Link to home pageLanguagesLink to all Bible versions on this site
65
ನ್ಯಾಯತೀರ್ಪು ಮತ್ತು ರಕ್ಷಣೆ
1 “ಕೇಳದವರಿಗೂ ನಾನು ನನ್ನನ್ನು ಪ್ರಕಟಿಸಿಕೊಂಡಿದ್ದೇನೆ.
ನನ್ನನ್ನು ಹುಡುಕದವರಿಗೆ ನಾನು ಸಿಕ್ಕಿದೆನು.
ನನ್ನ ಹೆಸರನ್ನು ಕರೆಯದ ಜನಾಂಗಕ್ಕೆ,
‘ಇಗೋ, ಇದ್ದೇನೆ; ಇಗೋ, ಇದ್ದೇನೆ,’ ಎಂದು ಹೇಳಿದೆನು.
2 ಒಳ್ಳೆಯದಲ್ಲದ ಮಾರ್ಗದಲ್ಲಿ
ತಮ್ಮ ಆಲೋಚನೆಗಳ ಪ್ರಕಾರ ನಡೆದುಕೊಂಡು
ತಿರುಗಿಬೀಳುವ ಜನರಿಗೆ ದಿನವೆಲ್ಲಾ
ನಾನು ಕೈಚಾಚಿ ಕರೆದೆನು.
3 ಇವರು ಯಾವಾಗಲೂ ನನ್ನ ಮುಖದ ಮುಂದೆ
ನನಗೆ ಕೋಪೋದ್ರೇಕವನ್ನು ಎಬ್ಬಿಸುವ ಜನರು.
ತೋಟಗಳಲ್ಲಿ ಬಲಿ ಅರ್ಪಿಸಿ,
ಇಟ್ಟಿಗೆಯ ಬಲಿಪೀಠದ ಮೇಲೆ ಧೂಪ ಸುಡುವರು.
4 ಸಮಾಧಿಗಳಲ್ಲಿ ಉಳಿದು,
ಗವಿಗಳಲ್ಲಿ ತಂಗುವರು.
ಹಂದಿಯ ಮಾಂಸವನ್ನು ತಿನ್ನುವರು
ತಮ್ಮ ಪಾತ್ರೆಗಳಲ್ಲಿ ಅಶುದ್ಧ ಪದಾರ್ಥಗಳ ಸಾರನ್ನು ಇಟ್ಟುಕೊಂಡು,
5 ‘ನಿನ್ನಷ್ಟಕ್ಕೆ ನೀನೇ ನಿಂತುಕೋ, ನನ್ನ ಬಳಿಗೆ ಬರಬೇಡ.
ಏಕೆಂದರೆ ನಿನಗಿಂತ ಪರಿಶುದ್ಧನಾಗಿದ್ದೇನೆ,’ ಎಂದು ಹೇಳುವರು.
ಇವರು ನನ್ನ ಮೂಗಿನಲ್ಲಿ ಹೊಗೆಯಾಗಿಯೂ,
ದಿನವೆಲ್ಲಾ ಉರಿಯುವ ಬೆಂಕಿಯಾಗಿಯೂ ಇದ್ದಾರೆ.
 
6 “ನನ್ನ ಮುಂದೆ ಅದು ಬರೆಯಲಾಗಿದೆ.
ನಾನು ಸುಮ್ಮನಿರದೆ ಪ್ರತಿಫಲ ಕೊಡುತ್ತೇನೆ.
ಅವರ ಮಡಿಲಲ್ಲಿ ಪ್ರತಿಫಲ ಕೊಡುತ್ತೇನೆ.
7 ನಿಮ್ಮ ಪಾಪಗಳಿಗೂ, ನಿಮ್ಮ ತಂದೆಗಳ ಪಾಪಗಳಿಗೂ ಕೂಡ ಪ್ರತಿಫಲ ಕೊಡುತ್ತೇನೆ”
ಎಂದು ಯೆಹೋವ ದೇವರು ಹೇಳುತ್ತಾರೆ.
“ಅವರು ಬೆಟ್ಟಗಳ ಮೇಲೆ ಧೂಪ ಸುಟ್ಟು,
ಗುಡ್ಡಗಳ ಮೇಲೆ ನನ್ನನ್ನು ಪರಿಹಾಸ್ಯ ಮಾಡಿದರಲ್ಲಾ.
ಹೀಗಿರುವುದರಿಂದ ಅವರ ಹಿಂದಿನ ಕೆಲಸಗಳನ್ನು
ಅವರ ಮಡಿಲಲ್ಲಿ ಅಳೆದು ಸುರಿಸುವೆನು.”

8 ಯೆಹೋವ ದೇವರು ಹೀಗೆನ್ನುತ್ತಾರೆ:

“ರಸ ದೊರೆಯಬಹುದಾದ ದ್ರಾಕ್ಷಿ ಗೊಂಚಲನ್ನು
ಒಬ್ಬನು ನೋಡಿ, ‘ಹಾಳು ಮಾಡಬೇಡ,
ಅದರಲ್ಲಿ ಪ್ರಯೋಜನವಿದೆ,’
ಎನ್ನುವಂತೆ ನಾನು ನನ್ನ ಸೇವಕರನ್ನು ಲಕ್ಷ್ಯಕ್ಕೆ ತಂದು
ಇವರನ್ನೆಲ್ಲಾ ಹಾಳುಮಾಡಬಾರದು ಎಂದುಕೊಳ್ಳುವೆನು.
9 ಯಾಕೋಬಿನೊಳಗಿಂದ ಒಂದು ಸಂತಾನವನ್ನೂ,
ಯೆಹೂದದೊಳಗಿಂದ ನನ್ನ ಪರ್ವತಗಳಿಗೆ ಬಾಧ್ಯಸ್ಥನಾಗಿರುವವನನ್ನು ಹೊರಗೆ ಬರಮಾಡುವೆನು.
ನಾನು ಆಯ್ದುಕೊಂಡವರು ಅದನ್ನು ಸ್ವಾಧೀನಮಾಡಿಕೊಳ್ಳುವರು.
ನನ್ನ ಸೇವಕರು ಅದರಲ್ಲಿ ವಾಸವಾಗುವರು.
10 ನನ್ನನ್ನು ಹುಡುಕುವ ನನ್ನ ಜನರಿಗೋಸ್ಕರ ಶಾರೋನು ಮಂದೆಗಳ ಹಟ್ಟಿಯಾಗಿಯೂ,
ಆಕೋರಿನ ತಗ್ಗು, ದನಗಳು ಮಲಗುವ ಸ್ಥಳವಾಗಿಯೂ ಇರುವುದು,
ಎಂದು ಯೆಹೋವ ದೇವರು ಹೇಳುತ್ತಾರೆ.
 
11 “ಆದರೆ ಯೆಹೋವನಾದ ನನ್ನನ್ನು ತೊರೆದು,
ನನ್ನ ಪವಿತ್ರ ಪರ್ವತವನ್ನು ಮರೆತು,
ಶುಭದಾಯಕ ದೇವತೆಗೆ ಔತಣವನ್ನು ಅಣಿಮಾಡಿ,
ಗಾದ್ ಎಂಬ ಅದೃಷ್ಟ ದೇವತೆಗೆ ಮದ್ಯವನ್ನು ತುಂಬಾ ಬೆರೆಸಿದ ನಿಮಗೆ
12 ಖಡ್ಗವನ್ನೇ ಗತಿಯಾಗ ಮಾಡುವೆನು.
ಆದ್ದರಿಂದ ನಿಮ್ಮನ್ನು ಖಡ್ಗಕ್ಕೆ ನೇಮಿಸುವೆನು.
ನೀವೆಲ್ಲರು ಕೊಲೆಗೆ ಬೊಗ್ಗಿಕೊಳ್ಳುವಿರಿ.
ಏಕೆಂದರೆ, ನಾನು ಕರೆಯಲು, ನೀವು ಉತ್ತರ ಕೊಡಲಿಲ್ಲ. ನಾನು ಹೇಳಿದಾಗ ನೀವು ಕೇಳಲಿಲ್ಲ.
ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದಿರಿ.
ನಾನು ಮೆಚ್ಚದ್ದನ್ನು ಆರಿಸಿಕೊಂಡಿರಿ.”

13 ಹೀಗಿರುವುದರಿಂದ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ:

“ನನ್ನ ಸೇವಕರು ತಿನ್ನುವರು.
ಆದರೆ ನೀವು ಹಸಿದಿರುವಿರಿ.
ನನ್ನ ಸೇವಕರು ಕುಡಿಯುವರು,
ಆದರೆ ನೀವು ಬಾಯಾರಿ ಇರುವಿರಿ.
ಇಗೋ, ನನ್ನ ಸೇವಕರು ಸಂತೋಷಪಡುವರು,
ಆದರೆ ನೀವು ನಾಚಿಕೆ ಪಡುವಿರಿ.
14 ಇಗೋ, ನನ್ನ ಸೇವಕರು
ಹೃದಯದ ಆನಂದದಿಂದ ಹಾಡುವರು,
ಆದರೆ ನೀವು ಹೃದಯದ ವ್ಯಸನದಿಂದ ಅಳುವಿರಿ
ಮತ್ತು ಮುರಿದ ಆತ್ಮದಿಂದ ಗೋಳಾಡುವಿರಿ.
15 ನಿಮ್ಮ ಹೆಸರನ್ನು ನಾನು ಆಯ್ದುಕೊಂಡವರಿಗೆ
ಶಾಪವಾಗಿ ಉಳಿಸುವಿರಿ.
ಹೇಗೆಂದರೆ, ಸಾರ್ವಭೌಮ ಯೆಹೋವ ದೇವರು ಅಪನಂಬಿಗಸ್ತರಾದ ನಿಮ್ಮನ್ನು ಕೊಂದುಹಾಕಿ,
ತಮ್ಮ ಸೇವಕರಿಗಾದರೋ ಬೇರೆ ಹೆಸರನ್ನು ನೀಡುವರು.
16 ಆಗ ದೇಶದಲ್ಲಿ ತನ್ನನ್ನು ಆಶೀರ್ವದಿಸುವವನು,
ಸತ್ಯ ದೇವರಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವನು;
ದೇಶದಲ್ಲಿ ಆಣೆ ಇಟ್ಟುಕೊಳ್ಳುವವನು, ಸತ್ಯ ದೇವರಲ್ಲಿ ಆಣೆ ಇಟ್ಟುಕೊಳ್ಳುವನು.
ಏಕೆಂದರೆ ಮುಂಚಿನ ಕಷ್ಟಗಳು ಮರೆತು ಹೋಗಿವೆ,
ಮತ್ತು ಅವು ನನ್ನ ಕಣ್ಣಿಗೆ ಮರೆಯಾಗಿವೆ.
ಹೊಸ ಆಕಾಶವೂ, ಹೊಸ ಭೂಮಿಯೂ
17 “ನಾನು ಹೊಸ ಆಕಾಶವನ್ನೂ,
ಹೊಸ ಭೂಮಿಯನ್ನೂ ಸೃಷ್ಟಿಸುತ್ತೇನೆ.
ಮುಂಚಿನವುಗಳು ಜ್ಞಾಪಕದಲ್ಲಿರುವುದಿಲ್ಲ
ಇಲ್ಲವೆ ಅವು ಸ್ಮರಣೆಗೆ ಬರುವುದಿಲ್ಲ.
18 ಆದರೆ ನಾನು ಸೃಷ್ಟಿಸುವುದರ ವಿಷಯದಲ್ಲಿ ಸಂತೋಷಿಸಿ,
ಎಂದೆಂದಿಗೂ ಉಲ್ಲಾಸಪಡಿರಿ.
ಏಕೆಂದರೆ ಇಗೋ, ನಾನು ಯೆರೂಸಲೇಮಿನಲ್ಲಿ ಉಲ್ಲಾಸವನ್ನೂ,
ನನ್ನ ಜನರಲ್ಲಿ ಸಂತೋಷವನ್ನೂ ಸೃಷ್ಟಿಸುತ್ತೇನೆ.
19 ಯೆರೂಸಲೇಮಿನಲ್ಲಿ ಉಲ್ಲಾಸಿಸಿ,
ನನ್ನ ಜನರಲ್ಲಿ ಸಂತೋಷ ಪಡುವೆನು.
ಅದರಲ್ಲಿ ಅಳುವ ಧ್ವನಿಯೂ,
ಪ್ರಲಾಪದ ಧ್ವನಿಯೂ ಇನ್ನು ಕೇಳಿಬರುವುದಿಲ್ಲ.
 
20 “ಅಲ್ಲಿ ಕೆಲವು ದಿನಗಳು ಮಾತ್ರ ಬದುಕತಕ್ಕ ಕೂಸೂ,
ವೃದ್ಧನೂ ಇರುವುದಿಲ್ಲ.
ಮಗುವು ನೂರು ವರುಷದವನಾಗಿ ಸಾಯುವುದು.
ಆದರೆ ನೂರು ವರುಷವನ್ನು ತಲುಪಲು ವಿಫಲನಾದವನನ್ನು ಶಾಪಗ್ರಸ್ತ ಎಂದು ಪರಿಗಣಿಸಲಾಗುತ್ತದೆ.
21 ಇದಲ್ಲದೆ ಅವರು ಮನೆಗಳನ್ನು ಕಟ್ಟಿ, ವಾಸಮಾಡುವರು;
ದ್ರಾಕ್ಷಿತೋಟಗಳನ್ನು ನೆಟ್ಟು, ಅವುಗಳ ಫಲವನ್ನು ಉಣ್ಣುವರು.
22 ಅವರು ಕಟ್ಟಿದ ಮನೆಗಳಲ್ಲಿ ಬೇರೆಯವರು ವಾಸಮಾಡುವುದಿಲ್ಲ.
ಅವರು ನೆಟ್ಟ ತೋಟದ ಫಲವನ್ನು ಇನ್ನೊಬ್ಬರು ತಿನ್ನುವುದಿಲ್ಲ.
ಏಕೆಂದರೆ, ಮರಗಳ ಹಾಗೆ ನನ್ನ ಜನರು ಬಹುಕಾಲ ಬಾಳುವರು.
ನಾನು ಆಯ್ದುಕೊಂಡವರು ತಮ್ಮ ಕೈಕೆಲಸಗಳನ್ನು ಅನುಭವಿಸುವರು.
23 ಅವರು ವ್ಯರ್ಥವಾಗಿ ದುಡಿಯರು.
ಕಷ್ಟವನ್ನು ಎದುರುಗೊಳ್ಳುವುದಿಲ್ಲ.
ಏಕೆಂದರೆ ಅವರು ಯೆಹೋವ ದೇವರ ಆಶೀರ್ವಾದ ಹೊಂದಿದವರ ಸಂತಾನವಾಗಿದ್ದಾರೆ.
ಅವರ ಸಂಗಡ ಅವರ ಸಂತತಿಯು ಸಹ ಆಶೀರ್ವಾದ ಹೊಂದುವುದು.
24 ಅವರು ಕರೆಯುವುದಕ್ಕಿಂತ ಮುಂಚೆ ನಾನು ಉತ್ತರಕೊಡುವೆನು.
ಅವರು ಇನ್ನೂ ಮಾತನಾಡುತ್ತಿರುವಾಗಲೇ ನಾನು ಕೇಳುವೆನು.
25 ತೋಳವೂ ಕುರಿಮರಿಯೂ ಒಂದಾಗಿ ಮೇಯುವುವು;
ಸಿಂಹವು ಎತ್ತಿನ ಹಾಗೆ ಹುಲ್ಲು ತಿನ್ನುವುದು;
ಹಾವಿಗೆ ಮಣ್ಣೇ ಆಹಾರವಾಗುವುದು;
ಅವು ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ
ಯಾವ ಕೇಡೂ ಮಾಡುವುದಿಲ್ಲ, ನಾಶವೂ ಮಾಡುವುದಿಲ್ಲ,”
ಎಂದು ಯೆಹೋವ ದೇವರು ಹೇಳುತ್ತಾರೆ.

<- ಯೆಶಾಯ 64ಯೆಶಾಯ 66 ->