Link to home pageLanguagesLink to all Bible versions on this site
47
ಬಾಬಿಲೋನಿನ ಪತನ
1 ಬಾಬಿಲೋನಿನ ಪುತ್ರಿಯಾದ ಕನ್ನಿಕೆಯೇ,
ಕೆಳಕ್ಕೆ ಇಳಿದುಬಂದು, ಧೂಳಿನಲ್ಲಿ ಕುಳಿತುಕೋ!
ಕಸ್ದೀಯರ ಪುತ್ರಿಯೇ,
ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ.
ಏಕೆಂದರೆ ಇನ್ನು ಮೇಲೆ ನಿನ್ನನ್ನು ಕೋಮಲೆ
ಮತ್ತು ನಾಜೂಕಾದವಳು ಎಂದು ಕರೆಯುವುದಿಲ್ಲ.
2 ಬೀಸುವ ಕಲ್ಲನ್ನು ಹಿಡಿದು, ಹಿಟ್ಟನ್ನು ಬೀಸು.
ಮುಸುಕನ್ನು ತೆಗೆದುಹಾಕಿ,
ನಿನ್ನ ಕಾಲನ್ನು ಬರಿದುಮಾಡಿ, ತೊಡೆಯನ್ನು ಮುಚ್ಚದೆ,
ನದಿಗಳನ್ನು ಹಾದುಹೋಗು.
3 ನಿನ್ನ ಬೆತ್ತಲೆತನವು ಮರೆಮಾಡದೇ ಇದ್ದುದರಿಂದ
ನೀನು ನಾಚಿಕೆಗೆ ಈಡಾಗುವೆ.
ನಾನು ಯಾರನ್ನೂ ಕರುಣಿಸದೆ ಮುಯ್ಯಿತೀರಿಸುವೆನು.
 
4 ನಮ್ಮ ವಿಮೋಚಕರಿಗೆ ಸೇನಾಧೀಶ್ವರರಾದ ಯೆಹೋವ ದೇವರು ಎಂಬುದೇ ಅವರ ಹೆಸರು.
ಅವರೇ ಇಸ್ರಾಯೇಲಿನ ಪರಿಶುದ್ಧರು.
 
5 ಕಸ್ದೀಯರ ಪುತ್ರಿಯೇ,
“ಮೌನವಾಗಿ ಕುಳಿತುಕೋ, ಕತ್ತಲೆಯೊಳಗೆ ಹೋಗು.
ಏಕೆಂದರೆ ಇನ್ನು ಮೇಲೆ
ನಿನ್ನನ್ನು ರಾಜ್ಯಗಳ ರಾಣಿ ಎಂದು ಕರೆಯುವುದಿಲ್ಲ.
6 ನಾನು ನಿನ್ನ ಜನರ ಮೇಲೆ ರೋಷಗೊಂಡು,
ನನ್ನ ಸೊತ್ತನ್ನು ಅಪವಿತ್ರ ಮಾಡಿ,
ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಬಿಟ್ಟೆನು.
ನೀನು ಅವರಿಗೆ ಕರುಣೆಯನ್ನು ತೋರಿಸದೆ,
ವೃದ್ಧರ ಮೇಲೆಯೂ,
ಬಹು ಭಾರವಾದ ನೊಗವನ್ನು ಹೊರಿಸಿದೆ.
7 ‘ನಾನು ಶಾಶ್ವತವಾದ ರಾಣಿ’
ಎಂದು ನೀನು ಅಂದುಕೊಂಡದ್ದರಿಂದ
ಈ ಸಂಗತಿಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೊಳ್ಳಲಿಲ್ಲ.
ಅವರ ಅಂತ್ಯವನ್ನೂ ನೆನಸಿಕೊಳ್ಳಲಿಲ್ಲ.
 
8 “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ.
‘ನಾನು ವಿಧವೆಯಾಗಿ ಕೂತುಕೊಳ್ಳುವುದಿಲ್ಲ.
ಪುತ್ರ ಶೋಕವನ್ನು ಅನುಭವಿಸುವುದಿಲ್ಲ,’ ಎನ್ನುವವಳೇ,
ಭೋಗಾಸಕ್ತಳೇ, ನೆಮ್ಮದಿಯಾಗಿ ನೆಲೆಗೊಂಡಿರುವವಳೇ,
ಈಗ ಇದನ್ನು ಕೇಳು.
9 ಒಂದೇ ದಿನದೊಳಗೆ, ಒಂದು ಕ್ಷಣದಲ್ಲೇ,
ಪುತ್ರ ಶೋಕ ಮತ್ತು ವಿಧವೆಯ ಸ್ಥಿತಿಯು
ಇವೆರಡೂ ನಿನಗೆ ಬರುವುದು.
ನಿನ್ನ ಮಂತ್ರಗಳು ಬಹಳವಾಗಿರುವುದರಿಂದಲೂ,
ನಿನ್ನ ಮಾಟಗಳು ಹೆಚ್ಚಾಗಿರುವುದರಿಂದಲೂ,
ಅವು ಸಂಪೂರ್ಣವಾಗಿ ನಿನ್ನ ಮೇಲೆ ಬರುವುವು.
10 ಏಕೆಂದರೆ ನೀನು ನಿನ್ನ ಕೆಟ್ಟತನದಲ್ಲಿ ನಂಬಿಕೆ ಇಟ್ಟು,
‘ನನ್ನನ್ನು ಯಾರೂ ನೋಡುವುದಿಲ್ಲ’ ಎಂದು ಹೇಳಿದೆ.
ನಿನ್ನ ಜ್ಞಾನ, ನಿನ್ನ ತಿಳುವಳಿಕೆ ನಿನ್ನನ್ನು ದಾರಿ ತಪ್ಪಿಸಿದ್ದರಿಂದ,
ನಿನ್ನ ಹೃದಯದಲ್ಲಿ: ‘ಈಗ ಇರುವವಳು ನಾನೇ.
ನನ್ನ ಹೊರತು ಇನ್ನು ಯಾರೂ ಇಲ್ಲ,’ ಎಂದುಕೊಂಡೆ.
11 ಆದ್ದರಿಂದ ನಿನ್ನ ಮಂತ್ರಕ್ಕೂ ಮೀರಿದ
ಕೇಡು ನಿನ್ನ ಮೇಲೆ ಬರುವುದು.
ನೀನು ಪರಿಹರಿಸಲಾಗದ ವಿಪತ್ತು
ನಿನ್ನ ಮೇಲೆ ಬೀಳುವುದು.
ನಿನಗೆ ತಿಳಿಯದ ನಾಶನವು
ಫಕ್ಕನೆ ನಿನ್ನ ಮೇಲೆ ಬರುವುದು.”
 
12 ನಿನ್ನ ಮಾಟಗಳ ಸಂಗಡ ನಿಂತುಕೋ.
ನಿನ್ನ ಬಾಲ್ಯಾರಭ್ಯ ಬೇಸತ್ತು, ಅಭ್ಯಾಸಿಸಿರುವ ನಿನ್ನ ಮಂತ್ರ ತಂತ್ರಗಳನ್ನೂ,
ನಿನ್ನ ಮಾಟಗಳನ್ನೂ ಲೆಕ್ಕವಿಲ್ಲದೆ ಪ್ರಯೋಗಿಸು.
ಇದರಿಂದ ಒಂದು ವೇಳೆ ನಿನಗೆ ಲಾಭವಾದೀತು.
ಒಂದು ವೇಳೆ ಭಯ ಉಂಟಾದೀತು.
13 ನೀನು ನಿನ್ನ ಬಹಳವಾದ ಆಲೋಚನೆಗಳಿಂದ ಆಯಾಸಗೊಂಡಿದ್ದೀ.
ಖಗೋಳಜ್ಞರು, ಜೋಯಿಸರು, ಪಂಚಾಂಗದವರು,
ಇವರೆಲ್ಲರೂ ನಿಂತುಕೊಂಡು ನಿನಗೆ ಬರುವ
ವಿಪತ್ತುಗಳಿಂದ ನಿನ್ನನ್ನು ರಕ್ಷಿಸಲಿ.
14 ಇಗೋ, ಅವರೆಲ್ಲಾ ಕೂಳೆಯಂತಿರುವರು,
ಬೆಂಕಿಯು ಅವರನ್ನು ಸುಟ್ಟುಬಿಡುವುದು.
ಜ್ವಾಲೆಯ ರಭಸದಿಂದ ತಮ್ಮನ್ನು
ರಕ್ಷಿಸಿಕೊಳ್ಳಲಾರರು ಇಲ್ಲವೆ
ಕಾಯಿಸಿಕೊಳ್ಳುವುದಕ್ಕೆ ಕೆಂಡವಿರುವುದಿಲ್ಲ.
ಹತ್ತಿರ ಕೂತುಕೊಳ್ಳಲು ಬೆಂಕಿಯೂ ಇಲ್ಲ.
15 ನೀನು ಪ್ರಯಾಸಪಟ್ಟವುಗಳೆಲ್ಲಾ ನಿನಗೆ ಹೀಗಾಗುವುವು.
ನಿನ್ನ ಬಾಲ್ಯ ಪ್ರಾಯದಿಂದ ನಿನ್ನ ವರ್ತಕರು ಚದರಿ,
ತಮ್ಮ ತಮ್ಮ ಪ್ರಾಂತಕ್ಕೆ ಹೋಗಿ ಬಿಡುವರು.
ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.

<- ಯೆಶಾಯ 46ಯೆಶಾಯ 48 ->