Link to home pageLanguagesLink to all Bible versions on this site
2
ಪಕ್ಷಪಾತವನ್ನು ಕುರಿತದ್ದು
1 ನನ್ನ ಪ್ರಿಯರೇ, ಮಹಿಮೆಯುಳ್ಳ ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿ ವಿಶ್ವಾಸಿಗಳಾಗಿರುವ ನೀವು ಪಕ್ಷಪಾತಿಗಳಾಗಿರಬಾರದು. 2 ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರವನ್ನೂ ಅಂದವಾದ ವಸ್ತ್ರವನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬರಲು ಮತ್ತು ಒಬ್ಬ ಬಡ ಮನುಷ್ಯನು ಹರಕು ಬಟ್ಟೆ ಹಾಕಿಕೊಂಡು ಬರಲು 3 ನೀವು ಹೊಳೆಯುವ ವಸ್ತ್ರಗಳನ್ನು ಧರಿಸಿಕೊಂಡಿರುವವನನ್ನು ಗೌರವಿಸಿ ಆ ವ್ಯಕ್ತಿಗೆ, “ನೀವು ಇಲ್ಲಿಯ ಗೌರವ ಪೀಠದಲ್ಲಿ ಕುಳಿತುಕೊಳ್ಳಿರಿ,” ಎಂತಲೂ ಆ ಬಡವನಿಗೆ, “ನೀನು ಅಲ್ಲಿ ನಿಂತುಕೋ ಇಲ್ಲವೆ ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ,” ಎಂತಲೂ ಹೇಳಿದರೆ, 4 ನೀವು ಪಕ್ಷಪಾತಿಗಳಾಗಿ ಕೆಟ್ಟ ಆಲೋಚನೆಗಳ ನ್ಯಾಯಾಧಿಪತಿಗಳಾಗಿರುತ್ತೀರಲ್ಲವೇ?

5 ನನ್ನ ಪ್ರಿಯರೇ, ಕೇಳಿರಿ, ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ ತಮ್ಮನ್ನು ಪ್ರೀತಿಸುವವರಿಗೆ ತಾವು ವಾಗ್ದಾನಮಾಡಿದ ರಾಜ್ಯಕ್ಕೆ ಬಾಧ್ಯರನ್ನಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ? 6 ನೀವಾದರೋ ಬಡವರನ್ನು ಅವಮಾನ ಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನಗಳ ಮುಂದೆ ಎಳೆದುಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ? 7 ನೀವು ಕರೆಸಿಕೊಳ್ಳುವ ಆ ಯೋಗ್ಯವಾದ ನಾಮವನ್ನು ದೂಷಿಸುವವರು ಅವರಲ್ಲವೇ?

8 “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು!”*ಯಾಜಕ 19:18 ಎಂದು ಪವಿತ್ರ ವೇದದಲ್ಲಿ ಬರೆದಿದೆ. ಈ ರಾಜಾಜ್ಞೆಯನ್ನು ನೆರವೇರಿಸುವವರಾದರೆ ನೀವು ಉತ್ತಮವಾದದ್ದನ್ನು ಮಾಡುವವರಾಗಿರುವಿರಿ. 9 ನೀವು ಪಕ್ಷಪಾತಿಗಳಾಗಿದ್ದರೆ ಪಾಪಮಾಡುವವರಾಗಿದ್ದೀರಿ. ಮಾತ್ರವಲ್ಲದೆ ಮೋಶೆಯ ನಿಯಮದ ಪ್ರಕಾರ ಅಪರಾಧಿಗಳೆಂದು ನಿರ್ಣಯ ಹೊಂದುತ್ತೀರಿ. 10 ಏಕೆಂದರೆ ಯಾವನಾದರೂ ಇಡೀ ಮೋಶೆಯ ನಿಯಮದಲ್ಲಿ ಒಂದೇ ಒಂದನ್ನು ಕೈಕೊಂಡು ನಡೆಯದೇ ಹೋದರೆ, ಅವನು ಇಡೀ ನಿಯಮವನ್ನೇ ಕೈಕೊಳ್ಳದ ಅಪರಾಧಿಯಾಗುತ್ತಾನೆ. 11 ಏಕೆಂದರೆ, “ವ್ಯಭಿಚಾರ ಮಾಡಬಾರದು,”ವಿಮೋ 20:14; ಧರ್ಮೋ 5:18 ಎಂದು ಹೇಳಿದ ದೇವರೇ, “ನರಹತ್ಯೆ ಮಾಡಬಾರದು,”ವಿಮೋ 20:13; ಧರ್ಮೋ 5:17 ಎಂತಲೂ ಹೇಳಿದರು. ಆದಕಾರಣ ನೀನು ವ್ಯಭಿಚಾರ ಮಾಡದೆ ಇದ್ದರೂ ನರಹತ್ಯೆ ಮಾಡಿದರೆ ನಿಯಮವನ್ನು ಮೀರಿದವನಾದೆ.

12 ಸ್ವಾತಂತ್ರ್ಯವನ್ನು ಉಂಟುಮಾಡುವ ನಿಯಮದಿಂದ ನಾವು ತೀರ್ಪುಹೊಂದುವೆವು ಎಂದು ತಿಳಿದು, ನಮ್ಮ ಮಾತುಗಳೂ ಕೃತ್ಯಗಳೂ ಅದಕ್ಕೆ ಅನುಸಾರವಾಗಿರಲಿ. 13 ಕರುಣೆ ತೋರಿಸದೆ ಇರುವವರಿಗೆ ಕರುಣೆಯಿಲ್ಲದ ನ್ಯಾಯತೀರ್ಪಾಗುವುದು. ಕರುಣೆವುಳ್ಳವರೋ ನ್ಯಾಯತೀರ್ಪಿನ ಮೇಲೆಯೇ ವಿಜಯವನ್ನು ಸಾಧಿಸುವರು.

ನಂಬಿಕೆಯೂ ಸತ್ಕಾರ್ಯವೂ
14 ನನ್ನ ಪ್ರಿಯರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವುದೋ? 15 ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ದಿನದ ಆಹಾರವೂ ಇಲ್ಲದಿರುವಾಗ, 16 ನಿಮ್ಮಲ್ಲಿ ಒಬ್ಬನು ಅವನಿಗೆ ದೇಹಕ್ಕೆ ಬೇಕಾದವುಗಳನ್ನು ಕೊಡದೆ, “ಸಮಾಧಾನದಿಂದ ಹೋಗಿರಿ, ಚಳಿ ಕಾಯಿಸಿಕೊಳ್ಳಿರಿ, ಹೊಟ್ಟೆ ತುಂಬಿಸಿಕೊಳ್ಳಿರಿ,” ಎಂದು ಹೇಳಿದರೆ ಪ್ರಯೋಜನವೇನು? 17 ಅದರಂತೆಯೇ, ಕ್ರಿಯೆಗಳಿಲ್ಲದ ನಂಬಿಕೆಯು, ಕ್ರಿಯೆಗಳು ಇಲ್ಲದಿರುವುದರಿಂದ ಸತ್ತ ನಂಬಿಕೆಯಾಗಿರುತ್ತದೆ.

18 ಆದರೆ ಒಬ್ಬ ಮನುಷ್ಯನು, “ನಿನ್ನಲ್ಲಿ ನಂಬಿಕೆಯಿದೆ, ನನ್ನಲ್ಲಿ ಕ್ರಿಯೆಗಳಿವೆ,” ಎಂದು ವಾದಿಸಬಹುದು.

ಅಂಥವನಿಗೆ, “ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ನನಗೆ ರುಜುಪಡಿಸು. ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ನಿನಗೆ ರುಜುಪಡಿಸುತ್ತೇನೆ,” ಎಂದು ಹೇಳಬಹುದು. 19 ದೇವರು ಒಬ್ಬರೇ ಎಂದು ನೀನು ನಂಬುತ್ತೀ, ಅದು ಒಳ್ಳೆಯದು, ದೆವ್ವಗಳು ಕೂಡ ಹಾಗೆಯೇ ನಂಬಿ ನಡುಗುತ್ತವೆ.

20 ಮೂರ್ಖನೇ, ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದೆಂದು§ಕೆಲವು ಪ್ರತಿಗಳಲ್ಲಿ ವ್ಯರ್ಥವಾದದ್ದೆಂದು ಇದೆ. ತಿಳಿದುಕೊಳ್ಳಲು ನಿನಗೆ ಪ್ರಮಾಣಗಳು ಬೇಕೋ? 21 ನಮ್ಮ ಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಬಲಿಪೀಠದ ಮೇಲೆ ಅರ್ಪಿಸಿದಾಗ ನೀತಿನಿರ್ಣಯವನ್ನು ಹೊಂದಿದ್ದು ಕ್ರಿಯೆಗಳಿಂದಲ್ಲವೇ? 22 ಅಬ್ರಹಾಮನ ನಂಬಿಕೆಯೂ ಕ್ರಿಯೆಗಳೂ ಒಂದಾಗಿ ಕಾರ್ಯ ಸಾಧಿಸಿದವು. ಹೀಗೆ ಅವನು ಮಾಡಿದ ಕ್ರಿಯೆಗಳಿಂದಲೇ ಅವನ ನಂಬಿಕೆಯು ಸಂಪೂರ್ಣಗೊಂಡಿತು ಎಂದು ನೋಡುತ್ತೇವೆ. 23 ಹೀಗೆ, “ಅಬ್ರಹಾಮನು ದೇವರನ್ನು ನಂಬಿದನು. ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು,”*ಆದಿ 15:6 ಎಂಬ ಪವಿತ್ರ ವೇದದ ವಾಕ್ಯವು ನೆರವೇರಿತು. ಅಬ್ರಹಾಮನು ದೇವರ ಸ್ನೇಹಿತನೆಂದು ಎಣಿಸಿಕೊಂಡನು. 24 ಹೀಗೆ ಮನುಷ್ಯನು ನಂಬಿಕೆಯಿಂದ ಮಾತ್ರವಲ್ಲ ಕ್ರಿಯೆಗಳಿಂದಲೂ ನೀತಿವಂತನೆಂದು ನಿರ್ಣಯ ಹೊಂದುತ್ತಾನೆ ಎಂದು ನೀವು ನೋಡುತ್ತೀರಿ.

25 ಅದೇ ರೀತಿಯಾಗಿ ರಹಾಬಳೆಂಬ ವೇಶ್ಯೆಯು ಸಹ ಗೂಢಚಾರರನ್ನು ಸೇರಿಸಿಕೊಂಡು, ಅವರನ್ನು ಬೇರೆ ದಾರಿಯಿಂದ ಕಳುಹಿಸಿದ ಕ್ರಿಯೆಗಳಿಂದಲೇ ಆಕೆಯು ನೀತಿನಿರ್ಣಯವನ್ನು ಹೊಂದಿದಳಲ್ಲವೇ? 26 ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ, ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದಾಗಿರುತ್ತದೆ.

<- ಯಾಕೋಬನು 1ಯಾಕೋಬನು 3 ->