6 “ನೀವು ಬಲಗೊಳ್ಳಿರಿ, ಎಡಕ್ಕಾಗಲಿ, ಬಲಕ್ಕಾಗಲಿ ತಿರುಗದೆ, ಮೋಶೆಯ ನಿಯಮದ ಗ್ರಂಥದಲ್ಲಿ ಬರೆದಿರುವ ಎಲ್ಲವನ್ನು ಕೈಗೊಂಡು ನಡೆಯಿರಿ. 7 ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರಿಕೊಳ್ಳಬೇಡಿರಿ. ಅವರ ದೇವರುಗಳ ಹೆಸರುಗಳನ್ನು ಸ್ಮರಿಸಲೂ ಬೇಡಿರಿ. ಅವುಗಳ ಮೇಲೆ ಆಣೆಯೂ ಇಡಬೇಡಿರಿ. ಅವುಗಳಿಗೆ ಆರಾಧನೆ ಮಾಡಬಾರದು. ಅಡ್ಡಬೀಳಲೂಬಾರದು. 8 ಆದರೆ, ಈವರೆಗೂ ಹೇಗೋ ಹಾಗೆಯೇ ಇನ್ನು ಮುಂದೆಯೂ ನಿಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿರಿ.
9 “ಯೆಹೋವ ದೇವರು ನಿಮ್ಮ ಮುಂದೆ ಬಲವಾದ ದೊಡ್ಡ ರಾಷ್ಟ್ರಗಳನ್ನು ಸಹ ಹೊರಡಿಸಿಬಿಟ್ಟರು. ನಿಮ್ಮ ಮುಂದೆ ಈವರೆಗೂ ಒಬ್ಬರಾದರೂ ನಿಲ್ಲಲಾರದೆ ಹೋದರು. 10 ನಿಮ್ಮ ದೇವರಾದ ಯೆಹೋವ ದೇವರು ತಮ್ಮ ವಾಗ್ದಾನದಂತೆಯೇ ನಿಮಗೋಸ್ಕರ ಯುದ್ಧ ಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವುದಕ್ಕೆ ಶಕ್ತನಾದನು. 11 ಹೀಗಿರುವುದರಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಂಡು ನಿಮ್ಮ ದೇವರಾದ ಯೆಹೋವ ದೇವರನ್ನೇ ಪ್ರೀತಿಸಿರಿ.
12 “ಆದರೆ, ನೀವು ದೇವರಿಂದ ತಿರುಗಿಕೊಂಡು ನಿಮ್ಮಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರಿಕೊಂಡು ಅವರೊಂದಿಗೆ ಮದುವೆ ಮಾಡಿಕೊಟ್ಟರೆ, ನೀವು ಅವರ ಬಳಿಗೂ ಅವರು ನಿಮ್ಮ ಬಳಿಗೂ ಪ್ರವೇಶಿಸಿದರೆ, 13 ನಿಮ್ಮ ದೇವರಾದ ಯೆಹೋವ ದೇವರು ಇನ್ನು ಮೇಲೆ ಈ ಜನಾಂಗಗಳನ್ನು ನಿಮ್ಮ ಮುಂದೆ ಹೊರಡಿಸಿಬಿಡುವುದಿಲ್ಲ. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಈ ಒಳ್ಳೆಯ ನಾಡಿನೊಳಗಿಂದ ನೀವು ನಾಶವಾಗುವವರೆಗೂ ಅವರು ನಿಮಗೆ ಉರುಲೂ ಬೋನೂ ಆಗಿರುವರು. ಇದಲ್ಲದೆ ದೇವರು ನಿಮ್ಮ ಪಕ್ಕೆಯಲ್ಲಿ ಶೂಲವಾಗಿಯೂ ನಿಮ್ಮ ಕಣ್ಣುಗಳಿಗೆ ಮುಳ್ಳುಗಳಾಗಿಯೂ ಇರುವರೆಂದು ನಿಶ್ಚಯವಾಗಿ ತಿಳಿದುಕೊಳ್ಳುವಿರಿ.
14 “ಭೂನಿವಾಸಿಗಳೆಲ್ಲರು ಹೋಗುವ ಮಾರ್ಗವಾಗಿ ಇಂದು ನಾನು ಹೋಗಬೇಕಾಗಿದೆ. ನಿಮ್ಮ ದೇವರಾದ ಯೆಹೋವ ದೇವರು ನಿಮಗೋಸ್ಕರ ಹೇಳಿದ ಎಲ್ಲಾ ಒಳ್ಳೆಯ ವಾಗ್ದಾನಗಳಲ್ಲಿ ಒಂದೂ ತಪ್ಪಲಿಲ್ಲವೆಂದು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ಅರಿತಿದ್ದೀರಿ. ಅವುಗಳಲ್ಲಿ ಒಂದು ಮಾತಾದರೂ ತಪ್ಪದೆ ಅವೆಲ್ಲಾ ನಿಮಗೆ ಸಂಭವಿಸಿದವು. 15 ಈಗ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಒಳ್ಳೆಯ ಕಾರ್ಯಗಳೆಲ್ಲಾ ನಿಮಗೆ ಹೇಗೆ ಸಂಭವಿಸಿದವೋ 16 ಹಾಗೆಯೇ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದ ಒಡಂಬಡಿಕೆಯನ್ನು ನೀವು ಉಲ್ಲಂಘಿಸಿ, ಅನ್ಯದೇವರುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ನಿಮ್ಮನ್ನು ನಾಶಮಾಡುವ ಮಟ್ಟಿಗೂ ಅವರು ನಿಮ್ಮ ಮೇಲೆ ಸಕಲ ಕೇಡುಗಳನ್ನು ಬರಮಾಡುವರು. ಯೆಹೋವ ದೇವರ ಕೋಪವು ನಿಮ್ಮ ಮೇಲೆ ಉರಿಯುವುದು. ಅವರು ನಿಮಗೆ ಕೊಟ್ಟ ಒಳ್ಳೆಯ ದೇಶದಿಂದ ನೀವು ಬೇಗನೆ ನಾಶವಾಗಿಹೋಗುವಿರಿ,” ಎಂದನು.
<- ಯೆಹೋಶುವ 22ಯೆಹೋಶುವ 24 ->