12 “ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಇವೆ. ಆದರೆ ನೀವು ಈಗ ಅವುಗಳನ್ನು ತಾಳಿಕೊಳ್ಳಲಾರಿರಿ. 13 ಆದರೆ ಸತ್ಯದ ಆತ್ಮ ಬಂದಾಗ ಅವರು ನಿಮ್ಮನ್ನು ಎಲ್ಲಾ ಸತ್ಯದೊಳಗೆ ನಡೆಸುವರು. ಅವರು ತಮ್ಮಷ್ಟಕ್ಕೆ ತಾವೇ ಮಾತನಾಡದೆ ತಾವು ಕೇಳಿದವುಗಳನ್ನೇ ಮಾತನಾಡುವರು. ಮುಂದೆ ನಡೆಯಲಿರುವ ವಿಷಯಗಳನ್ನು ಅವರು ನಿಮಗೆ ಪ್ರಕಟಿಸುವರು. 14 ಅವರು ನನ್ನನ್ನು ಮಹಿಮೆಪಡಿಸುವರು. ಏಕೆಂದರೆ ಅವರು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ಪ್ರಕಟಿಸುವರು. 15 ತಂದೆಗೆ ಇರುವುದೆಲ್ಲವೂ ನನ್ನದೆ. ಆದ್ದರಿಂದಲೇ, ‘ಪವಿತ್ರಾತ್ಮ ದೇವರು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ಪ್ರಕಟಿಸುವರು,’ ಎಂದು ನಾನು ಹೇಳಿದೆನು.”
17 ಆಗ ಅವರ ಶಿಷ್ಯರಲ್ಲಿ ಕೆಲವರು, “ಇವರು ನಮಗೆ ಹೇಳುವುದೇನು? ‘ಸ್ವಲ್ಪಕಾಲ ನೀವು ನನ್ನನ್ನು ಕಾಣುವುದಿಲ್ಲ ಮತ್ತು ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ಕಾಣುವಿರಿ ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ,’ ಎನ್ನುತ್ತಾರಲ್ಲಾ? 18 ಇವರು ಹೇಳುವುದರ ಅರ್ಥವೇನು? ‘ಸ್ವಲ್ಪಕಾಲ’ ಎಂದು ಹೇಳುತ್ತಾರಲ್ಲ? ಇವರು ಏನು ಮಾತನಾಡುತ್ತಾರೋ ನಮಗೆ ತಿಳಿಯದು,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
19 ಶಿಷ್ಯರು ತಮ್ಮ ಬಗ್ಗೆ ಪ್ರಶ್ನಿಸಬಯಸುತ್ತಿದ್ದಾರೆಂದು ತಿಳಿದು ಯೇಸು, “ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ಕಾಣುವುದಿಲ್ಲ, ‘ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ಕಾಣುವಿರಿ ಎಂದು ನಾನು ನಿಮಗೆ ಹೇಳಿದ್ದರ ಕುರಿತಾಗಿ ನೀವು ಒಬ್ಬರಿಗೊಬ್ಬರು ವಿಚಾರಿಸಿಕೊಳ್ಳುತ್ತೀರೋ?’ 20 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಅತ್ತು ಗೋಳಾಡುವಿರಿ. ಆದರೆ ಲೋಕವು ಸಂತೋಷಿಸುವುದು; ನೀವು ದುಃಖಿಸುವಿರಿ ಆದರೆ ನಿಮ್ಮ ದುಃಖವು ಆನಂದವಾಗಿ ಮಾರ್ಪಡುವುದು. 21 ಒಬ್ಬ ಸ್ತ್ರೀಗೆ ಪ್ರಸವ ಗಳಿಗೆ ಬಂದಾಗ ದುಃಖವಿರುವುದು. ಆದರೆ ಆಕೆಯು ಮಗುವನ್ನು ಹೆತ್ತಾಗ ಈ ಲೋಕದೊಳಗೆ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಆಕೆಯು ಇನ್ನು ನೆನಪಿಗೆ ತಂದುಕೊಳ್ಳುವುದಿಲ್ಲ. 22 ಈಗ ನಿಮಗೆ ನಿಜವಾಗಿಯೂ ದುಃಖವಿದೆ. ಆದರೆ ನಾನು ನಿಮ್ಮನ್ನು ತಿರುಗಿ ಕಾಣುವೆನು; ಆಗ ನಿಮ್ಮ ಹೃದಯವು ಉಲ್ಲಾಸಿಸುವುದು. ನಿಮ್ಮ ಆನಂದವನ್ನು ನಿಮ್ಮಿಂದ ಯಾರೂ ತೆಗೆಯುವುದಿಲ್ಲ. 23 ಆ ದಿನದಲ್ಲಿ ನೀವು ನನ್ನನ್ನು ಏನೂ ಪ್ರಶ್ನಿಸುವುದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅವರು ನಿಮಗೆ ಕೊಡುವರು. 24 ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೂ ಕೇಳಿಕೊಳ್ಳಲಿಲ್ಲ. ಕೇಳಿರಿ, ನೀವು ಪಡೆದುಕೊಳ್ಳುವಿರಿ. ಆಗ ನಿಮ್ಮ ಆನಂದವು ಪರಿಪೂರ್ಣವಾಗಿರುವುದು.
25 “ಇವುಗಳನ್ನು ನಾನು ಸೂಚಕವಾಗಿ ನಿಮ್ಮೊಡನೆ ಮಾತನಾಡಿದ್ದೇನೆ. ನಾನು ಇನ್ನು ಸಾಮ್ಯಗಳಿಂದ ಮಾತನಾಡದೆ ತಂದೆಯ ವಿಷಯವಾಗಿ ನಿಮಗೆ ಸ್ಪಷ್ಟವಾಗಿ ಪ್ರಕಟಿಸುವ ಗಳಿಗೆಯು ಬರುತ್ತದೆ. 26 ಆ ದಿವಸದಲ್ಲಿ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವಿರಿ. ನಿಮ್ಮ ವಿಷಯವಾಗಿ ತಂದೆಯನ್ನು ಕೇಳಿಕೊಳ್ಳುವೆನೆಂದು ನಾನು ನಿಮಗೆ ಹೇಳುವುದಿಲ್ಲ. 27 ಏಕೆಂದರೆ ನೀವು ನನ್ನನ್ನು ಪ್ರೀತಿಸಿ ನಾನು ದೇವರಿಂದ ಹೊರಟು ಬಂದವನೆಂದು ನಂಬಿದ್ದರಿಂದ ತಂದೆಯು ತಾವೇ ನಿಮ್ಮನ್ನು ಪ್ರೀತಿಸುತ್ತಾರೆ. 28 ನಾನು ತಂದೆಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ. ತಿರುಗಿ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತಿದ್ದೇನೆ,” ಎಂದರು.
29 ಆಗ ಶಿಷ್ಯರು ಯೇಸುವಿಗೆ, “ಇಗೋ, ಈಗ ನೀವು ಸಾಮ್ಯಗಳಿಂದ ಮಾತನಾಡದೆ ಸ್ಪಷ್ಟವಾಗಿಯೇ ಮಾತನಾಡುತ್ತಿದ್ದೀರಿ. 30 ನೀವು ಎಲ್ಲಾ ತಿಳಿದವರೆಂದೂ ಯಾರೂ ನಿಮ್ಮನ್ನು ಪ್ರಶ್ನಿಸುವುದು ಅಗತ್ಯವಿಲ್ಲವೆಂದು ಈಗ ನಮಗೆ ತಿಳಿಯಿತು. ಆದ್ದರಿಂದ ನೀವು ದೇವರಿಂದ ಹೊರಟು ಬಂದವರೆಂದು ನಾವು ನಂಬುತ್ತೇವೆ,” ಎಂದರು.
31 ಅದಕ್ಕೆ ಯೇಸು ಅವರಿಗೆ, “ಈಗ ನೀವು ನಂಬುತ್ತೀರೋ?” 32 ಇಗೋ, ನಿಮ್ಮಲ್ಲಿ ಪ್ರತಿಯೊಬ್ಬನು ನಿಮ್ಮ ನಿಮ್ಮ ಮನೆಗೆ ಚದುರಿಹೋಗಿ ನನ್ನನ್ನು ಒಬ್ಬಂಟಿಗನನ್ನಾಗಿ ಬಿಡುವ ಗಳಿಗೆ ಬರುತ್ತದೆ. ಹೌದು, ಈಗಲೇ ಬಂದಿದೆ. ಆದರೂ ನಾನು ಒಬ್ಬಂಟಿಗನಲ್ಲ. ಏಕೆಂದರೆ ತಂದೆ ನನ್ನ ಸಂಗಡ ಇದ್ದಾರೆ.
33 “ನನ್ನಲ್ಲಿ ನಿಮಗೆ ಸಮಾಧಾನ ಇರುವಂತೆ ಇವುಗಳನ್ನು ನಾನು ನಿಮ್ಮೊಂದಿಗೆ ಮಾತನಾಡಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟವಿರುವದು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ,” ಎಂದರು.
<- ಯೋಹಾನ 15ಯೋಹಾನ 17 ->