Link to home pageLanguagesLink to all Bible versions on this site

1 ಎಲೀಹು ಮತ್ತೆ ಹೇಳಿದ್ದೇನೆಂದರೆ:

2 “ಯೋಬನೇ, ‘ನನ್ನ ನೀತಿಯು ದೇವರ ನೀತಿಗಿಂತ ದೊಡ್ಡದು,’ ಎಂದು
ನೀನು ಹೇಳಿದ್ದು ಸರಿಯೆಂದು ನೆನಸುತ್ತೀಯೋ?
3 ಏಕೆಂದರೆ, ‘ನೀತಿಯಿಂದ ನನಗೇನು ಪ್ರಯೋಜನವಾಯಿತು?
ನಾನು ಪಾಪಮಾಡದೆ ಇದ್ದುದರಿಂದ ನನಗೆ ಲಾಭವೇನು? ಎಂದು ನೀನು ದೇವರಿಗೆ ಕೇಳಿದಿ.’
 
4 “ನಾನು ನಿನಗೂ, ನಿನ್ನ ಸಂಗಡ
ಇರುವ ಸ್ನೇಹಿತರಿಗೂ ಈಗ ಉತ್ತರ ಕೊಡುತ್ತೇನೆ.
5 ಆಕಾಶಗಳನ್ನು ದೃಷ್ಟಿಸಿ ನೋಡು;
ನಿನಗಿಂತಲೂ ಎತ್ತರವಾಗಿರುವ ಮೇಘಗಳನ್ನು ದೃಷ್ಟಿಸು.
6 ನೀನು ಪಾಪಮಾಡಿದರೆ, ಅದು ದೇವರನ್ನು ಹೇಗೆ ಬಾಧಿಸುತ್ತದೆ?
ನಿನ್ನ ಪಾಪಗಳು ಹೆಚ್ಚಾಗಿದ್ದರೆ, ಅದು ದೇವರಿಗೆ ಏನು ಮಾಡುವುದು?
7 ನೀನು ನೀತಿವಂತನಾಗಿದ್ದರೆ, ದೇವರಿಗೇನು ಕೊಟ್ಟಂತಾಯಿತು?
ಅಥವಾ ದೇವರು ನಿನ್ನ ಕೈಯಿಂದ ಏನು ತೆಗೆದುಕೊಂಡಂತಾಯಿತು?
8 ನಿನ್ನ ದುಷ್ಟತನವು ನಿನ್ನಂಥವರನ್ನೇ ಬಾಧಿಸುವುದು;
ನಿನ್ನ ನೀತಿಯಿಂದ ಬೇರೆ ಜನರಿಗೆ ಮಾತ್ರ ಲಾಭವಾಗುವುದು.
 
9 “ಅಪಾರ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾರೆ;
ಬಲಿಷ್ಠರ ಭುಜಬಲದಿಂದ ಪೀಡಿತರು ಕಿರಿಚಿಕೊಳ್ಳುತ್ತಾರೆ.
10 ಆದರೆ, ‘ರಾತ್ರಿಯಲ್ಲಿ ಗೀತೆಗಳನ್ನು ಕೊಡುವ
ನನ್ನ ಸೃಷ್ಟಿಕರ್ತರಾದ ದೇವರು ಎಲ್ಲಿ?
11 ಭೂಮಿಯ ಮೃಗಗಳಿಗಿಂತ ನಮಗೆ ಹೆಚ್ಚು ಬುದ್ಧಿಕಲಿಸಿಕೊಡುವ ದೇವರು ಎಲ್ಲಿ?
ಆಕಾಶದ ಪಕ್ಷಿಗಳಿಗಿಂತ ನಮಗೆ ಅಧಿಕ ಜ್ಞಾನವನ್ನು ಕೊಡುವ ದೇವರು ಎಲ್ಲಿ?’
ಎಂದು ಯಾರೂ ಹೇಳುವುದಿಲ್ಲ.
12 ಜನರು ದುಷ್ಟರ ಸೊಕ್ಕಿನಿಂದ ನೊಂದು ಗೋಳಾಡುತ್ತಾರೆ;
ಆದರೂ ದೇವರು ಅವರಿಗೆ ಉತ್ತರವನ್ನು ದಯಪಾಲಿಸುವುದಿಲ್ಲ.
13 ನಿಶ್ಚಯವಾಗಿ ವ್ಯರ್ಥಮಾತನ್ನು ದೇವರು ಕೇಳುವುದಿಲ್ಲ;
ಸರ್ವಶಕ್ತರು ಬರೀಮಾತನ್ನು ಲಕ್ಷಿಸುವುದಿಲ್ಲ.
14 ಹೀಗಿರಲು, ‘ದೇವರು ಕಾಣುವುದಿಲ್ಲ,
ನನ್ನ ವ್ಯಾಜ್ಯವು ದೇವರ ಮುಂದೆ ಇದೆ;
ದೇವರಿಗಾಗಿ ಕಾದಿರುತ್ತೇನೆ,’ ಎಂದು ನೀನು ಹೇಳಿದರೆ,
ದೇವರು ನಿನಗೆ ಕಿವಿಗೊಡುವರೋ?
15 ದೇವರು ಕೋಪದಿಂದ ದುಷ್ಟರನ್ನು ದಂಡಿಸದೆ ಇರುವ ಕಾರಣ,
‘ಆಹಾ, ದೇವರು ದ್ರೋಹವನ್ನು ಅಷ್ಟಾಗಿ ಗಮನಿಸುವುದಿಲ್ಲ,’
ಎಂದು ನೀನು ಹೇಳುವಾಗ ದೇವರು ಕೇಳಿಸಿಕೊಳ್ಳುವರೋ?
16 ಆದ್ದರಿಂದ ಯೋಬನಾದ ನೀನು ವ್ಯರ್ಥವಾಗಿ ಬಾಯಿತೆರೆದು,
ತಿಳುವಳಿಕೆಯಿಲ್ಲದೆ ಬಹಳ ಮಾತಾಡಿರುವಿ.”

<- ಯೋಬ 34ಯೋಬ 36 ->