9 “ ‘ಕಳ್ಳತನ, ಹತ್ಯೆ, ವ್ಯಭಿಚಾರಗಳನ್ನು ನೀವು ನಡೆಸುವಿರೋ? ಸುಳ್ಳು ಪ್ರಮಾಣವನ್ನು ಮಾಡಿ, ಬಾಳನಿಗೆ ಧೂಪವನ್ನು ಸುಡುವಿರೋ? ನಿಮಗೆ ತಿಳಿಯದ ಬೇರೆ ದೇವರುಗಳನ್ನು ಹಿಂಬಾಲಿಸಿ, 10 ಆಮೇಲೆ ಬಂದು ನನ್ನ ಹೆಸರನ್ನು ಹೊಂದಿರುವ ಈ ಆಲಯದಲ್ಲಿ ನನ್ನ ಮುಂದೆ ನಿಂತುಕೊಂಡು, “ನಾವು ಸುರಕ್ಷಿತರು” ಎಂದು ಹೇಳಿ ಈ ಅಸಹ್ಯವಾದವುಗಳನ್ನೆಲ್ಲಾ ಮಾಡುವ ಹಾಗೆ ಒಪ್ಪಿಸಲಾಗಿದ್ದೇವೆಂದು ಹೇಳುವಿರೋ? 11 ನನ್ನ ಹೆಸರನ್ನು ಹೊಂದಿರುವ ಈ ಆಲಯವು ನಿಮ್ಮ ಕಣ್ಣುಗಳಲ್ಲಿ ಕಳ್ಳರ ಗವಿಯಾಯಿತೋ? ಇಗೋ, ನಾನೇ ಅದನ್ನು ನೋಡಿದ್ದೇನೆಂದು ಯೆಹೋವ ದೇವರು ಹೇಳುತ್ತಾರೆ.
12 “ ‘ಆದರೆ ಈಗ ಶೀಲೋವಿನಲ್ಲಿದ್ದ ನನ್ನ ಸ್ಥಳಕ್ಕೆ ಎಂದರೆ, ನಾನು ಮೊದಲು ನನ್ನ ಹೆಸರನ್ನು ಸ್ಥಾಪಿಸಿದ ಸ್ಥಳಕ್ಕೆ ಹೋಗಿರಿ; ಅದಕ್ಕೆ ನಾನು, ನನ್ನ ಜನರಾದ ಇಸ್ರಾಯೇಲರ ಕೆಟ್ಟತನದ ನಿಮಿತ್ತ ಏನು ಮಾಡಿದೆನೆಂದು ನೋಡಿರಿ. 13 ಈಗ ಯೆಹೋವ ದೇವರು ಹೇಳುವುದೇನೆಂದರೆ, ನೀವು ಈ ಕೆಲಸಗಳನ್ನೆಲ್ಲಾ ಮಾಡಿದ್ದರಿಂದ ನಾನು ಬೆಳಿಗ್ಗೆ ಎದ್ದು ನಿಮ್ಮನ್ನು ಕರೆದರೂ, ನೀವು ಉತ್ತರ ಕೊಡದೆ ಹೋದಿರಿ. 14 ಆದಕಾರಣ ನನ್ನ ಹೆಸರಿನಿಂದ ಕರೆಯಲಾದಂಥ ಮತ್ತು ನೀವು ನಂಬಿಕೊಂಡಿರುವಂಥ ಈ ಆಲಯಕ್ಕೂ ನಾನು ನಿಮಗೂ, ನಿಮ್ಮ ಪಿತೃಗಳಿಗೆ ಕೊಟ್ಟ ಸ್ಥಳಕ್ಕೂ, ಶೀಲೋವಿಗೆ ಮಾಡಿದ ಹಾಗೆ ಮಾಡುವೆನು. 15 ನಿಮ್ಮ ಸಹೋದರರೆಲ್ಲರನ್ನೂ, ಎಫ್ರಾಯೀಮಿನ ಎಲ್ಲಾ ಸಂತಾನವನ್ನೂ ಹೊರಗೆ ಹಾಕಿದ ಹಾಗೆ, ನಿಮ್ಮನ್ನು ನನ್ನ ಸಮ್ಮುಖದಿಂದ ಹೊರಗೆ ಹಾಕುವೆನು.’
16 “ಆದ್ದರಿಂದ ನೀನು ಈ ಜನರಿಗೋಸ್ಕರ ಪ್ರಾರ್ಥನೆ ಮಾಡಬೇಡ. ಅವರಿಗೋಸ್ಕರ ಮೊರೆಯನ್ನೂ, ಪ್ರಾರ್ಥನೆಯನ್ನೂ ಎತ್ತಬೇಡ. ಇಲ್ಲವೆ ನನಗೆ ವಿಜ್ಞಾಪನೆ ಮಾಡಬೇಡ. ಏಕೆಂದರೆ ನಾನು ಅದನ್ನು ಕೇಳಿಸಿಕೊಳ್ಳುವುದಿಲ್ಲ. 17 ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಅವರು ಮಾಡುವುದನ್ನು ನೀನು ನೋಡುವುದಿಲ್ಲವೋ? 18 ‘ಗಗನದ ಒಡತಿ,’ ಎಂದು ಇವರು ಕರೆಯುವ ದೇವತೆಗೆ ಹೋಳಿಗೆಗಳನ್ನು ಮಾಡುವುದಕ್ಕಾಗಿ ಅವರ ಮಕ್ಕಳು ಸೌದೆಯನ್ನು ಆಯ್ದು ತರುತ್ತಾರೆ. ಗಂಡಸರು ಬೆಂಕಿ ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನ್ನು ನಾದುತ್ತಾರೆ. ನನ್ನನ್ನು ಕೆಣಕಬೇಕೆಂದೇ ಅನ್ಯ ದೇವತೆಗಳಿಗೆ ಪಾನ ನೈವೇದ್ಯವನ್ನು ಅರ್ಪಿಸುತ್ತಾರೆ.” 19 ಯೆಹೋವ ದೇವರು ಅನ್ನುತ್ತಾನೆ: “ಇವರು ಮಾಡುತ್ತಿರುವ ಕೇಡು ನನಗೋ? ಲಜ್ಜೆಯಿಂದ ಮುಖ ಮುಚ್ಚಿಕೊಳ್ಳುವಷ್ಟು ಕೇಡನ್ನು ತಮಗೆ ತಾವೇ ತಂದುಕೊಳ್ಳುತ್ತಿದ್ದಾರಲ್ಲವೇ?”
20 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ಇಗೋ, ಈ ಸ್ಥಳದ ಮೇಲೆಯೂ, ಮನುಷ್ಯರ ಮೇಲೆಯೂ, ಮೃಗಗಳ ಮೇಲೆಯೂ, ಹೊಲದ ಮರಗಳ ಮೇಲೆಯೂ, ಭೂಮಿಯ ಫಲದ ಮೇಲೆಯೂ ನನ್ನ ಕೋಪ ಮತ್ತು ಉಗ್ರತೆಯು ಹೊಯ್ಯಲಾಗುವುದು. ಅದು ಉರಿಯುವುದು ಮತ್ತು ಆರಿಹೋಗುವುದಿಲ್ಲ.
21 “ ‘ಇಸ್ರಾಯೇಲಿನ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ನಿಮ್ಮ ದಹನಬಲಿಗಳನ್ನು ನಿಮ್ಮ ಬಲಿಗಳ ಸಂಗಡ ಕೂಡಿಸಿ, ಮಾಂಸವನ್ನು ತಿನ್ನಿರಿ. 22 ಏಕೆಂದರೆ, ನಾನು ನಿಮ್ಮ ಪಿತೃಗಳನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ ದಿವಸದಲ್ಲಿ, ದಹನಬಲಿಗಳ ಮತ್ತು ಬಲಿಗಳ ವಿಷಯ ನಾನು ಅವರ ಸಂಗಡ ಮಾತನಾಡಲಿಲ್ಲ; ಇಲ್ಲವೆ ಅವರಿಗೆ ಆಜ್ಞಾಪಿಸಲಿಲ್ಲ. 23 ಆದರೆ ನಾನು ಇದನ್ನು ಅವರಿಗೆ, “ನನ್ನ ಶಬ್ದಕ್ಕೆ ವಿಧೇಯರಾಗಿರಿ. ಆಗ ನಾನು ನಿಮ್ಮ ದೇವರಾಗಿರುವೆನು; ನೀವು ನನ್ನ ಜನರಾಗಿರುವಿರಿ; ನಿಮಗೆ ಒಳ್ಳೆಯದಾಗುವಂತೆ ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ಮಾರ್ಗಗಳಲ್ಲಿ ನಡೆಯಿರಿ,” ಎಂದು ಆಜ್ಞಾಪಿಸಿ ಹೇಳಿದೆನು. 24 ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ. ಆದರೆ ಅವರು ತಮ್ಮ ದುಷ್ಟ ಹೃದಯದ ಆಲೋಚನೆಯ ಪ್ರಕಾರವೂ, ಕಲ್ಪನೆಯ ಪ್ರಕಾರವೂ ನಡೆದುಕೊಂಡು ಮುಂದಕ್ಕೆ ಅಲ್ಲ, ಹಿಂದಕ್ಕೆ ಹೋದರು. 25 ನಿಮ್ಮ ಪಿತೃಗಳು ಈಜಿಪ್ಟ್ ದೇಶವನ್ನು ಬಿಟ್ಟುಹೋದ ದಿನದಿಂದ ಇಂದಿನವರೆಗೂ ನಾನು ನನ್ನ ದಾಸರಾಗಿರುವ ಸಕಲ ಪ್ರವಾದಿಗಳನ್ನು ಪ್ರತಿದಿನವೂ ನಿಮ್ಮ ಬಳಿಗೆ ಕಳುಹಿಸುತ್ತಾ ಬಂದೆನು. 26 ಆದರೂ ಅವರು ನನ್ನ ಮಾತಿಗೆ ಕಿವಿಗೊಡದೆ, ತಮ್ಮನ್ನು ಕಠಿಣ ಮಾಡಿಕೊಂಡು ತಮ್ಮ ಪಿತೃಗಳಿಗಿಂತ ಕೆಟ್ಟದ್ದನ್ನು ಮಾಡಿದರು.’
27 “ಆದ್ದರಿಂದ ನೀನು ಈ ಮಾತುಗಳನ್ನೆಲ್ಲಾ ಅವರಿಗೆ ಹೇಳಬೇಕು. ಆದರೆ ಅವರು ನಿನ್ನ ಮಾತನ್ನು ಕೇಳುವುದಿಲ್ಲ. ಅವರನ್ನು ನೀನು ಕರೆಯುವೆ. ಆದರೆ ಅವರು ನಿನಗೆ ಉತ್ತರ ಕೊಡುವುದಿಲ್ಲ. 28 ಆದ್ದರಿಂದ ಅವರಿಗೆ ಹೀಗೆ ಹೇಳು, ‘ಇದು ಅವರ ದೇವರಾದ ಯೆಹೋವ ದೇವರಿಗೆ ವಿಧೇಯನಾಗದ ಇಲ್ಲವೆ ಶಿಕ್ಷೆಯನ್ನು ಅಂಗೀಕರಿಸದಂಥ ಜನಾಂಗವಾಗಿದೆ. ಸತ್ಯವು ನಾಶವಾಯಿತು. ಇದು ಅವರ ಬಾಯಿಂದ ತೆಗೆದುಹಾಕಲಾಗಿದೆ.
29 “ ‘ಓ ಯೆರೂಸಲೇಮೇ, ನಿನ್ನ ಕೂದಲನ್ನು ಕತ್ತರಿಸಿ ಬಿಸಾಡಿಬಿಡು. ಉನ್ನತ ಸ್ಥಳಗಳಲ್ಲಿ ಗೋಳಾಟವನ್ನು ಎತ್ತು. ಏಕೆಂದರೆ ಯೆಹೋವ ದೇವರು ತನ್ನ ಕೋಪಕ್ಕೆ ಪಾತ್ರರಾದ ಈ ಸಂತತಿಯನ್ನು ನಿರಾಕರಿಸಿ ತಳ್ಳಿಬಿಟ್ಟಿದ್ದಾರೆ.