Link to home pageLanguagesLink to all Bible versions on this site
5
1 ಯೆಹೋವ ದೇವರೇ, ನಮಗೆ ಏನು ಸಂಭವಿಸಿದೆ ಎಂದು ಜ್ಞಾಪಕಮಾಡಿಕೊಳ್ಳಿರಿ.
ಪರಿಗಣಿಸಿ, ನಮ್ಮ ನಿಂದೆಯನ್ನು ನೋಡಿರಿ.
2 ನಮ್ಮ ಸ್ವಾಸ್ತ್ಯವು ಅಪರಿಚಿತರಿಗೂ,
ನಮ್ಮ ಮನೆಗಳು ಪರರಿಗೂ ವಶವಾದವು.
3 ನಾವು ಅನಾಥರು, ತಂದೆ ಇಲ್ಲದವರು,
ನಮ್ಮ ತಾಯಂದಿರು ವಿಧವೆಯರು.
4 ನಾವು ನಮ್ಮ ನೀರನ್ನು ಹಣಕೊಟ್ಟು ಕುಡಿಯಬೇಕಾಗಿದೆ.
ನಮ್ಮ ಸೌದೆಯು ನಮಗೇ ಮಾರಲಾಗಿದೆ.
5 ನಮ್ಮನ್ನು ಹಿಂಬಾಲಿಸುವವರು ನಮ್ಮ ನೆರಳಿನಲ್ಲೇ ಇದ್ದಾರೆ;
ನಾವು ದಣಿದಿದ್ದೇವೆ ಮತ್ತು ವಿಶ್ರಾಂತಿಯನ್ನು ಕಾಣುವುದಿಲ್ಲ.
6 ಸಾಕಷ್ಟು ರೊಟ್ಟಿಯನ್ನು ಪಡೆಯಲು
ನಾವು ಈಜಿಪ್ಟ್ ಮತ್ತು ಅಸ್ಸೀರಿಯಕ್ಕೆ ಅಧೀನರಾಗಿದ್ದೇವೆ.
7 ನಮ್ಮ ತಂದೆಗಳು ಪಾಪಮಾಡಿ ಇಲ್ಲವಾದರು.
ನಾವು ಅವರ ಅಕ್ರಮಗಳನ್ನು ಹೊರುತ್ತೇವೆ.
8 ಆಳುಗಳು ನಮ್ಮ ಮೇಲೆ ಆಳಿದ್ದಾರೆ.
ಯಾರೂ ಅವರ ಕೈಯಿಂದ ನಮ್ಮನ್ನು ತಪ್ಪಿಸುವುದಿಲ್ಲ.
9 ಅಡವಿಯ ಖಡ್ಗದ ನಿಮಿತ್ತ
ಪ್ರಾಣ ಸಂಕಟದಿಂದ ನಮಗೆ ರೊಟ್ಟಿ ಸಿಕ್ಕಿದೆ.
10 ಭಯಂಕರವಾದ ಕ್ಷಾಮದಿಂದ
ನಮ್ಮ ಚರ್ಮ ಒಲೆಯ ಹಾಗೆ ಕಪ್ಪಾಗಿದೆ.
11 ಅವರು ಚೀಯೋನಿನಲ್ಲಿ ಸ್ತ್ರೀಯರ ಮೇಲೆ
ಮತ್ತು ಯೆಹೂದದ ನಗರಗಳಲ್ಲಿ ಕನ್ಯೆಯರ ದೌರ್ಜನ್ಯ ಮಾಡಲಾಗಿದೆ.
12 ರಾಜಕುಮಾರರ ಕೈಗಳನ್ನು ಗಲ್ಲಿಗೆ ನೇತುಹಾಕಿದ್ದಾರೆ.
ಹಿರಿಯರಿಗೆ ಗೌರವವಿಲ್ಲ.
13 ಅವರು ಯೌವನಸ್ಥರನ್ನು ಅರೆಯುವುದಕ್ಕೆ ತೆಗೆದುಕೊಂಡರು
ಮತ್ತು ಹುಡುಗರು ಕಟ್ಟಿಗೆಯ ಕೆಳಗೆ ಬಿದ್ದರು.
14 ಪಟ್ಟಣದ ದ್ವಾರದಿಂದ ಹಿರಿಯರು ಹೋಗಿದ್ದಾರೆ.
ಯುವಜನರು ತಮ್ಮ ಸಂಗೀತವನ್ನು ನಿಲ್ಲಿಸಿದ್ದಾರೆ.
15 ನಮ್ಮ ಹೃದಯಾನಂದವು ತೀರಿತು.
ನಮ್ಮ ನರ್ತನವು ಶೋಕವಾಗಿ ಮಾರ್ಪಟ್ಟಿತು.
16 ಕಿರೀಟವು ನಮ್ಮ ತಲೆಯ ಮೇಲಿನಿಂದ ಬಿದ್ದುಹೋಯಿತು.
ಅಯ್ಯೋ, ನಾವು ಪಾಪಮಾಡಿದ್ದೇವೆ.
17 ಇದಕ್ಕಾಗಿ ನಮ್ಮ ಹೃದಯವು ದುರ್ಬಲವಾಗಿದೆ.
ಏಕೆಂದರೆ ಇವುಗಳಿಂದ ನಮ್ಮ ಕಣ್ಣುಗಳು ಮೊಬ್ಬಾಗಿವೆ.
18 ಏಕೆಂದರೆ ಚೀಯೋನ್ ಪರ್ವತವು ಹಾಳಾಗಿರುವುದರಿಂದಲೇ
ನರಿಗಳು ಅವುಗಳ ಮೇಲೆ ತಿರುಗಾಡುವುವು.
 
19 ಯೆಹೋವ ದೇವರೇ, ನೀವು ಎಂದೆಂದಿಗೂ ಇರುತ್ತೀರಿ.
ನಿಮ್ಮ ಸಿಂಹಾಸನವು ತಲತಲಾಂತರಗಳವರೆಗೂ ಇರುವುದು.
20 ನೀವು ನಮ್ಮನ್ನು ಯಾವಾಗಲೂ ಮರೆಯುವುದೇಕೆ?
ಇಷ್ಟುಕಾಲ ನಮ್ಮನ್ನು ಮರೆತಿರುವುದೇಕೆ?
21 ಯೆಹೋವ ದೇವರೇ, ನಾವು ನಿಮ್ಮ ಕಡೆ ಹಿಂದಿರುಗುವಂತೆ,
ನಮ್ಮನ್ನು ನಿಮ್ಮ ಕಡೆಗೆ ಪುನಃ ಸ್ಥಾಪಿಸಿಕೊಳ್ಳಿ.
ನಮ್ಮ ದಿನಗಳನ್ನು ಹಿಂದಿನಂತೆಯೇ ನವೀಕರಿಸಿರಿ.
22 ಯೆಹೋವ ದೇವರೇ, ನೀವು ನಮ್ಮ ಮೇಲೆ ಮಿತಿಮೀರಿ ಸಿಟ್ಟುಗೊಂಡಿರುವಿರೋ?
ನಮ್ಮನ್ನು ಸಂಪೂರ್ಣವಾಗಿ ಕೈಬಿಟ್ಟಿರುವಿರೋ?

<- ಪ್ರಲಾಪಗಳು 4