6 “ ‘ಇಗೋ, ನಾನು ಅದಕ್ಕೆ ಕ್ಷೇಮವನ್ನೂ, ಸ್ವಸ್ಥತೆಯನ್ನೂ ಹುಟ್ಟಿಸಿ ಅವರನ್ನು ಗುಣಪಡಿಸಿ ಸಮಾಧಾನದ ಸತ್ಯವನ್ನು ಸಮೃದ್ಧಿಯಾಗಿ ಅವರಿಗೆ ಪ್ರಕಟಮಾಡುವೆನು. 7 ಯೆಹೂದದ ಸೆರೆಯನ್ನೂ, ಇಸ್ರಾಯೇಲಿನ ಸೆರೆಯನ್ನೂ ತಿರುಗಿಸಿ, ಅವರನ್ನು ಮುಂಚಿನ ಹಾಗೆ ಕಟ್ಟುವೆನು. 8 ಅವರು ಯಾವುದರಿಂದ ನನಗೆ ವಿರೋಧವಾಗಿ ಪಾಪ ಮಾಡಿದರೋ, ಆ ಅಕ್ರಮದಿಂದೆಲ್ಲಾ ಅವರನ್ನು ಶುದ್ಧಮಾಡುವೆನು. ಅವರು ಯಾವವುಗಳಿಂದ ನನಗೆ ವಿರೋಧವಾಗಿ ಪಾಪಮಾಡಿ ನನ್ನ ವಿಷಯದಲ್ಲಿ ದ್ರೋಹಿಗಳಾಗಿದ್ದಾರೋ, ಆ ಅಕ್ರಮಗಳನ್ನೆಲ್ಲಾ ಮನ್ನಿಸುವೆನು. 9 ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲಾ ಸೌಭಾಗ್ಯಗಳ ಸುದ್ದಿಯನ್ನು ಸಕಲ ಭೂರಾಜ್ಯಗಳು ಕೇಳುವರು. ಈ ನಗರಕ್ಕೆ ನಾನು ನೀಡುವ ಸುಖ ಸಮಾಧಾನಗಳನ್ನು ಅವರು ನೋಡುವರು ಹಾಗೂ ಹೆದರಿ ನಡುಗುವರು. ಇದರಿಂದಾಗಿ ಆ ಎಲ್ಲಾ ರಾಜ್ಯಗಳ ಮುಂದೆ ನನಗೆ ಅದು ಕೀರ್ತಿಯನ್ನು, ಮಹಿಮೆಯನ್ನು ಹಾಗೂ ಆನಂದವನ್ನು ತರುವುದು.’
10 “ಯೆಹೋವ ದೇವರು ಹೇಳುವುದೇನೆಂದರೆ: ‘ “ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾಯಿತು,” ಎಂದು ನೀವು ಹೇಳುವ ಈ ಸ್ಥಳದಲ್ಲಿಯೂ ಮನುಷ್ಯರೂ ನಿವಾಸಿಗಳೂ ಪಶುಗಳೂ ಇಲ್ಲದೆ ನಾಶವಾದ ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ 11 ಹರ್ಷಧ್ವನಿ, ಉಲ್ಲಾಸ, ಕೋಲಾಹಲ, ವಧೂವರರ ಸ್ವರ ಮತ್ತು ಹಾಡುತ್ತಾ ಕೃತಜ್ಞತಾ ಬಲಿಯನ್ನು ಯೆಹೋವ ದೇವರ ಆಲಯಕ್ಕೆ ತರುವವರ ಸ್ವರ ಹೀಗೆ ಹೇಳುವವು,
12 “ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ‘ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾದ ಈ ಸ್ಥಳದಲ್ಲಿಯೂ, ಅದರ ಎಲ್ಲಾ ಪಟ್ಟಣಗಳಲ್ಲಿಯೂ, ಅದರ ಎಲ್ಲಾ ಪಟ್ಟಣಗಳಲ್ಲಿ ಕುರುಬರು ತಮ್ಮ ಹಿಂಡುಗಳಿಗೆ ವಿಶ್ರಾಂತಿ ನೀಡಲು ಮತ್ತೆ ಹುಲ್ಲುಗಾವಲುಗಳು ಇರುತ್ತವೆ. 13 ಬೆಟ್ಟದ ಪಟ್ಟಣಗಳಲ್ಲಿಯೂ ತಗ್ಗಿನ ಪಟ್ಟಣಗಳಲ್ಲಿಯೂ, ದಕ್ಷಿಣ ಪಟ್ಟಣಗಳಲ್ಲಿಯೂ, ಬೆನ್ಯಾಮೀನನ ದೇಶದಲ್ಲಿಯೂ, ಯೆರೂಸಲೇಮಿನ ಪ್ರದೇಶಗಳಲ್ಲಿಯೂ, ಯೆಹೂದದ ಪಟ್ಟಣಗಳಲ್ಲಿಯೂ ಇನ್ನು ಮೇಲೆ ಕುರಿಮಂದೆಗಳು ಎಣಿಸುವವನ ಕೈಕೆಳಗೆ ಹಾದುಹೋಗುವುದು,’ ಎಂದು ಯೆಹೋವ ದೇವರು ಹೇಳುತ್ತಾರೆ.
14 “ ‘ಇಗೋ, ದಿನಗಳು ಬರಲಿವೆ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಆಗ ನಾನು ಇಸ್ರಾಯೇಲಿನ ಮತ್ತು ಯೆಹೂದದ ಮನೆಯವರ ಸಂಗಡ ಹೇಳಿದ ಒಳ್ಳೆಯ ವಾಗ್ದಾನವನ್ನು ನೆರವೇರಿಸುವೆನು.
19 ಯೆಹೋವ ದೇವರು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದರು: 20 “ಯೆಹೋವ ದೇವರಾದ ನನ್ನ ನುಡಿ ಇದು: ‘ಹಗಲಿರುಳೆಂಬ ನನ್ನ ನಿಬಂಧನೆಗಳನ್ನು ನಿಲ್ಲಿಸಿ, ಹಗಲನ್ನು ಮತ್ತು ಇರುಳನ್ನು ಅದರದರ ಸಮಯದಲ್ಲಿ ಉಂಟಾಗದಂತೆ ಮಾಡಲು ನಿಮ್ಮಿಂದಾದೀತೇ? 21 ಆಗುವುದಾದರೆ ಮಾತ್ರ ನನ್ನ ದಾಸ ದಾವೀದನೊಂದಿಗೆ ನನ್ನ ಪರಿಚಾರಕರಾದ ಲೇವಿ ಕುಲದ ಯಾಜಕರೊಂದಿಗೆ ನಾನು ಮಾಡಿದ ಒಡಂಬಡಿಕೆ ನಿಂತುಹೋಗುವುದು ಮತ್ತು ದಾವೀದನ ಸಿಂಹಾಸನವನ್ನು ಏರಿ ಆಳತಕ್ಕ ಅವನ ಸಂತಾನದವನು ಒಬ್ಬನೂ ಇಲ್ಲವಾಗುವನು. 22 ಆದರೆ ನನ್ನ ದಾಸ ದಾವೀದನ ಸಂತಾನವನ್ನೂ ನನ್ನ ಪರಿಚಾರಕರಾದ ಲೇವಿಯರನ್ನೂ ಅಸಂಖ್ಯಾತ ನಕ್ಷತ್ರಗಣದಷ್ಟು ಮತ್ತು ಎಣಿಸಲಾಗದ ಸಮುದ್ರತೀರದ ಮರಳಿನಷ್ಟು ಅಧಿಕಗೊಳಿಸುವೆನು.’ ”
23 ಇದಲ್ಲದೆ ಯೆಹೋವ ದೇವರು ಯೆರೆಮೀಯನಿಗೆ ಈ ವಾಕ್ಯವನ್ನು ಅನುಗ್ರಹಿಸಿದರು: 24 “ ‘ಯೆಹೋವ ದೇವರಾದ ನಾನು ಆರಿಸಿಕೊಂಡಿದ್ದ ಎರಡು ವಂಶಗಳನ್ನು ನಿರಾಕರಿಸಿಬಿಟ್ಟಿದ್ದೇನೆ, ಎಂದು ಜನರು ಆಡಿಕೊಳ್ಳುತ್ತಿದ್ದಾರೆ.’ ಈ ಮಾತನ್ನು ನೀನು ಗಮನಿಸಿರಬೇಕು. ನನ್ನ ಜನರು ಒಂದು ಜನಾಂಗವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಅಸಡ್ಡೆ ಮಾಡುತ್ತಿದ್ದಾರಲ್ಲವೇ? 25 ಯೆಹೋವನಾದ ನಾನು ಹೇಳುವುದನ್ನು ಕೇಳು: ‘ಹಗಲಿರುಳೆಂಬ ಸ್ಥಿರವಾದ ನಿಬಂಧನೆಯನ್ನು ನಾನು ಮಾಡದೆ ಹೋಗಿದ್ದರೆ, ಭೂಮ್ಯಾಕಾಶಗಳಿಗೆ ನಿಯಮವನ್ನು ನಾನು ವಿಧಿಸದೆ ಹೋಗಿದ್ದರೆ, 26 ಆಗ ಮಾತ್ರ ನಾನು ಯಾಕೋಬನ ಸಂತಾನದವರನ್ನು ತ್ಯಜಿಸುತ್ತಿದ್ದೆ. ಅಬ್ರಹಾಮ, ಇಸಾಕ, ಯಾಕೋಬ ಇವರ ಸಂತತಿಯನ್ನು ಆಳತಕ್ಕ ಒಡೆಯನನ್ನು ದಾಸ ದಾವೀದನ ವಂಶದಿಂದ ಆರಿಸದೆ, ಆ ವಂಶವನ್ನು ನಿರಾಕರಿಸುತ್ತಿದ್ದೆ. ಆದರೆ ಈಗ ಗುಲಾಮಗಿರಿಯಿಂದ ಅವರನ್ನು ಬಿಡುಗಡೆಮಾಡುವೆನು. ಅವರಿಗೆ ಕರುಣೆಯನ್ನು ತೋರಿಸಿಯೇ ತೋರಿಸುವೆನು.’ ”
<- ಯೆರೆಮೀಯ 32ಯೆರೆಮೀಯ 34 ->