅಲ್ಫಾಯನ ಮಗ ಯಾಕೋಬ, ತದ್ದಾಯ;
4 ಕಾನಾನ್ಯನಾದ ಸೀಮೋನ*ರೋಮನ್ನರ ವಿರುದ್ಧ ಹೋರಾಡಿದ ರಾಜಕೀಯ ಪಂಗಡ ಮತ್ತು ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ.
 
5 ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿಸುವಾಗ ಅವರಿಗೆ ಅಪ್ಪಣೆ ಕೊಟ್ಟಿದ್ದೇನೆಂದರೆ: “ಯೆಹೂದ್ಯರಲ್ಲದವರ ಬಳಿಗೆ ಹೋಗಬೇಡಿರಿ, ಸಮಾರ್ಯರ ಊರನ್ನೂ ಪ್ರವೇಶಿಸಬೇಡಿರಿ. 6 ಆದರೆ ತಪ್ಪಿಹೋದ ಕುರಿಗಳಾದ ಇಸ್ರಾಯೇಲಿನ ಮನೆತನದವರ ಬಳಿಗೆ ಹೋಗಿರಿ. 7 ನೀವು ಹೋಗುತ್ತಾ, ‘ಪರಲೋಕ ರಾಜ್ಯವು ಸಮೀಪವಾಯಿತು,’ ಎಂದು ಸಾರಿ ಹೇಳಿರಿ. 8 ರೋಗಿಗಳನ್ನು ಸ್ವಸ್ಥಮಾಡಿರಿ, ಮರಣಹೊಂದಿದವರನ್ನು ಎಬ್ಬಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ. ನೀವು ಉಚಿತವಾಗಿ ಪಡೆದಿದ್ದೀರಿ; ಉಚಿತವಾಗಿ ಕೊಡಿರಿ.

9 “ನಿಮ್ಮ ನಡುಕಟ್ಟುಗಳಲ್ಲಿ ಬಂಗಾರ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಇಟ್ಟುಕೊಳ್ಳಬೇಡಿರಿ. 10 ಪ್ರಯಾಣಕ್ಕೆ ಚೀಲವನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಪಾದರಕ್ಷೆಗಳನ್ನಾಗಲಿ, ಕೋಲುಗಳನ್ನಾಗಲಿ ತೆಗೆದುಕೊಳ್ಳಬೇಡಿರಿ. ಏಕೆಂದರೆ ಕೆಲಸದವನು ತನ್ನ ಜೀವನಾಧಾರಕ್ಕೆ ಅರ್ಹನು. 11 ನೀವು ಯಾವುದಾದರೂ ಒಂದು ಪಟ್ಟಣವನ್ನು, ಇಲ್ಲವೆ ಹಳ್ಳಿಯನ್ನು ಪ್ರವೇಶಿಸುವಾಗ, ಅದರಲ್ಲಿ ಯೋಗ್ಯ ವ್ಯಕ್ತಿ ಯಾರೆಂದು ವಿಚಾರಿಸಿರಿ, ಅಲ್ಲಿಂದ ಹೊರಡುವವರೆಗೆ ಅಲ್ಲಿಯೇ ತಂಗಿರಿ. 12 ನೀವು ಒಂದು ಮನೆಯೊಳಗೆ ಪ್ರವೇಶಿಸಿದಾಗ, ಆ ಮನೆಯವರನ್ನು ಹರಸಿರಿ. 13 ಆ ಮನೆಯು ಅಯೋಗ್ಯವಾಗಿದ್ದರೆ, ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಲಿ. 14 ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ ಇಲ್ಲವೆ ನಿಮ್ಮ ಮಾತುಗಳನ್ನು ಕೇಳದೆ ಹೋದರೆ, ನೀವು ಆ ಮನೆಯನ್ನು ಇಲ್ಲವೆ ಆ ಪಟ್ಟಣವನ್ನು ಬಿಟ್ಟು ಹೊರಡುವಾಗ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. 15 ನ್ಯಾಯತೀರ್ಪಿನ ದಿನದಲ್ಲಿ ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಗತಿಯುಈ ಎರಡು ಪಟ್ಟಣಗಳ ದುಷ್ಟಜನರನ್ನು ನಾಶಮಾಡಲು ದೇವರು ಬೆಂಕಿಯ ಮಳೆಯನ್ನು ಸುರಿಸಿದರು. ನೋಡಿರಿ ಆದಿ 19:1-19 ಆ ಪಟ್ಟಣಕ್ಕಿಂತ ಹೆಚ್ಚು ತಾಳುವಂಥದ್ದಾಗಿರುವುದು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

16 “ತೋಳಗಳ ಮಧ್ಯದಲ್ಲಿ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಆದ್ದರಿಂದ ನೀವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ. 17 ಆದರೆ ಜನರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಏಕೆಂದರೆ ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಒಪ್ಪಿಸುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. 18 ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರ ಮುಂದೆ ಒಯ್ಯುವರು. ಹೀಗೆ ಅವರಿಗೂ ಯೆಹೂದ್ಯರಲ್ಲದವರಿಗೂ ನೀವು ಸಾಕ್ಷಿಗಳಾಗುವಿರಿ. 19 ಆದರೆ ಅವರು ನಿಮ್ಮನ್ನು ಬಂಧಿಸುವಾಗ, ನೀವು ಹೇಗೆ ಇಲ್ಲವೆ ಏನು ಮಾತನಾಡಬೇಕೆಂದು ಯೋಚಿಸಬೇಡಿರಿ. ನೀವು ಏನು ಮಾತನಾಡಬೇಕೆಂಬುದು ಆ ಗಳಿಗೆಯಲ್ಲೇ ನಿಮಗೆ ತಿಳಿಸಲಾಗುವುದು, 20 ಏಕೆಂದರೆ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮೊಳಗಿಂದ ಮಾತನಾಡುವರು.

21 “ಸಹೋದರನು ತನ್ನ ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು. 22 ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಮಾಡುವರು. ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು. 23 ಒಂದು ಸ್ಥಳದಲ್ಲಿ ನಿಮಗೆ ಹಿಂಸೆಯಾದರೆ ಇನ್ನೊಂದು ಸ್ಥಳಕ್ಕೆ ಓಡಿಹೋಗಿರಿ. ಮನುಷ್ಯಪುತ್ರನು ಬರುವಷ್ಟರಲ್ಲಿ ಇಸ್ರಾಯೇಲಿನ ಪಟ್ಟಣಗಳ ಸಂಚಾರವನ್ನು ನೀವು ಮುಗಿಸುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

24 “ತನ್ನ ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ದಾಸನು ತನ್ನ ಯಜಮಾನನಿಗಿಂತ ಶ್ರೇಷ್ಠನಲ್ಲ. 25 ಶಿಷ್ಯನು ತನ್ನ ಗುರುವಿನಂತೆಯೂ ದಾಸನು ತನ್ನ ಯಜಮಾನನಂತೆಯೂ ಇದ್ದರೆ ಸಾಕು. ಮನೆಯ ಯಜಮಾನನನ್ನೇ ಅವರು, ‘ಬೆಲ್ಜೆಬೂಲನು’ಬೆಲ್ಜೆಬೂಲನು ಅಂದರೆ ದೆವ್ವಗಳ ರಾಜ ಎಂದು ಕರೆದರೆ, ಯಜಮಾನನ ಮನೆಯವರನ್ನು ಇನ್ನೂ ಎಷ್ಟೋ ಕೆಟ್ಟದ್ದಾಗಿ ಕರೆಯುವರಲ್ಲವೇ!

26 “ಆದ್ದರಿಂದ ಅವರಿಗೆ ಹೆದರಬೇಡಿರಿ, ಪ್ರಕಟಗೊಳ್ಳದಂತೆ ಯಾವುದೂ ಮುಚ್ಚಿಡಲಾಗುವುದಿಲ್ಲ, ತಿಳಿಯಲಾಗದಂತೆ ಯಾವುದೂ ಗುಪ್ತವಾಗಿರುವುದಿಲ್ಲ. 27 ನಾನು ನಿಮಗೆ ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಹೇಳಿರಿ. ನೀವು ಕಿವಿಯಲ್ಲಿ ಕೇಳುವುದನ್ನು ಮಾಳಿಗೆಯ ಮೇಲೆ ಸಾರಿರಿ. 28 ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾಗದವರಿಗೆ ಹೆದರಬೇಡಿರಿ. ಆದರೆ ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿರಿ. 29 ಒಂದು ರೂಪಾಯಿಗೆ§ಇದು ಒಂದು ತಾಮ್ರದ ನಾಣ್ಯ. ಇದರ ಬೆಲೆ ಒಂದು ರೂಪಾಯಿಯ ಹದಿನಾರನೆಯ ಭಾಗ. ಅಂದರೆ ಒಬ್ಬ ಮನುಷ್ಯನ ಅರ್ಧಗಂಟೆಯ ಕೂಲಿಗೆ ಸಮ. ಎರಡು ಗುಬ್ಬಿಗಳನ್ನು ಮಾರುವುದಿಲ್ಲವೇ? ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ. 30 ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. 31 ಆದ್ದರಿಂದ ಭಯಪಡಬೇಡಿರಿ; ಅನೇಕ ಗುಬ್ಬಿಗಳಿಗಿಂತಲೂ ನೀವು ಎಷ್ಟೋ ಮೌಲ್ಯವುಳ್ಳವರು.

32 “ಜನರ ಮುಂದೆ ನನ್ನನ್ನು ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು. 33 ಯಾವನಾದರೂ ಜನರ ಮುಂದೆ ನನ್ನನ್ನು ನಿರಾಕರಿಸಿದರೆ, ನಾನು ಸಹ ಅವನನ್ನು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನಿರಾಕರಿಸುವೆನು.

34 “ನಾನು ಭೂಮಿಯ ಮೇಲೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿರಿ. ಸಮಾಧಾನವನ್ನಲ್ಲ, ಖಡ್ಗವನ್ನು ತರಲು ಬಂದೆನು. 35 ಹೇಗೆಂದರೆ,

“ ‘ಮಗನಿಗೂ ಅವನ ತಂದೆಗೂ,
ಮಗಳಿಗೂ ಆಕೆಯ ತಾಯಿಗೂ,
ಸೊಸೆಗೂ ಆಕೆಯ ಅತ್ತೆಗೂ ವಿರೋಧವನ್ನು ಹುಟ್ಟಿಸುವುದಕ್ಕೆ ನಾನು ಬಂದೆನು.
36 ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.’*ಮೀಕ 7:6

37 “ನನಗಿಂತ ಮೇಲಾಗಿ ತಂದೆಯನ್ನಾಗಲಿ, ತಾಯಿಯನ್ನಾಗಲಿ ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ಮಗನನ್ನಾಗಲಿ, ಮಗಳನ್ನಾಗಲಿ ನನಗಿಂತ ಮೇಲಾಗಿ ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. 38 ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ. 39 ತನ್ನ ಪ್ರಾಣವನ್ನು ಕಂಡುಕೊಳ್ಳುವವನು ಅದನ್ನು ಕಳೆದುಕೊಳ್ಳುವನು. ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.

40 “ನಿಮ್ಮನ್ನು ಸ್ವಾಗತಿಸುವವರು ನನ್ನನ್ನು ಸ್ವಾಗತಿಸುತ್ತಾರೆ. ನನ್ನನ್ನು ಸ್ವಾಗತಿಸಿದವರು, ನನ್ನನ್ನು ಕಳುಹಿಸಿದ ತಂದೆಯನ್ನು ಸ್ವಾಗತಿಸುತ್ತಾರೆ. 41 ಪ್ರವಾದಿಯೆಂದು ಪ್ರವಾದಿಯನ್ನು ಸ್ವಾಗತಿಸುವವರು ಪ್ರವಾದಿಯ ಪ್ರತಿಫಲವನ್ನು ಪಡೆಯುವರು; ನೀತಿವಂತನೆಂದು ನೀತಿವಂತನನ್ನು ಸ್ವಾಗತಿಸುವವರು ನೀತಿವಂತನ ಪ್ರತಿಫಲವನ್ನು ಪಡೆಯುವರು. 42 ಯಾವನಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ನನ್ನ ಶಿಷ್ಯನೆಂದು ಕೇವಲ ಒಂದು ಲೋಟ ತಣ್ಣೀರನ್ನು ಕುಡಿಯುವುದಕ್ಕೆ ಕೊಡುವವನು ತನ್ನ ಪ್ರತಿಫಲವನ್ನು ಕಳೆದುಕೊಳ್ಳುವುದೇ ಇಲ್ಲವೆಂದು ಸತ್ಯವಾಗಿ ನಾನು ನಿಮಗೆ ಹೇಳುತ್ತೇನೆ.”

<- ಮತ್ತಾಯ 9ಮತ್ತಾಯ 11 ->