1 ಯೆಹೋವ ದೇವರು ನನಗೆ, “ನೀನು ಹೋಗಿ, ನಾರಿನ ನಡುಕಟ್ಟು ಒಂದನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೋ. ಅದನ್ನು ನೀರಿನಲ್ಲಿ ನೆನೆಸಬೇಡ,” ಎಂದು ಅಪ್ಪಣೆಕೊಟ್ಟರು. 2 ನಾನು ಯೆಹೋವ ದೇವರ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆ.
3 ಆಮೇಲೆ, “ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು, 4 ಯೂಫ್ರೇಟೀಸ್ ನದಿಗೆ ಹೋಗಿ ಅದನ್ನು ಅಲ್ಲಿಯ ಬಂಡೆಯ ಸಂದಿಯೊಳಗೆ ಬಚ್ಚಿಡು,” ಎಂಬುದಾಗಿ ಯೆಹೋವ ದೇವರ ಎರಡನೆಯ ಆದೇಶ ನನಗೆ ಬಂದಿತು. 5 ಆಗ ಯೆಹೋವ ದೇವರ ಅಪ್ಪಣೆಯ ಮೇರೆಗೆ ನಾನು ಹೋಗಿ, ಯೂಫ್ರೇಟೀಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆ.
6 ಬಹು ದಿನಗಳ ಮೇಲೆ ಯೆಹೋವ ದೇವರು ನನಗೆ, “ಹೊರಡು, ಯೂಫ್ರೇಟೀಸ್ ನದಿಗೆ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ,” ಎಂದು ಹೇಳಿದರು. 7 ಆಗ ನಾನು ಯೂಫ್ರೇಟೀಸ್ ನದಿಗೆ ಹೋಗಿ ಹುಡುಕಿ, ನಾನು ಬಚ್ಚಿಟ್ಟ ಸ್ಥಳದಿಂದ ಆ ನಡುಕಟ್ಟನ್ನು ತೆಗೆದೆ. ಆದರೆ ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು.
8 ಆಗ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನೆಂದರೆ, 9 “ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಈ ಪ್ರಕಾರ ನಾನು ಯೆಹೂದದ ಗರ್ವವನ್ನೂ, ಯೆರೂಸಲೇಮಿನ ಮಹಾ ಗರ್ವವನ್ನು ಕೆಡಿಸುವೆನು. 10 ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡೆದುಕೊಂಡು, ಬೇರೆ ದೇವರುಗಳನ್ನು ಸೇವಿಸುವುದಕ್ಕೂ, ಅವುಗಳನ್ನು ಆರಾಧಿಸುವುದಕ್ಕೂ ಹಿಂಬಾಲಿಸುವ ಈ ದುಷ್ಟಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು. 11 ಯಾವ ಪ್ರಕಾರ ಇದು ಮನುಷ್ಯನ ನಡುವಿಗೆ ಹತ್ತಿಕೊಳ್ಳುವುದೋ, ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ, ಯೆಹೂದದ ಮನೆತನವನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು, ಆದರೆ ಅವರು ಕೇಳದೇ ಹೋದರು ಎಂದು ಯೆಹೋವ ದೇವರ ಅನ್ನುತ್ತಾರೆ.’
ದ್ರಾಕ್ಷಾರಸದ ಗಡಿಗೆಗಳು
12 “ಆದ್ದರಿಂದ ನೀನು ಅವರಿಗೆ ಈ ಮಾತನ್ನು ಹೇಳಬೇಕು: ‘ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಗಡಿಗೆಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವುವು. ಆಗ ಅವರು ನಿನಗೆ ಗಡಿಗೆಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವುವೆಂದು ನಮಗೆ ಚೆನ್ನಾಗಿ ತಿಳಿಯಿತಲ್ಲವೋ,’ ಎಂದು ನಿನಗೆ ಹೇಳುವರು. 13 ಆಗ ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಯೆಹೋವ ದೇವರು ಹೀಗೆ ಹೇಳುತ್ತಾರೆ, ಇಗೋ, ನಾನು ಈ ದೇಶದ ನಿವಾಸಿಗಳನ್ನೆಲ್ಲಾ ದಾವೀದನ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಅರಸರನ್ನೂ, ಯಾಜಕರನ್ನೂ, ಪ್ರವಾದಿಗಳನ್ನೂ, ಯೆರೂಸಲೇಮಿನ ನಿವಾಸಿಗಳೆಲ್ಲರನ್ನೂ ಅಮಲಿನಿಂದ ತುಂಬಿಸುವೆನು. 14 ಹಿರಿಕಿರಿಯರಾದ ಎಲ್ಲರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು. ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು ಹಾಗೂ ನಾಶಮಾಡದೆ ಬಿಡೆನು,’ ಇದು ಯೆಹೋವ ದೇವರಾದ ನನ್ನ ನುಡಿ.”
ಸೆರೆಯ ಬೆದರಿಕೆ
15 ಕೇಳಿರಿ, ಕಿವಿಗೊಡಿರಿ, ಗರ್ವಪಡಬೇಡಿರಿ;
ಏಕೆಂದರೆ ಯೆಹೋವ ದೇವರು ಮಾತನಾಡಿದ್ದಾರೆ.
16 ಅವರು ಕತ್ತಲೆಯನ್ನು ತರುವುದಕ್ಕಿಂತ ಮೊದಲು
ನಿಮ್ಮ ಕಾಲುಗಳು ಮೊಬ್ಬಿನ ಬೆಟ್ಟಗಳಲ್ಲಿ ಮುಗ್ಗರಿಸುವುದಕ್ಕಿಂತ ಮುಂಚೆ