Link to home pageLanguagesLink to all Bible versions on this site
66
ನ್ಯಾಯತೀರ್ಪು ಮತ್ತು ನಿರೀಕ್ಷಣೆ
1 ಯೆಹೋವ ದೇವರು ಹೇಳುವುದೇನೆಂದರೆ:
“ಆಕಾಶವೇ ನನ್ನ ಸಿಂಹಾಸನ,
ಭೂಮಿಯೇ ನನ್ನ ಪಾದ ಪೀಠ,
ನೀವು ನನಗೋಸ್ಕರ ಕಟ್ಟುವ ಮನೆ ಎಲ್ಲಿ?
ನನ್ನ ವಿಶ್ರಾಂತಿಯ ಸ್ಥಳವು ಎಲ್ಲಿ?
2 ಇವುಗಳನ್ನೆಲ್ಲಾ ನಿರ್ಮಿಸಿದ್ದು ನನ್ನ ಕೈಯೇ.
ಹೌದು, ನನ್ನ ಕೈಯಿಂದಲೇ ಇವುಗಳೆಲ್ಲಾ ಉಂಟಾದವು,”
ಎಂದು ಯೆಹೋವ ದೇವರು ಹೇಳುತ್ತಾರೆ.
 
“ನಾನು ಕಟಾಕ್ಷಿಸುವವನು ಎಂಥವನೆಂದರೆ:
ದೀನನೂ, ಮನಮುರಿದವನೂ,
ನನ್ನ ಮಾತಿಗೆ ಭಯಪಡುವವನೂ ಆಗಿರುವವನೇ.
3 ಎತ್ತನ್ನು ಕೊಂದುಹಾಕುವವನು
ಮನುಷ್ಯನನ್ನು ಹತ್ಯೆ ಮಾಡುವವನ ಹಾಗಿದ್ದಾನೆ.
ಕುರಿಮರಿಯನ್ನು ಬಲಿ ಕೊಡುವವನು,
ನಾಯಿಯ ಕುತ್ತಿಗೆಯನ್ನು ಕಡಿಯುವವನ ಹಾಗಿದ್ದಾನೆ.
ಕಾಣಿಕೆಯನ್ನು ಅರ್ಪಿಸುವವನು,
ಹಂದಿಯ ರಕ್ತವನ್ನು ಅರ್ಪಿಸುವವನ ಹಾಗಿದ್ದಾನೆ.
ಧೂಪವನ್ನು ಹಾಕುವವನು,
ವಿಗ್ರಹವನ್ನು ಪೂಜಿಸುವವನ ಹಾಗಿದ್ದಾನೆ.
ಹೀಗೆ, ಅವರು ಸ್ವಂತ ಮಾರ್ಗಗಳನ್ನು ಆಯ್ದುಕೊಂಡಿದ್ದಾರೆ.
ಅವರ ಪ್ರಾಣವು ಅವರ ಅಸಹ್ಯಗಳಲ್ಲಿ ಹರ್ಷಿಸುತ್ತವೆ.
4 ಅದಕ್ಕೆ ತಕ್ಕಂತೆ ನಾನು ಇವರಿಗೋಸ್ಕರ ಕುತಂತ್ರಗಳನ್ನು ಆರಿಸಿಕೊಂಡು,
ಇವರು ಅಂಜುತ್ತಿದ್ದ ವಿಪತ್ತುಗಳನ್ನು ಬರಮಾಡುವೆನು.
ಏಕೆಂದರೆ ನಾನು ಕೂಗಿದಾಗ, ಯಾರು ಉತ್ತರ ಕೊಡಲಿಲ್ಲ.
ನಾನು ಹೇಳಿದಾಗ, ಇವರು ಕೇಳಲಿಲ್ಲ.
ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ,
ನನಗೆ ಇಷ್ಟವಲ್ಲದ್ದನ್ನು ಆರಿಸಿಕೊಂಡರು.”
 
5 ಯೆಹೋವ ದೇವರ ಮಾತಿಗೆ ಭಯಪಡುವವರೇ,
ಆತನ ಮಾತನ್ನು ಕೇಳಿರಿ!
“ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ದ್ವೇಷಿಸಿ
ಬಹಿಷ್ಕರಿಸಿದ ನಿಮ್ಮ ಸಂಬಂಧಿಗಳು,
‘ಯೆಹೋವ ದೇವರು ಮಹಿಮೆಪಡಲಿ,
ನಿಮಗಾಗುವ ಉತ್ಸಾಹವನ್ನು ನೋಡೋಣ’
ಎಂದು ಹೇಳಿದ್ದಾರಲ್ಲಾ.
ಅವರಿಗಂತೂ ಅವಮಾನವಾಗುವುದು.
6 ಪಟ್ಟಣದೊಳಗಿನ ಗದ್ದಲದ
ಶಬ್ದವು ದೇವಾಲಯದೊಳಗಿಂದ ಸ್ವರವು
ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ
ಯೆಹೋವ ದೇವರ ಸ್ವರವಾಗಿದೆ.
 
7 “ಅವಳಿಗೆ ನೋವು ಆಗುವುದಕ್ಕಿಂತ ಮುಂಚೆಯೇ ಹೆತ್ತಳು.
ವೇದನೆ ಬರುವುದಕ್ಕಿಂತ ಮುಂಚೆಯೇ ಗಂಡು ಕೂಸು ಪಡೆದಳು.
8 ಇಂಥ ಸುದ್ದಿಯನ್ನು ಯಾರು ಕೇಳಿದ್ದಾರೆ?
ಇಂಥ ಸಂಗತಿಯನ್ನು ಕಂಡವರಾರು?
ಒಂದೇ ದಿನದಲ್ಲಿ ದೇಶ ಒಂದು ಹುಟ್ಟೀತೇ?
ಕ್ಷಣಮಾತ್ರದಲ್ಲಿ ರಾಷ್ಟ್ರವನ್ನು ಹೆರಲಿಕ್ಕಾದೀತೇ?
ಆದರೂ ಪ್ರಸವವೇದನೆ ತೊಡಗಿದೊಡನೆ
ಚೀಯೋನೆಂಬಾಕೆ ಮಕ್ಕಳನ್ನು ಹೆತ್ತಿದ್ದಾಳೆ.
9 ನಾನು ಪ್ರಸವಕ್ಕೆ ತಂದಮೇಲೆ
ಹೆರಿಗೆಯಾಗದಂತೆ ತಡೆಯುವೆನೋ?”
ಎಂದು ಯೆಹೋವ ದೇವರು ಹೇಳುತ್ತಾನೆ.
“ನಾನು ಪ್ರಸವಕ್ಕೆ ತಂದಮೇಲೆ, ಪ್ರಸವವಾಗದೆ ಇರಲು ಗರ್ಭ ಮುಚ್ಚಿಬಿಡುವೆನೇ?”
ಎಂದು ನಿನ್ನ ದೇವರು ಕೇಳುತ್ತಾನೆ.
10 “ಯೆರೂಸಲೇಮಿನ ಸಂಗಡ ನೀವು ಸಂತೋಷಿಸಿರಿ.
ಅವಳನ್ನು ಪ್ರೀತಿ ಮಾಡುವವರೆಲ್ಲಾ
ಆಕೆಯೊಂದಿಗೆ ಉಲ್ಲಾಸಪಡಿರಿ.
ಅವಳಿಗೋಸ್ಕರ ದುಃಖಿಸಿದವರೆಲ್ಲರೂ,
ಆಕೆಯ ಸಂತೋಷಕ್ಕಾಗಿ ಆನಂದಪಡಿರಿ.
11 ಆಕೆಯ ಸಾಂತ್ವನ ಸ್ತನವನ್ನು
ಕುಡಿದು ನೀವು ತೃಪ್ತಿಯಾಗಿರುವಿರಿ.
ನೀವು ಕುಡಿಯುವಿರಿ ಮತ್ತು ಅದರ ಸಮೃದ್ಧಿಯು
ನಿಮ್ಮ ಸಂತೋಷಕ್ಕೆ ಕಾರಣವಾಗಿದೆ.”

12 ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ:

“ಇಗೋ, ನಾನು ನದಿಯಂತೆ ಸಮಾಧಾನವನ್ನೂ,
ಹರಿಯುವ ಹಳ್ಳದಂತೆ ಜನಾಂಗಗಳ ವೈಭವವನ್ನೂ ಆಕೆಯ ಕಡೆಗೆ ಬರಮಾಡುವೆನು.
ಆಗ ನೀವು ಪಾನ ಮಾಡುವಿರಿ; ನಿಮ್ಮನ್ನು ಆಕೆಯ ಪಕ್ಕೆಯಲ್ಲಿ ಎತ್ತಿಕೊಂಡುಹೋಗುವರು.
ನೀವು ಆಕೆಯ ಮಡಿಲಲ್ಲಿ ನಲಿದಾಡುವಿರಿ.
13 ತಾಯಿ ತನ್ನ ಮಗುವನ್ನು ಆದರಿಸುವ ಪ್ರಕಾರವೇ,
ನಾನು ನಿಮ್ಮನ್ನು ಆದರಿಸುವೆನು.
ಯೆರೂಸಲೇಮಿನ ನಿಮಿತ್ತವೇ, ಆದರಣೆ ಪಡುವಿರಿ.”
 
14 ನೀವು ಅದನ್ನು ಕಾಣುವಾಗ, ನಿಮ್ಮ ಹೃದಯವು ಸಂತೋಷಿಸುವುದು.
ನಿಮ್ಮ ಎಲುಬುಗಳು ಹಸಿರು ಹುಲ್ಲಿನ ಹಾಗೆ ಚಿಗುರುವುವು.
ಯೆಹೋವ ದೇವರ ಕೈ ತಮ್ಮ ಸೇವಕರ ಮೇಲೆಯೂ,
ಅವರ ರೌದ್ರವು ತಮ್ಮ ಶತ್ರುಗಳ ಮೇಲೆ ಕಾಣಬರುವುದು.
15 ಯೆಹೋವ ದೇವರು ಬೆಂಕಿಯೊಡನೆ ಬರುವರು.
ಅವರ ರಥಗಳು ಬಿರುಗಾಳಿಯ ಹಾಗೆ ಇರುವುವು.
ಕಠಿಣವಾದ ತಮ್ಮ ಕೋಪವನ್ನೂ
ಅಗ್ನಿಜ್ವಾಲೆಗಳಿಂದ ತಮ್ಮ ಗದರಿಕೆಯನ್ನೂ ಸಲ್ಲಿಸುವುದಕ್ಕಾಗಿಯೇ ಬರುವರು.
16 ಏಕೆಂದರೆ ಬೆಂಕಿಯಿಂದಲೂ ತಮ್ಮ ಖಡ್ಗದಿಂದಲೂ
ಯೆಹೋವ ದೇವರು ಮನುಷ್ಯರಿಗೆಲ್ಲಾ ನ್ಯಾಯತೀರಿಸುವರು.
ಯೆಹೋವ ದೇವರಿಂದ ಹತರಾಗುವವರು ಅನೇಕರಾಗಿರುವರು.

17 “ತೋಟಗಳಲ್ಲಿ ಒಬ್ಬರ ಹಿಂದೊಬ್ಬರು ಮಧ್ಯದಲ್ಲಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು, ಪವಿತ್ರ ಮಾಡಿಕೊಳ್ಳುವವರೂ; ಹಂದಿ ಮಾಂಸವನ್ನೂ, ಅಸಹ್ಯವಾದದ್ದನ್ನೂ, ಇಲಿಯನ್ನೂ ತಿನ್ನುವವರು ಒಟ್ಟಾಗಿ ದಹಿಸಿ ಹೋಗುವರು,” ಎಂದು ಯೆಹೋವ ದೇವರು ಹೇಳುತ್ತಾರೆ.

18 “ನಾನು ಅವರ ಕ್ರಿಯೆಗಳನ್ನೂ ಅವರ ಆಲೋಚನೆಗಳನ್ನೂ ಬಲ್ಲೆನು. ಎಲ್ಲಾ ಜನಾಂಗಗಳನ್ನೂ ಭಾಷೆಯವರನ್ನೂ ಇನ್ನು ಮುಂದೆ ಒಟ್ಟಿಗೆ ಬರಮಾಡುವೆನು. ಆಗ ಅವರು ಬಂದು ನನ್ನ ಮಹಿಮೆಯನ್ನು ನೋಡುವರು.

19 “ಅವರ ಮಧ್ಯದಲ್ಲಿ ಗುರುತನ್ನಿಟ್ಟು, ಅವರಲ್ಲಿ ತಪ್ಪಿಸಿಕೊಂಡವರನ್ನು ಜನಾಂಗಗಳಿಗೂ, ತಾರ್ಷೀಷ್, ಪೂಲ್*ಪೂಲ್ ಅಥವಾ ಲಿಬಿಯಾ, ಬಿಲ್ಲು ಪ್ರಯೋಗಿಸುವುದರಲ್ಲಿ ಪ್ರವೀಣರಾದ ಲೂದ್ಲೂದ್ ಅಥವಾ ಲಿದಿಯಾ, ತೂಬಲ್, ಗ್ರೀಸ್ ಎಂಬ ನಾಡುಗಳಿಗೂ ನನ್ನ ಸಮಾಚಾರವನ್ನು ಕೇಳದ ನನ್ನ ಮಹಿಮೆಯನ್ನು ಕಾಣದೆ ಇರುವ ದೂರ ದ್ವೀಪನಿವಾಸಿಗಳಿಗೂ ಕಳುಹಿಸುವೆನು. ಅವರು ಜನಾಂಗಗಳಲ್ಲಿ ನನ್ನ ಮಹಿಮೆಯನ್ನು ಪ್ರಕಟಿಸುವರು. 20 ಅವರು ನಿಮ್ಮ ಸಹೋದರರನ್ನು ಕುದುರೆಗಳ ಮೇಲೆಯೂ ರಥಗಳಲ್ಲಿಯೂ ಪಲ್ಲಕ್ಕಿಗಳಲ್ಲಿಯೂ ಹೇಸರಗತ್ತೆಗಳ ಮೇಲೆಯೂ ಒಂಟೆಗಳ ಮೇಲೆಯೂ ಸಮಸ್ತ ಜನಾಂಗಗಳೊಳಗಿಂದ ಯೆಹೋವ ದೇವರಿಗೆ ಕಾಣಿಕೆಯಾಗಿ ಇಸ್ರಾಯೇಲರು ಕಾಣಿಕೆಯನ್ನು ಶುದ್ಧಪಾತ್ರೆಯಲ್ಲಿ ಯೆಹೋವ ದೇವರು ಮನೆಗೆ ತರುವ ಪ್ರಕಾರ ನನ್ನ ಪರಿಶುದ್ಧ ಪರ್ವತವಾದ ಯೆರೂಸಲೇಮಿಗೆ ತರುವರೆಂದು ಯೆಹೋವ ದೇವರು ಹೇಳುತ್ತಾರೆ. 21 ಅವರಲ್ಲಿ ಯಾಜಕರಿಗಾಗಿಯೂ ಲೇವಿಯರಿಗಾಗಿಯೂ ಅವರಿಂದ ತೆಗೆದುಕೊಳ್ಳುವೆನು” ಎಂದು ಯೆಹೋವ ದೇವರು ಹೇಳುತ್ತಾರೆ.

 
22 “ನಾನು ಉಂಟುಮಾಡುವ ಹೊಸ ಆಕಾಶವೂ ಹೊಸ ಭೂಮಿಯೂ ನನ್ನ ಮುಂದೆ ನೆಲೆಯಾಗಿರುವ ಪ್ರಕಾರವೇ, ನಿಮ್ಮ ಸಂತಾನವೂ ನಿಮ್ಮ ಹೆಸರೂ ನೆಲೆಯಾಗುವುದು,” ಎಂದು ಯೆಹೋವ ದೇವರು ಘೋಷಿಸುತ್ತಾರೆ. 23 ಇದಾದ ಮೇಲೆ, “ಪ್ರತಿಯೊಂದು ಅಮಾವಾಸ್ಯೆಯಲ್ಲಿಯೂ ಒಂದೊಂದು ಸಬ್ಬತ್ ದಿನದಲ್ಲಿಯೂ ಮನುಷ್ಯರೆಲ್ಲಾ ನನ್ನ ಮುಂದೆ ಆರಾಧಿಸುವುದಕ್ಕೆ ಬರುವರು” ಎಂದು ಯೆಹೋವ ದೇವರು ಹೇಳುತ್ತಾರೆ. 24 “ಅವರು ಮುಂದೆ ಹೋಗಿ ನನಗೆ ವಿರೋಧವಾಗಿ ದ್ರೋಹಮಾಡಿದ ಮನುಷ್ಯರ ಹೆಣಗಳನ್ನು ನೋಡುವರು. ಅವುಗಳನ್ನು ಕಡಿಯುವ ಹುಳ ಸಾಯುವುದಿಲ್ಲ, ಸುಡುವ ಬೆಂಕಿಯು ಆರುವುದಿಲ್ಲ, ಅವರು ಎಲ್ಲಾ ಮನುಷ್ಯರಿಗೆ ಹೇಸಿಗೆಯಾಗುವರು.”

<- ಯೆಶಾಯ 65