64
1 ಆಹಾ, ಆಕಾಶಗಳನ್ನು ಹರಿದುಬಿಟ್ಟು ಇಳಿದು ಬಾ!
ನಿಮ್ಮ ದರ್ಶನವನ್ನು ಕಂಡು ಪರ್ವತಗಳು ಗಡಗಡನೆ ನಡುಗುವಂತೆಯೂ,
2 ಬೆಂಕಿ ಕಟ್ಟಿಗೆಯನ್ನು ಹೊತ್ತಿಸುವಂತೆಯೂ,
ಬೆಂಕಿ ನೀರನ್ನು ಉಕ್ಕಿಸುವಂತೆಯೂ,
ನೀನು ಇಳಿದುಬಂದು ನಿನ್ನ ಹೆಸರನ್ನು ನಿನ್ನ ವೈರಿಗಳಿಗೆ
ತಿಳಿಯುವಂತೆ ಮಾಡು!
3 ನಾವು ಎದುರು ನೋಡದೆ ಇದ್ದ ಭಯಂಕರವಾದವುಗಳನ್ನು ನೀನು ಮಾಡಿದಾಗ ಇಳಿದು ಬಂದೆ,
ಬೆಟ್ಟಗಳು ನಿನ್ನ ಸಮ್ಮುಖಕ್ಕೆ ಕರಗಿ ಹೋದವು.
4 ದೇವರೇ, ನಿನಗೋಸ್ಕರ ಕಾದುಕೊಳ್ಳುವವರಿಗೆ ನೀನು ಮಾಡುವುದನ್ನು
ಲೋಕದ ಉತ್ಪತ್ತಿಗೆ ಮುಂಚೆ ದೇವರೇ ನಿನ್ನ ಹೊರತಾಗಿ ಯಾರೂ ಕೇಳಲಿಲ್ಲ.
ಯಾರ ಕಿವಿಯೂ ಕೇಳಲಿಲ್ಲ.
ಯಾರ ಕಣ್ಣೂ ಕಾಣಲಿಲ್ಲ.
5 ಸಂತೋಷಪಟ್ಟು ನೀತಿಯನ್ನು ಕೈಗೊಳ್ಳುವವರನ್ನೂ,
ನಿಮ್ಮ ಮಾರ್ಗಗಳನ್ನು
ಜ್ಞಾಪಕ ಮಾಡುವವನನ್ನೂ ನೀವು ಸಹಾಯಮಾಡಲು ಬರುತ್ತೀರಿ.
ಆದರೂ ನಾವು ಪಾಪದಲ್ಲೇ ಮುನ್ನಡೆದೆವು.
ಆದ್ದರಿಂದ ನೀವು ಬೇಸರಗೊಂಡಿರುವಿರಿ.
ಹಾಗಾದರೆ, ನಮ್ಮಂಥವರಿಗೆ ರಕ್ಷಣೆ ಇದೆಯೇ?
6 ನಾವೆಲ್ಲರೂ ಅಶುದ್ಧನ ಹಾಗೆ ಇದ್ದೇವೆ.
ನಮ್ಮ ನೀತಿ ಕಾರ್ಯಗಳೆಲ್ಲಾ ಮೈಲಿಗೆ ವಸ್ತ್ರದ ಹಾಗೆ ಇವೆ.
ನಾವೆಲ್ಲರೂ ಎಲೆಯ ಹಾಗೆ ಒಣಗಿಹೋಗಿದ್ದೇವೆ.
ನಮ್ಮ ಪಾಪಗಳು ಗಾಳಿಯಂತೆ ನಮ್ಮನ್ನು ಬಡಿದುಕೊಂಡು ಹೋಗಿವೆ.
7 ನಿನ್ನ ಹೆಸರನ್ನು ಕರೆಯುವವನೂ,
ನಿನ್ನನ್ನು ಹಿಡಿದುಕೊಳ್ಳುವುದಕ್ಕೆ ಎಚ್ಚರಗೊಳ್ಳುವವನು ಒಬ್ಬನೂ ಇಲ್ಲ.
ಏಕೆಂದರೆ ನಿನ್ನ ಮುಖವನ್ನು ನಮಗೆ ಮರೆಮಾಡಿದ್ದೀ.
ನಮ್ಮ ಪಾಪಗಳಿಗಾಗಿ ನಮ್ಮನ್ನು ಬಿಟ್ಟುಬಿಟ್ಟಿದ್ದೀರಿ.
8 ಆದರೆ ಈಗ ಯೆಹೋವ ದೇವರೇ, ನಮ್ಮ ತಂದೆಯು ನೀನೇ,
ನಾವು ಮಣ್ಣು. ನೀನು ನಮ್ಮ ಕುಂಬಾರನು.
ನಾವೆಲ್ಲರೂ ನಿನ್ನ ಕೈಕೆಲಸಗಳು.
9 ಯೆಹೋವ ದೇವರೇ, ಅತ್ಯಧಿಕವಾಗಿ ಬೇಸರಗೊಳ್ಳಬೇಡ.
ಎಂದೆಂದಿಗೂ ಪಾಪವನ್ನು ಜ್ಞಾಪಕ ಮಾಡಬೇಡ.
ನೋಡಿರಿ, ನಾವು ಬೇಡುತ್ತೇವೆ, ದೃಷ್ಟಿ ಇಡಿರಿ.
ನಾವೆಲ್ಲರೂ ನಿನ್ನ ಜನರೇ.
10 ನಿನ್ನ ಪರಿಶುದ್ಧ ಪಟ್ಟಣಗಳು ಅಡವಿಯಾದವು.
ಚೀಯೋನು ಅಡವಿಯಾಯಿತು. ಯೆರೂಸಲೇಮು ಹಾಳಾಯಿತು.
11 ನಮ್ಮ ತಂದೆಗಳು ನಿನ್ನನ್ನು ಕೊಂಡಾಡಿದ ನಮ್ಮ ಪರಿಶುದ್ಧ ಶೃಂಗಾರವಾದ ದೇವಾಲಯ
ಬೆಂಕಿಯಿಂದ ಸುಟ್ಟುಹೋಯಿತು.
ನಮ್ಮ ಅಮೂಲ್ಯ ವಸ್ತುಗಳೆಲ್ಲ ನಾಶವಾದವು.
12 ಇವು ಹೀಗಿರಲಾಗಿ ಯೆಹೋವ ದೇವರೇ, ನೀವು ಹಿಂಜರಿಯುತ್ತೀರೋ?