7 ಹೀಗೆ ಯೆರೆಮೀಯನು ಈ ವಾಕ್ಯಗಳನ್ನು ಯೆಹೋವ ದೇವರ ಆಲಯದಲ್ಲಿ ಸಾರುವುದನ್ನು ಯಾಜಕರೂ, ಪ್ರವಾದಿಗಳೂ, ಜನರೆಲ್ಲರೂ ಕೇಳುತ್ತಿದ್ದರು. 8 ಯೆರೆಮೀಯನು ತಾನು ಜನರೆಲ್ಲರಿಗೆ ಹೇಳಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ್ದನ್ನೆಲ್ಲಾ ಹೇಳಿ ತೀರಿಸಿದ ಮೇಲೆ ಯಾಜಕರೂ, ಪ್ರವಾದಿಗಳೂ, ಜನರೆಲ್ಲರೂ ಅವನನ್ನು ಹಿಡಿದು, “ನೀನು ನಿಶ್ಚಯವಾಗಿ ಸಾಯಬೇಕು. 9 ಈ ದೇವಾಲಯಕ್ಕೆ ಶೀಲೋವಿನ ಹಾಗೆ ಆಗುವುದೆಂದೂ, ಈ ಪಟ್ಟಣವೂ ನಿವಾಸಿಗಳಿಲ್ಲದೆ ಹಾಳಾಗುವುದೆಂದೂ ಯೆಹೋವ ದೇವರ ಹೆಸರಿನಲ್ಲಿ ಏಕೆ ನೀನು ಪ್ರವಾದಿಸಿದ್ದೀ?” ಎಂದರು. ಆಗ ಜನರೆಲ್ಲರು ಯೆಹೋವ ದೇವರ ಆಲಯದಲ್ಲಿ ಯೆರೆಮೀಯನಿಗೆ ವಿರೋಧವಾಗಿ ಕೂಡಿಕೊಂಡರು.
10 ಯೆಹೂದದ ಪ್ರಧಾನರು ಈ ಸಂಗತಿಗಳನ್ನು ಕೇಳಿದಾಗ, ಅರಸನ ಅರಮನೆಯಿಂದ ಯೆಹೋವ ದೇವರ ಆಲಯಕ್ಕೆ ಬಂದು, ಯೆಹೋವ ದೇವರ ಆಲಯದ ಹೊಸ ಬಾಗಿಲಿನ ಪ್ರವೇಶದಲ್ಲಿ ಕುಳಿತುಕೊಂಡರು. 11 ಆಗ ಯಾಜಕರೂ, ಪ್ರವಾದಿಗಳೂ, ಅಧಿಕಾರಿಗಳಿಗೂ, ಜನರೆಲ್ಲರಿಗೂ, “ಈ ಮನುಷ್ಯನು ಮರಣಕ್ಕೆ ತಕ್ಕವನು. ಏಕೆಂದರೆ ನಿಮ್ಮ ಕಿವಿಗಳಿಂದಲೇ ನೀವು ಕೇಳಿದ ಪ್ರಕಾರ, ಇವನು ಈ ಪಟ್ಟಣಕ್ಕೆ ವಿರೋಧವಾಗಿ ಪ್ರವಾದಿಸಿದ್ದಾನೆ,” ಎಂದರು.
12 ಆಗ ಯೆರೆಮೀಯನು ಪ್ರಧಾನರೆಲ್ಲರಿಗೂ ಜನರೆಲ್ಲರಿಗೂ: “ನೀವು ಕೇಳಿದ ವಾಕ್ಯಗಳನ್ನೆಲ್ಲಾ ಈ ಆಲಯಕ್ಕೆ ವಿರೋಧವಾಗಿಯೂ, ಈ ಪಟ್ಟಣಕ್ಕೆ ವಿರೋಧವಾಗಿಯೂ ಪ್ರವಾದಿಸುವುದಕ್ಕೆ ಯೆಹೋವ ದೇವರು ನನ್ನನ್ನು ಕಳುಹಿಸಿದ್ದಾರೆ. 13 ಹೀಗಿರುವುದರಿಂದ ನಿಮ್ಮ ಮಾರ್ಗಗಳನ್ನೂ, ನಿಮ್ಮ ಕೃತ್ಯಗಳನ್ನೂ ತಿದ್ದಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ವಿಧೇಯರಾಗಿರಿ. ಆಗ ಯೆಹೋವ ದೇವರು ನಿಮಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯಕ್ಕಾಗಿ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವರು. 14 ನಾನಾದರೋ ನಿಮ್ಮ ಕೈಯಲ್ಲಿ ಇದ್ದೇನೆ. ನಿಮಗೆ ಒಳ್ಳೆಯದಾಗಿಯೂ, ನ್ಯಾಯವಾಗಿಯೂ ತೋರುವ ಪ್ರಕಾರ ನನಗೆ ಮಾಡಿರಿ. 15 ಆದರೂ ನೀವು ನನ್ನನ್ನು ಕೊಂದುಹಾಕಿದರೆ, ನಿಮ್ಮ ಮೇಲೆಯೂ, ಈ ಪಟ್ಟಣದ ಮೇಲೆಯೂ, ಅದರ ನಿವಾಸಿಗಳ ಮೇಲೆಯೂ ನಿರ್ದೋಷಿಯ ರಕ್ತವನ್ನು ಬರಮಾಡುತ್ತೀರೆಂದು ನಿಶ್ಚಯವಾಗಿ ತಿಳಿದುಕೊಳ್ಳಿರಿ. ಈ ವಾಕ್ಯಗಳನ್ನೆಲ್ಲಾ ನಿಮ್ಮ ಕಿವಿಗಳಲ್ಲಿ ಹೇಳುವ ಹಾಗೆ ಸತ್ಯವಾಗಿ ಯೆಹೋವ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ,” ಎಂದನು.
16 ಆಗ ಪ್ರಧಾನರೂ ಜನರೆಲ್ಲರೂ ಯಾಜಕರಿಗೂ ಪ್ರವಾದಿಗಳಿಗೂ, “ಈ ಮನುಷ್ಯನು ಮರಣದಂಡನೆಗೆ ತಕ್ಕವನಲ್ಲ. ಏಕೆಂದರೆ ನಮ್ಮ ದೇವರಾದ ಯೆಹೋವ ದೇವರ ಹೆಸರಿನಲ್ಲಿ ನಮ್ಮ ಸಂಗಡ ಮಾತನಾಡಿದ್ದಾನೆ,” ಎಂದರು.
17 ದೇಶದ ಹಿರಿಯರಲ್ಲಿ ಕೆಲವರು ಎದ್ದು ಜನರ ಕೂಟಕ್ಕೆಲ್ಲಾ ಹೇಳಿದ್ದೇನೆಂದರೆ: 18 “ಮೊರೇಷೆತಿನವನಾದ ಮೀಕಾಯನು ಯೆಹೂದದ ಅರಸನಾದ ಹಿಜ್ಕೀಯನ ದಿನಗಳಲ್ಲಿ ಪ್ರವಾದಿಸಿ, ಯೆಹೂದದ ಜನರಿಗೆಲ್ಲಾ ಹೇಳಿದ್ದೇನೆಂದರೆ: ‘ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ:
20 ಕಿರ್ಯತ್ ಯಾರೀಮಿನವನಾದ ಶೆಮಾಯನ ಮಗ ಊರೀಯ ಎಂಬುವವನು ಸಹ ಯೆಹೋವ ದೇವರ ಹೆಸರಿನಲ್ಲಿ ಪ್ರವಾದಿಸುತ್ತಿರಲಾಗಿ ಯೆರೆಮೀಯನ ಎಲ್ಲಾ ಮಾತುಗಳ ಪ್ರಕಾರ, ಈ ಪಟ್ಟಣಕ್ಕೂ, ಈ ದೇಶಕ್ಕೂ ವಿರೋಧವಾಗಿ ಪ್ರವಾದಿಸಿದನು. 21 ಆಗ ಅರಸನಾದ ಯೆಹೋಯಾಕೀಮನೂ, ಅವನ ಪರಾಕ್ರಮಶಾಲಿಗಳೆಲ್ಲರೂ, ಪ್ರಧಾನರೆಲ್ಲರೂ ಅವನ ಮಾತುಗಳನ್ನೆಲ್ಲಾ ಕೇಳಿದಾಗ, ಅರಸನು ಅವನನ್ನು ಕೊಂದುಹಾಕಬೇಕೆಂದಿದ್ದನು. ಆದರೆ ಊರೀಯನು ಅದನ್ನು ಕೇಳಿ ಭಯಪಟ್ಟು ಓಡಿಹೋಗಿ, ಈಜಿಪ್ಟಿಗೆ ಸೇರಿಕೊಂಡನು. 22 ಆದರೆ ಅರಸನಾದ ಯೆಹೋಯಾಕೀಮನು ಈಜಿಪ್ಟ್ ಜನರನ್ನು, ಅಕ್ಬೋರನ ಮಗ ಎಲ್ನಾಥಾನನನ್ನೂ, ಅವನ ಸಂಗಡ ಇನ್ನೂ ಕೆಲವರನ್ನೂ ಈಜಿಪ್ಟಿಗೆ ಕಳುಹಿಸಿದನು. 23 ಅವರು ಊರೀಯನನ್ನು ಈಜಿಪ್ಟಿನಿಂದ ತೆಗೆದುಕೊಂಡು ಅರಸನಾದ ಯೆಹೋಯಾಕೀಮನ ಬಳಿಗೆ ತಂದರು. ಇವನು ಅವನನ್ನು ಖಡ್ಗದಿಂದ ಹೊಡೆದು, ಅವನ ಹೆಣವನ್ನು ಸಾಧಾರಣವಾದ ಜನರ ಸಮಾಧಿಗಳಲ್ಲಿ ಹಾಕಿಸಿದನು.
24 ಇತ್ತ ಯಾಜಕರೂ, ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ, ಕೊಲ್ಲಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಯೆರೆಮೀಯನಿಗೆ ಶಾಫಾನನ ಮಗ ಅಹೀಕಾಮನ ಸಹಾಯ ದೊರಕಿತ್ತು.
<- ಯೆರೆಮೀಯ 25ಯೆರೆಮೀಯ 27 ->- a ಮೀಕ 3:12