Link to home pageLanguagesLink to all Bible versions on this site
17
1 ನನ್ನ ಆತ್ಮ ಮುರಿದುಹೋಗಿದೆ;
ನನ್ನ ದಿನಗಳು ಮುಗಿದಿವೆ;
ಸಮಾಧಿ ನನಗೆ ಸಿದ್ಧವಾಗಿದೆ.
2 ಅಪಹಾಸ್ಯಗಾರರು ನನ್ನ ಬಳಿಯಲ್ಲಿ ಇದ್ದಾರೆ;
ಅವರ ಹಗೆತನದ ಬಗ್ಗೆ ನಾನು ಎಚ್ಚರವಾಗಿರಬೇಕು.
 
3 “ದೇವರೇ, ನೀವು ಹಕ್ಕಾಗಿ ಕೇಳುವ ಈಡನ್ನು ನೀವೇ ನನಗೆ ಕೊಡಿರಿ;
ನಿಮ್ಮನ್ನು ಬಿಟ್ಟು ಯಾರು ನನಗೆ ಭದ್ರತೆಯನ್ನು ಕೊಡುವವರು?
4 ತಿಳುವಳಿಕೆ ಪ್ರವೇಶಿಸದಂತೆ ನೀವು ನನ್ನ ಸ್ನೇಹಿತರ ಮನಸ್ಸನ್ನು ಮುಚ್ಚಿರುವಿರಿ;
ಆದ್ದರಿಂದ ನೀವು ಅವರನ್ನು ಜಯಿಸುವುದಕ್ಕೆ ಬಿಡುವುದಿಲ್ಲ.
5 ಯಾರು ಸ್ವಂತ ಲಾಭಕ್ಕಾಗಿ ಸ್ನೇಹಿತರಿಗೆ ದ್ರೋಹ ಮಾಡುತ್ತಾರೋ,
ಅಂಥವರ ಮಕ್ಕಳ ಕಣ್ಣುಗಳು ಮಂಕಾಗಿಬಿಡುವುದು.
 
6 “ದೇವರು ನನ್ನನ್ನು ಜನರ ಕಟ್ಟುಗಾದೆಗೆ ಆಸ್ಪದ ಮಾಡಿದ್ದಾರೆ;
ನನ್ನನ್ನು ಕಾಣುವವರು ನನ್ನ ಮುಖಕ್ಕೆ ಉಗುಳುವಂತೆ ಮಾಡಿದ್ದಾರೆ.
7 ನನ್ನ ಕಣ್ಣು ದುಃಖದಿಂದ ಮೊಬ್ಬಾಗಿವೆ;
ನನ್ನ ಅಂಗಗಳೆಲ್ಲಾ ನೆರಳಿನ ಹಾಗೆ ಇವೆ.
8 ಪ್ರಾಮಾಣಿಕರು ಇದನ್ನು ನೋಡಿ ಬೆರಗಾಗಿದ್ದಾರೆ;
ನಿರಪರಾಧಿಯು ಭಕ್ತಿಹೀನರ ವಿಷಯದಲ್ಲಿ ಎಚ್ಚರಗೊಳ್ಳುತ್ತಾನೆ.
9 ಆದರೆ ನೀತಿವಂತನು ತನ್ನ ಮಾರ್ಗದಲ್ಲಿ ಮುಂದುವರಿಯುವನು;
ಶುದ್ಧ ಕೈಗಳುಳ್ಳವರು ಬಲದಲ್ಲಿ ಬೆಳೆಯುತ್ತಾ ಇರುವರು.
 
10 “ಆದರೆ ನೀವೆಲ್ಲರೂ ಬಂದು ಮತ್ತೆ ವಾದ ಮಾಡಲು ಪ್ರಯತ್ನಿಸಿರಿ!
ನಿಮ್ಮಲ್ಲಿ ನಾನು ಒಬ್ಬ ಜ್ಞಾನಿಯನ್ನು ಸಹ ಕಂಡುಕೊಳ್ಳಲಿಲ್ಲ.
11 ನನ್ನ ದಿನಗಳು ಮುಗಿದು ಹೋದವು;
ನನ್ನ ಹೃದಯದ ಬಯಕೆಯಾಗಿರುವ ನನ್ನ ಉದ್ದೇಶಗಳು ಭಂಗವಾದವು.
12 ನನ್ನ ಸ್ನೇಹಿತರು ರಾತ್ರಿಯನ್ನು ಹಗಲು ಎಂದು ಸಾಧಿಸುತ್ತಾರೆ;
ಕತ್ತಲಿಂದ ಬೆಳಕು ಬೇಗ ಬರಲಿದೆ ಎನ್ನುತ್ತಾರೆ.
13 ಸಮಾಧಿಯೇ ನನ್ನ ಮನೆಯೆಂದು ನಾನು ನಿರೀಕ್ಷಿಸಿದರೆ,
ಕತ್ತಲೆಯಲ್ಲಿ ನನ್ನ ಹಾಸಿಗೆಯನ್ನು ಹಾಸಿಕೊಂಡರೆ,
14 ಸಮಾಧಿಗೆ, ‘ನೀನು ನನ್ನ ತಂದೆ’ ಎಂದೂ,
ಹುಳಕ್ಕೆ, ‘ನನ್ನ ತಾಯಿ, ನನ್ನ ತಂಗಿ’ ಎಂದೂ ನಾನು ಕರೆಯುವುದಾದರೆ,
15 ನನ್ನ ನಿರೀಕ್ಷೆ ಎಲ್ಲಿ?
ನನ್ನ ನಿರೀಕ್ಷೆಯನ್ನು ಯಾರು ನೋಡುವರು?
16 ನಿರೀಕ್ಷೆಯು ನನ್ನ ಸಂಗಡ ಪಾತಾಳಕ್ಕೆ ಇಳಿದು ಬರುವುದೇ?
ನಾವು ಜೊತೆಯಾಗಿ ಮಣ್ಣಿಗೆ ಸೇರಲಾದೀತೆ?”

<- ಯೋಬ 16ಯೋಬ 18 ->