Link to home pageLanguagesLink to all Bible versions on this site
11
ಚೋಫರನ ವಾದ
1 ಆಗ ನಾಮಾಥ್ಯನಾದ ಚೋಫರನು ಹೀಗೆಂದನು:
2 “ಬಹಳ ಮಾತುಗಳಿಂದ ಉತ್ತರ ಕೊಡಬಾರದೋ?
ಬಾಯಿ ಬಡುಕನು ನೀತಿವಂತನೆಂದು ಎನಿಸಿಕೊಳ್ಳುವನೋ?
3 ನಿನ್ನ ವ್ಯರ್ಥ ಮಾತಿಗೆ ಮನುಷ್ಯರು ಮೌನವಾಗಿರಬೇಕೋ?
ನೀನು ಗೇಲಿ ಮಾಡುವಾಗ ಯಾವನೂ ನಿನ್ನನ್ನು ಖಂಡಿಸುವುದಿಲ್ಲವೋ?
4 ಏಕೆಂದರೆ ನೀನು, ‘ನನ್ನ ನಂಬಿಕೆ ತಪ್ಪಿಲ್ಲದ್ದು,
ನಿಮ್ಮ ದೃಷ್ಟಿಯಲ್ಲಿ ನಾನು ಶುದ್ಧನಾಗಿದ್ದೇನೆ,’ ಎಂದು ದೇವರಿಗೆ ಹೇಳಿದ್ದೀ.
5 ಆಹಾ, ದೇವರು ಮಾತನಾಡಿ,
ನಿನ್ನ ವಿರೋಧವಾಗಿ ತಮ್ಮ ತುಟಿಗಳನ್ನು ತೆರೆದು,
6 ಜ್ಞಾನದ ಮರ್ಮಗಳನ್ನು ನಿನಗೆ ತೋರಿಸಿದರೆ ಒಳ್ಳೆಯದು,
ನಿಜ ಜ್ಞಾನಕ್ಕೆ ಎರಡು ಬದಿಗಳಿವೆ;
ದೇವರು ನಿನ್ನ ಪಾಪಗಳನ್ನು ತಮ್ಮ ಲಕ್ಷ್ಯಕ್ಕೆ ತರಲಿಲ್ಲ ಎಂದು ತಿಳಿದುಕೋ.
 
7 “ನೀನು ದೇವರ ರಹಸ್ಯಗಳನ್ನು ಕಂಡುಕೊಳ್ಳುವಿಯಾ?
ಸರ್ವಶಕ್ತರ ಮಿತಿಯನ್ನು ನಿನ್ನಿಂದ ಪರೀಕ್ಷಿಸಲಾದೀತೇ?
8 ಅದು ಆಕಾಶಕ್ಕಿಂತಲೂ ಎತ್ತರವಾಗಿದೆ; ಆಗ ನೀನೇನು ಮಾಡುವಿ?
ಅದು ಪಾತಾಳಕ್ಕಿಂತಲೂ ಆಳವಾಗಿದೆ; ಆಗ ನೀನೇನು ತಿಳುಕೊಳ್ಳುವಿ?
9 ಅದರ ಅಳತೆ ಭೂಮಿಗಿಂತ ಉದ್ದವೂ,
ಸಮುದ್ರಕ್ಕಿಂತ ಅಗಲವೂ ಆಗಿದೆ.
 
10 “ದೇವರು ಬಂದು ನಿನ್ನನ್ನು ಸೆರೆಮನೆಯಲ್ಲಿಟ್ಟರೂ,
ನ್ಯಾಯವಿಚಾರಣೆಗೆ ಕರೆದರೂ, ದೇವರನ್ನು ತಡೆಯುವವರು ಯಾರು?
11 ಖಂಡಿತವಾಗಿ ದೇವರು ಮೋಸಗಾರರನ್ನು ಗುರುತಿಸುತ್ತಾರೆ;
ದೇವರು ದುಷ್ಟತನವನ್ನು ನೋಡಿ ಅದನ್ನು ಗ್ರಹಿಸಿಕೊಳ್ಳದೆ ಇರುತ್ತಾರೋ?
12 ಒಂದು ಕಾಡುಕತ್ತೆ ಮರಿಗೆ ಹೇಗೆ ಮನುಷ್ಯನಾಗಲು ಸಾಧ್ಯವಿಲ್ಲವೋ,
ಹಾಗೆಯೇ ದಡ್ಡ ಮನುಷ್ಯನು ಜ್ಞಾನಿಯಾಗಲು ಸಾಧ್ಯವಿಲ್ಲ.
 
13 “ಆದರೂ ನೀನು ನಿನ್ನ ಹೃದಯವನ್ನು ದೇವರಿಗೆ ಸಮರ್ಪಿಸಿ,
ನಿನ್ನ ಕೈಗಳನ್ನು ದೇವರ ಕಡೆಗೆ ಚಾಚಿ,
14 ನಿನ್ನ ಕೈಯಲ್ಲಿರುವ ಪಾಪವನ್ನು ದೂರಮಾಡಿಬಿಟ್ಟು,
ದುಷ್ಟತನವನ್ನು ನಿನ್ನ ಗುಡಾರಗಳಲ್ಲಿ ವಾಸಿಸಲು ಅನುಮತಿಸದಿದ್ದರೆ,
15 ನೀನು ದೋಷದಿಂದ ಬಿಡುಗಡೆಯಾಗಿ ನಿನ್ನ ಮುಖವನ್ನು ಎತ್ತುವಿ;
ಹೌದು, ನೀನು ಸ್ಥಿರವಾಗಿದ್ದು, ಹೆದರದೆ ಇರುವಿ.
16 ಖಂಡಿತವಾಗಿ ನಿನ್ನ ಕಷ್ಟವನ್ನು ಮರೆತುಬಿಡುವಿ;
ಹರಿದುಹೋದ ನೀರಿನ ಹಾಗೆ ಅದನ್ನು ಜ್ಞಾಪಕಮಾಡಿಕೊಳ್ಳುವಿ.
17 ನಿನ್ನ ಜೀವಮಾನವು ಮಧ್ಯಾಹ್ನಕ್ಕಿಂತ ಪ್ರಜ್ವಲಿಸುವುದು;
ನಿನ್ನ ಕತ್ತಲೆಯು ಬೆಳಗಿನಂತೆ ಇರುವುದು.
18 ನೀನು ನಿರೀಕ್ಷೆ ಇದೆ ಎಂದು ಭರವಸೆಯಿಂದ ಇರುವಿ;
ನೀನು ನಿನ್ನ ಬಗ್ಗೆ ಯೋಚಿಸಿ ಭರವಸೆಯಿಂದ ವಿಶ್ರಾಂತಿ ತೆಗೆದುಕೊಳ್ಳುವಿ.
19 ನೀನು ಮಲಗಿಕೊಂಡಾಗ ಯಾರೂ ನಿನ್ನನ್ನು ಹೆದರಿಸರು;
ಅನೇಕರು ನಿನ್ನಿಂದ ಮೆಚ್ಚಿಕೆಯನ್ನು ಅಪೇಕ್ಷಿಸುವರು.
20 ಆದರೆ ದುಷ್ಟರ ಕಣ್ಣುಗಳು ಕುಂದುವವು;
ಅವರು ತಪ್ಪಿಸಿಕೊಳ್ಳುವುದಿಲ್ಲ;
ಪ್ರಾಣಬಿಡಬೇಕೆಂಬುದೇ ಅವರ ನಿರೀಕ್ಷೆಯಾಗಿರುವುದು.”

<- ಯೋಬ 10ಯೋಬ 12 ->