5 “ನಾನೇ ದ್ರಾಕ್ಷಿಯ ಬಳ್ಳಿ, ನೀವು ಕವಲುಬಳ್ಳಿಗಳು. ನೀವು ನನ್ನಲ್ಲಿ ಮತ್ತು ನಾನು ನಿಮ್ಮಲ್ಲಿ ನೆಲೆಗೊಂಡಿದ್ದರೆ ನೀವು ಬಹಳ ಫಲಕೊಡುವಿರಿ. ಏಕೆಂದರೆ ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ. 6 ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ನೀವು ಎಸೆಯಲಾದ ಕವಲುಬಳ್ಳಿಯಂತೆ ಒಣಗಿ ಹೋಗುವಿರಿ. ಜನರು ಅವುಗಳನ್ನು ಕೂಡಿಸಿ ಬೆಂಕಿಯೊಳಗೆ ಹಾಕುವರು ಮತ್ತು ಅವುಗಳನ್ನು ಸುಟ್ಟುಹಾಕಲಾಗುವುದು. 7 ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಬಯಸುವ ಯಾವುದನ್ನಾದರೂ ಬೇಡಿಕೊಳ್ಳಿರಿ. ಅದು ನಿಮ್ಮದಾಗುವುದು. 8 ನೀವು ಬಹಳ ಫಲಕೊಡುವುದರಿಂದಲೇ ನನ್ನ ಶಿಷ್ಯರಾಗಿರುವಿರಿ, ಇದರಿಂದ ನನ್ನ ತಂದೆಗೆ ಮಹಿಮೆಯಾಗುವುದು.
9 “ತಂದೆಯು ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ಈಗ ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ. 10 ನಾನು ನನ್ನ ತಂದೆಯ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನೆಲೆಗೊಂಡಿರುವಂತೆಯೇ ನೀವು ನನ್ನ ಆಜ್ಞೆಗಳನ್ನು ಪಾಲಿಸಿ ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಳ್ಳುವಿರಿ. 11 ನನ್ನ ಆನಂದವು ನಿಮ್ಮಲ್ಲಿ ಇರುವಂತೆಯೂ ಆ ನಿಮ್ಮ ಆನಂದವು ಪರಿಪೂರ್ಣವಾಗುವಂತೆಯೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ. 12 ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದು ನನ್ನ ಆಜ್ಞೆಯಾಗಿದೆ. 13 ಒಬ್ಬನು ತನ್ನ ಸ್ನೇಹಿತರಿಗಾಗಿ ತನ್ನ ಪ್ರಾಣವನ್ನೇ ಕೊಡುವ ಪ್ರೀತಿಗಿಂತ ಮಹತ್ತಾದದ್ದು ಯಾರಲ್ಲೂ ಇಲ್ಲ. 14 ನಾನು ನಿಮಗೆ ಆಜ್ಞಾಪಿಸಿದ್ದನ್ನು ಪಾಲಿಸಿದರೆ ನೀವು ನನ್ನ ಸ್ನೇಹಿತರು. 15 ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ. ಏಕೆಂದರೆ ತನ್ನ ಧಣಿಯು ಮಾಡುವಂಥದ್ದು ಆಳಿಗೆ ತಿಳಿಯುವುದಿಲ್ಲ. ಆದರೆ ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ. ಏಕೆಂದರೆ ನನ್ನ ತಂದೆಯಿಂದ ಕೇಳಿದ್ದನ್ನೆಲ್ಲಾ ನಾನು ನಿಮಗೆ ತಿಳಿಯಪಡಿಸಿದ್ದೇನೆ. 16 ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಹೋಗಿ ಫಲಕೊಡುವಂತೆಯೂ ನಿಮ್ಮ ಫಲವು ಸ್ಥಿರವಾಗಿರುವಂತೆಯೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗೆ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅವರು ನಿಮಗೆ ಕೊಡುವರು. 17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆಯಾಗಿದೆ.