10 “ಈಗ ಯೆಹೋವ ದೇವರು ಮೋಶೆಗೆ ಈ ವಾಕ್ಯವನ್ನು ಹೇಳಿದಂದಿನಿಂದ ಇಸ್ರಾಯೇಲರು ಮರುಭೂಮಿಯಲ್ಲಿ ಸಂಚರಿಸಿದ ನಾಲ್ವತ್ತೈದು ವರ್ಷ ಯೆಹೋವ ದೇವರು ಹೇಳಿದ ಹಾಗೆಯೇ ನನ್ನನ್ನು ಜೀವದಿಂದ ಇಟ್ಟಿದ್ದಾರೆ. ಈಗ ನಾನು ಇಂದು ಎಂಬತ್ತೈದು ವರ್ಷ ಪ್ರಾಯದವನಾಗಿದ್ದೇನೆ. 11 ಮೋಶೆ ನನ್ನನ್ನು ಕಳುಹಿಸಿದ ದಿವಸದಲ್ಲಿ ನಾನು ಹೇಗೆ ಬಲಿಷ್ಠನಾಗಿ ಇದ್ದೆನೋ, ಹಾಗೆಯೇ ಈಗಲೂ ಬಲಿಷ್ಠನಾಗಿದ್ದೇನೆ. ನಾನು ಯುದ್ಧ ಮಾಡುವದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವದಕ್ಕೂ ನನಗೆ ಆಗ ಇದ್ದ ಶಕ್ತಿಯ ಹಾಗೆಯೇ ಈಗಲೂ ಶಕ್ತಿಯುಳ್ಳವನಾಗಿದ್ದೇನೆ. 12 ಆದ್ದರಿಂದ ಯೆಹೋವ ದೇವರು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಏಕೆಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ, ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿವಸದಲ್ಲಿ ಕೇಳಿದ್ದಿ. ಯೆಹೋವ ದೇವರು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಯೆಹೋವ ದೇವರು ನನಗೆ ಸಹಾಯ ಮಾಡುವರೆಂದು ನಂಬಿಕೊಂಡಿದ್ದೇನೆ,” ಎಂದನು.
13 ಆಗ ಯೆಹೋಶುವನು ಯೆಫುನ್ನೆಯ ಮಗ ಕಾಲೇಬನನ್ನು ಆಶೀರ್ವದಿಸಿ, ಅವನಿಗೆ ಹೆಬ್ರೋನನ್ನು ಸೊತ್ತಾಗಿ ಕೊಟ್ಟನು. 14 ಹೀಗೆಯೇ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದ ಕಾರಣ, ಹೆಬ್ರೋನು ಇಂದಿನವರೆಗೂ ಅವನ ಸೊತ್ತಾಗಿದೆ. 15 ಹೆಬ್ರೋನಿನ ಮೊದಲಿನ ಹೆಸರು ಕಿರ್ಯತ್ ಅರ್ಬ. “ಅರ್ಬ” ಎಂಬುವವನು ಅನಾಕ್ಯರಲ್ಲಿ ಪ್ರಮುಖನಾಗಿದ್ದನು.