Link to home pageLanguagesLink to all Bible versions on this site
6
ಯೋಬನ ವಾದ
1 ಅದಕ್ಕೆ ಯೋಬನು ಉತ್ತರವಾಗಿ ಹೀಗೆಂದನು:
2 “ಅಯ್ಯೋ, ನನ್ನ ವ್ಯಥೆಯನ್ನು ತೂಕಮಾಡಿ ನೋಡಿದರೆ ಒಳ್ಳೇದು,
ನನ್ನ ದುಃಖವನ್ನೆಲ್ಲಾ ತಕ್ಕಡಿಗೆ ಹಾಕಿದರೆ ಲೇಸು.
3 ಏಕೆಂದರೆ ನನ್ನ ಕಷ್ಟ ಈಗಲೇ ಸಮುದ್ರದ ಮರಳಿಗಿಂತ ಭಾರವಾಗಿದೆ;
ನನ್ನ ಮಾತುಗಳು ದುಡುಕಿದ್ದರಲ್ಲಿ ಆಶ್ಚರ್ಯವಿಲ್ಲ.
4 ಸರ್ವಶಕ್ತರ ಬಾಣಗಳು ನನ್ನಲ್ಲಿ ನಾಟಿವೆ;
ಅವುಗಳ ವಿಷವನ್ನು ನನ್ನ ಆತ್ಮವು ಹೀರುತ್ತಿದೆ;
ದೇವರ ವಿಷಯವಾದ ಹೆದರಿಕೆಗಳು ನನ್ನನ್ನು ಸುತ್ತುವರೆದಿವೆ.
5 ಹುಲ್ಲು ಇರುವಾಗ ಕಾಡುಕತ್ತೆಯು ಅರಚುವುದೋ?
ಮೇವು ಇದ್ದರೆ ಎತ್ತು ಕೂಗುವುದೋ?
6 ರುಚಿ ಇಲ್ಲದ ಆಹಾರನ್ನು ಉಪ್ಪಿಲ್ಲದೆ ತಿನ್ನಬಹುದೋ?
ಕೋಳಿ ಮೊಟ್ಟೆಯ ಲೋಳೆಯಲ್ಲಿ ರುಚಿಯುಂಟೋ[a]?
7 ಮುಟ್ಟಲು ಕೂಡ ನನಗೆ ಇಷ್ಟವಾಗಲಿಲ್ಲ,
ಅಂಥ ಆಹಾರವು ನನಗೆ ಬೇಸರ.
 
8 “ದೇವರು ನನ್ನ ವಿಜ್ಞಾಪನೆಯನ್ನು ಲಾಲಿಸಿದರೆ ಸಾಕು,
ನಾನು ನಿರೀಕ್ಷಿಸಿದ್ದನ್ನು ದೇವರು ಕೊಟ್ಟರೆ ಲೇಸು.
9 ನನ್ನನ್ನು ಜಜ್ಜುವುದು ದೇವರಿಗೆ ಮೆಚ್ಚಿಗೆಯಾದರೆ,
ದೇವರು ತಮ್ಮ ಕೈಚಾಚಿ ನನ್ನ ಪ್ರಾಣವನ್ನು ತೆಗೆದುಕೊಳ್ಳಲಿ.
10 ಹಾಗಿದ್ದರೆ, ಇದು ನನಗೆ ಆದರಣೆಯಾಗಿರುವುದು;
ಪರಿಶುದ್ಧ ದೇವರ ಮಾತುಗಳನ್ನು ನನ್ನ ಅತ್ಯಂತ ಯಾತನೆಯಲ್ಲಿಯೂ ನಾನು ನಿರಾಕರಿಸಲಿಲ್ಲ;
ಇದರಿಂದ ಬರುವ ಆನಂದವು ನನಗೆ ಇನ್ನೂ ಇರುವುದು.
 
11 “ನಾನು ನಿರೀಕ್ಷೆಯಿಂದಿರಲು, ನನಗೆ ಶಕ್ತಿ ಎಲ್ಲಿದೆ?
ನಾನು ಸಹನೆಯಿಂದಿರಲು, ನನಗೆ ಭವಿಷ್ಯ ಏನಿದೆ?
12 ನನ್ನ ಶಕ್ತಿ ಕಲ್ಲುಗಳ ಶಕ್ತಿಯೋ?
ನನ್ನ ಶರೀರ ಕಂಚಿನ ಶರೀರವೋ?
13 ನನಗೆ ಸಹಾಯವು ಇಲ್ಲದೆ ಹೋಗಿದೆಯಲ್ಲಾ?
ಈಗ ಯಶಸ್ಸು ಸಹ ನನ್ನಿಂದ ತೊಲಗಿಹೋಗಿದೆಯಲ್ಲಾ.
 
14 “ಒಬ್ಬನು ಸರ್ವಶಕ್ತರ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ,
ಅವನ ಮಿತ್ರನು ಅವನಿಗೆ ದಯೆ ತೋರಿಸಬೇಕು.
15 ಆದರೆ ನನ್ನ ಸಹೋದರರಾದರೋ, ಉಕ್ಕಿ ಹರಿಯುವ ತೊರೆಯಂತೆಯೂ,
ಬತ್ತಿದ ಹಳ್ಳದಂತೆಯೂ ಅಪನಂಬಿಗಸ್ತರಾಗಿದ್ದಾರೆ.
16 ಅವು ಮಂಜುಗಡ್ಡೆಯಿಂದ ಕಪ್ಪಾಗಿವೆ,
ಅವುಗಳಲ್ಲಿ ಹಿಮ ಅಡಗಿಕೊಳ್ಳುತ್ತದೆ.
17 ಉಷ್ಣ ಸಮಯದಲ್ಲಿ ಅವು ಹರಿಯುವದಿಲ್ಲ;
ಸೆಕೆಯಾದಾಗ ಬತ್ತಿ ಅದರ ಸ್ಥಳದಿಂದ ಮಾಯವಾಗುತ್ತವೆ.
18 ಇಂಥಾ ತೊರೆಗಳ ಮಾರ್ಗವಾಗಿ ಪ್ರಯಾಣ ಮಾಡುವ ವರ್ತಕರ ಗುಂಪುಗಳು,
ದಾರಿತಪ್ಪಿ ಮರಳುಗಾಡಿನಲ್ಲಿ ಅಲೆದು ನಾಶವಾಗುತ್ತವೆ.
19 ತೇಮದ ವರ್ತಕರ ಗುಂಪುಗಳು ನೀರಿಗಾಗಿ ಹಂಬಲಿಸುತ್ತಾರೆ;
ಶೆಬದ ವ್ಯಾಪಾರಿಗಳು ನಿರೀಕ್ಷೆಯಿಂದ ನೋಡುತ್ತಾರೆ.
20 ಅವರು ನಿರೀಕ್ಷಿಸಿದ್ದರಿಂದ ವ್ಯಥೆಗೊಂಡರು;
ಅವರು ಬಂದು ಸ್ಥಳಸೇರಿದರೂ ನಿರಾಶರಾದರು.
21 ಈಗ ನೀವು ಸಹ ಹಾಗೆಯೇ ನಿಸ್ಸಹಾಯಕರಾಗಿ ಇದ್ದೀರಿ;
ಏಕೆಂದರೆ ನೀವು ನನ್ನ ವಿಪತ್ತನ್ನು ಕಂಡು ಹಿಂಜರಿಯುತ್ತೀರಿ.
22 ನಾನು ನಿಮ್ಮನ್ನು, ‘ನನಗೆ ದಾನಮಾಡಿರಿ,’ ಎಂದು ಬಿನ್ನವಿಸಿದೆನೋ?
‘ನಿಮ್ಮ ಆಸ್ತಿಯಿಂದ ನನಗಾಗಿ ಈಡು ಕೊಡಿರಿ,’ ಎಂದೆನೋ?
23 ‘ಶತ್ರುವಿನ ಕೈಯಿಂದ ನನ್ನನ್ನು ತಪ್ಪಿಸಿರಿ,’ ಎಂದೂ,
‘ಬಲಾತ್ಕಾರಿಗಳ ಕೈಗಳಿಂದ ನನ್ನನ್ನು ವಿಮೋಚಿಸಿರಿ,’ ಎಂದೂ ನಾನು ಕೇಳಿದೆನೋ?
 
24 “ನನಗೆ ಬೋಧಿಸಿರಿ, ನಾನು ಮೌನವಾಗಿರುವೆನು;
ನಾನು ಮಾಡಿದ ತಪ್ಪನ್ನು ನನಗೆ ತಿಳಿಸಿರಿ.
25 ಯಥಾರ್ಥ ಮಾತುಗಳು ಎಷ್ಟೋ ನೋವನ್ನು ತರುತ್ತವೆ!
ಆದರೆ ನಿಮ್ಮ ತರ್ಕವು ರುಜುಪಡಿಸುವುದೇನು?
26 ನಾನು ಹೇಳಿದ ಮಾತುಗಳನ್ನು ತಿದ್ದಬೇಕೆನ್ನುವಿರೋ?
ಬೇಸರದ ನನ್ನ ಮಾತುಗಳು ನಿಮಗೆ ಗಾಳಿಮಾತುಗಳೋ?
27 ತಂದೆಯಿಲ್ಲದವರಿಗಾಗಿ ಚೀಟು ಹಾಕುತ್ತೀರಿ,
ನಿಮ್ಮ ಸ್ನೇಹಿತನನ್ನು ಮಾರಿಬಿಡುತ್ತೀರಿ.
 
28 “ಆದ್ದರಿಂದ ಈಗ ಸ್ವಲ್ಪ ದಯೆಯುಳ್ಳವರಾಗಿ ನನ್ನನ್ನು ದೃಷ್ಟಿಸಿರಿ;
ನಾನು ನಿಮ್ಮೆದುರಿನಲ್ಲಿ ಸುಳ್ಳು ಹೇಳುವೆನೋ?
29 ಕರುಣೆ ತೋರಿಸಿರಿ, ಅನ್ಯಾಯವಾಗದಿರಲಿ;
ಪುನಃ ಯೋಚಿಸಿರಿ, ನನ್ನ ಪ್ರಾಮಾಣಿಕತೆಯು ಪ್ರಶ್ನಿಸಲಾಗಿದೆ.
30 ನನ್ನ ನಾಲಿಗೆಯಲ್ಲಿ ದುಷ್ಟತನ ಇದೆಯೋ?
ವಿಪತ್ತುಗಳ ವಿವೇಚನೆಯು ನನಗಿಲ್ಲವೋ?