55
ಬಾಯಾರಿದವರಿಗೆ ಆಹ್ವಾನ
1 ಬಾಯಾರಿದ ಸಕಲ ಜನರೇ,
ನೀರಿನ ಬಳಿಗೆ ಬನ್ನಿರಿ,
ಹಣವಿಲ್ಲದವನೂ ಬರಲಿ.
ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ.
ಬನ್ನಿರಿ, ಹಣವಿಲ್ಲದೆ ಮತ್ತು ಕ್ರಯವಿಲ್ಲದೆ
ದ್ರಾಕ್ಷಾರಸವನ್ನೂ ಹಾಲನ್ನೂ ಕೊಂಡುಕೊಳ್ಳಿರಿ.
2 ಆಹಾರವಲ್ಲದಕ್ಕೆ ಹಣವನ್ನು ವ್ಯರ್ಥ ಮಾಡುವುದು ಏಕೆ?
ತೃಪ್ತಿಪಡಿಸದವುಗಳಿಗೆ ನಿಮ್ಮ ದುಡಿತವನ್ನು ವೆಚ್ಚಮಾಡುವುದು ಏಕೆ?
ಶ್ರದ್ಧೆಯಿಂದ ನನ್ನ ಕಡೆಗೆ ಕಿವಿಗೊಡಿರಿ ಮತ್ತು ಒಳ್ಳೆಯದನ್ನು ನೀವು ಉಣ್ಣಿರಿ.
ನೀವು ಮೃಷ್ಟಾನ್ನದಲ್ಲಿ ಆನಂದಿಸಿ!
3 ಕಿವಿಯನ್ನು ಇತ್ತ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ,
ಆಲಿಸಿದರೆ ಬದುಕಿ ಬಾಳುವಿರಿ.
ದಾವೀದನಿಗೆ ಖಂಡಿತವಾಗಿ ವಾಗ್ದಾನ ಮಾಡಿದ ಕೃಪಾವರಗಳನ್ನು
ನಿಮಗೆ ಕೊಡುತ್ತೇನೆಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು.
4 ನಾನು ಅವನನ್ನು ಜನರಿಗೆ ಸಾಕ್ಷಿಯನ್ನಾಗಿಯೂ,
ಜನರಿಗೆ ನಾಯಕನನ್ನಾಗಿಯೂ, ಅಧಿಪತಿಯನ್ನಾಗಿಯೂ ಕೊಟ್ಟೆನು.
5 ನಿನ್ನ ದೇವರಾದ ಯೆಹೋವ ದೇವರ ನಿಮಿತ್ತವೂ,
ಇಸ್ರಾಯೇಲಿನ ಪರಿಶುದ್ಧನ ನಿಮಿತ್ತವೂ
ನೀನು ತಿಳಿಯದ ಜನಾಂಗಗಳನ್ನು ಕರೆಯುವೆ,
ಏಕೆಂದರೆ ಆತನು ನಿನಗೆ ಕೊಟ್ಟ ವೈಭವದಿಂದ ನಿನ್ನನ್ನು
ತಿಳಿಯದ ಜನಾಂಗಗಳು ನಿನ್ನ ಬಳಿಗೆ ಓಡಿ ಬರುವುವು.
6 ಯೆಹೋವ ದೇವರು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ,
ಆತನು ಸಮೀಪದಲ್ಲಿರುವಾಗ, ಆತನಿಗೆ ಬಿನ್ನಹ ಮಾಡಿರಿ.
7 ದುಷ್ಟನು ತನ್ನ ದುರ್ಮಾರ್ಗವನ್ನೂ,
ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು,
ಯೆಹೋವ ದೇವರ ಕಡೆಗೆ ಹಿಂದಿರುಗಲಿ. ಅವರು ಅವರ ಮೇಲೆ ಕರುಣೆ ಇಡುವರು.
ನಮ್ಮ ದೇವರ ಬಳಿಗೂ ಹಿಂದಿರುಗಲಿ. ಏಕೆಂದರೆ ಅವರು ಹೇರಳವಾಗಿ ಕ್ಷಮಿಸುವರು.
8 ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ.
ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ,
ಎಂದು ಯೆಹೋವ ದೇವರು ಹೇಳುತ್ತಾರೆ.
9 ಆಕಾಶವು ಭೂಮಿಯ ಮೇಲೆ ಎಷ್ಟು ಉನ್ನತವೋ,
ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಿಗಿಂತಲೂ,
ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತಲೂ ಅಷ್ಟು ಉನ್ನತವಾಗಿವೆ.
10 ಮಳೆಯೂ, ಹಿಮವೂ ಆಕಾಶದಿಂದ ಬಿದ್ದು,
ಭೂಮಿಯನ್ನು ತೋಯಿಸಿ, ಹಸಿರುಗೊಳಿಸಿ,
ಫಲಿಸುವಂತೆ ಮಾಡಿ, ಬಿತ್ತುವವನಿಗೆ ಬೀಜವನ್ನು,
ಉಣ್ಣುವವನಿಗೆ ಆಹಾರವನ್ನು
ಒದಗಿಸದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ
ಹಿಂದಿರುಗುವುದಿಲ್ಲವೋ, ಹಾಗೆಯೇ
11 ನನ್ನ ಬಾಯಿಂದ ಹೊರಟ ಮಾತು
ನನ್ನ ಇಷ್ಟಾರ್ಥವನ್ನು ನೆರವೇರಿಸಿ,
ನಾನು ಉದ್ದೇಶಿಸಿದ್ದನ್ನು ಕೈಗೂಡಿಸದ ಹೊರತು
ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ.
12 ಏಕೆಂದರೆ ನೀವು ಆನಂದದೊಡನೆ ಹೋಗುವಿರಿ,
ಸಮಾಧಾನದಿಂದ ಬರುವಿರಿ.
ಪರ್ವತಗಳು ಮತ್ತು ಗುಡ್ಡಗಳು
ನಿಮ್ಮ ಮುಂದೆ ಹರ್ಷಧ್ವನಿಗೈಯುವವು.
ಹೊಲದ ಮರಗಳೆಲ್ಲಾ
ಚಪ್ಪಾಳೆ ಹೊಡೆಯುವುವು.
13 ಮುಳ್ಳಿಗೆ ಬದಲಾಗಿ ತುರಾಯಿ ಮರವು
ಮತ್ತು ದತ್ತೂರಿಗೆ ಬದಲಾಗಿ ಸುವಾಸನೆ ಬೀರುವ ಮರವು ಹುಟ್ಟುವುವು.
ಇದು ಯೆಹೋವ ದೇವರ ಹೆಸರಿಗಾಗಿ
ಮತ್ತು ಶಾಶ್ವತವಾದ ಗುರುತಾಗಿ