Link to home pageLanguagesLink to all Bible versions on this site
38
ಹಿಜ್ಕೀಯನ ಅಸ್ವಸ್ಥತೆ
1 ಆ ದಿವಸಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನಾದ ಪ್ರವಾದಿ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “ನೀನು ನಿನ್ನ ಮನೆಯನ್ನು ವ್ಯವಸ್ಥೆ ಮಾಡಿಕೋ, ಏಕೆಂದರೆ ನೀನು ಬದುಕದೆ ಸಾಯುವೆ, ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಹೇಳಿದನು.

2 ಆಗ ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ ಯೆಹೋವ ದೇವರನ್ನು ಪ್ರಾರ್ಥಿಸಿದನು. 3 “ಯೆಹೋವ ದೇವರೇ, ನಾನು ಸತ್ಯದಿಂದಲೂ, ಪೂರ್ಣಹೃದಯದಿಂದಲೂ ನಿಮ್ಮ ಮುಂದೆ ನಡೆದು, ನಿಮ್ಮ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ,” ಎಂದು ಬೇಡಿಕೊಂಡನು. ಹೀಗೆ ಹಿಜ್ಕೀಯನು ವ್ಯಥೆಪಟ್ಟು ಅತ್ತನು.

4 ಆಗ ಯೆಹೋವ ದೇವರ ವಾಕ್ಯವು ಯೆಶಾಯನಿಗೆ ಬಂದಿತು, 5 “ನೀನು ಹೋಗಿ ಹಿಜ್ಕೀಯನಿಗೆ ಹೀಗೆ ಹೇಳು, ‘ನಿನ್ನ ತಂದೆಯಾದ ದಾವೀದನ ದೇವರಾದ ಯೆಹೋವ ದೇವರು ಹೇಳಿದ್ದೇನೆಂದರೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ಕಂಡಿದ್ದೇನೆ. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಹೆಚ್ಚಾಗಿ ಕೂಡಿಸುತ್ತೇನೆ. 6 ನಿನ್ನನ್ನೂ ಈ ಪಟ್ಟಣವನ್ನೂ ಅಸ್ಸೀರಿಯದ ಅರಸನ ಕೈಯಿಂದ ಬಿಡಿಸುವೆನು. ಈ ಪಟ್ಟಣವನ್ನು ಕಾಪಾಡುವೆನು.

7 “ ‘ಯೆಹೋವ ದೇವರು ತಾವು ನುಡಿದದ್ದನ್ನು ನೆರವೇರಿಸುವರು ಎಂಬುದಕ್ಕೆ ಈ ಗುರುತನ್ನು ಕಾಣುವೆ. 8 ಇಗೋ, ಸೂರ್ಯನ ಇಳಿತವನ್ನು ಆಹಾಜನ ಸೋಪಾನ ಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬರುವುದು,’ ” ಎಂದನು. ಅದರಂತೆಯೇ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬಂದಿತು.

 
9 ಯೆಹೂದದ ಅರಸನಾದ ಹಿಜ್ಕೀಯನು ರೋಗದಿಂದ ಗುಣಹೊಂದಿದ ನಂತರ ಬರೆದದ್ದು:
10 “ನನ್ನ ಜೀವನದ ಮಧ್ಯಪ್ರಾಯದಲ್ಲೇ
ನಾನು ಪಾತಾಳದ ದ್ವಾರದೊಳಗೆ ಹೋಗಬೇಕು.
ನನ್ನ ಆಯುಷ್ಯದಲ್ಲಿ ಕಳೆದು ಉಳಿದ ವರುಷಗಳು ನನಗೆ ತಪ್ಪಿಹೋಯಿತು,”
ಎಂದು ನಾನು ಅಂದುಕೊಂಡೆನು.
11 ನಾನು ಹೀಗೆ ಯೋಚಿಸಿದೆ, “ಯೆಹೋವ ದೇವರನ್ನು ಜೀವಿತರ
ದೇಶದಲ್ಲಿ ಯೆಹೋವ ದೇವರನ್ನು ಕಾಣೆನೆಂದುಕೊಂಡೆನು;
ಭೂಲೋಕ ನಿವಾಸಿಗಳಲ್ಲಿ
ಒಬ್ಬ ಮನುಷ್ಯನನ್ನೂ ಕಾಣೆನೆಂದುಕೊಂಡೆನು.
12 ನನ್ನ ಆಶ್ರಯವು ಕುರುಬನ ಗುಡಾರದಂತೆ
ಕಿತ್ತು ನನ್ನ ಕಡೆಯಿಂದ ಒಯ್ಯಲಾಗಿದೆ.
ದೇವರು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದ
ನೆಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ;
ಹಗಲುರಾತ್ರಿ ದೇವರೇ, ನೀವು ನನ್ನನ್ನು ಅಂತ್ಯಗೊಳಿಸುತ್ತೀರಿ.
13 ಹೌದು, ದೇವರು ಸಿಂಹದಂತೆ ನನ್ನ ಎಲುಬುಗಳನ್ನೆಲ್ಲಾ ಮುರಿಯುತ್ತಿದ್ದರೂ,
ಬೆಳಗಿನತನಕ ತಡೆದುಕೊಂಡೇ ಇದ್ದೆನು.
ನೀವು ನನ್ನನ್ನು ಅಂತ್ಯಗೊಳಿಸುತ್ತೀರಲ್ಲಾ ಎಂದು ಹಗಲುರಾತ್ರಿ ಪ್ರಲಾಪಿಸಿದೆನು.
14 ನಾನು ಬಾನಕ್ಕಿಯಂತೆಯೂ,
ಬಕದಂತೆಯೂ ಕೀಚುಗುಟ್ಟಿದೆನು. ಪಾರಿವಾಳದಂತೆ ಗುಬ್ಬಳಿಸುತ್ತಿದ್ದೆನು.
ನನ್ನ ಕಣ್ಣುಗಳು ಮೇಲಕ್ಕೆ ನೋಡುವುದರಿಂದ ಕ್ಷೀಣವಾದವು.
ಕರ್ತದೇವರೇ, ನಾನು ಬಾಧೆಪಡುತ್ತಿದ್ದೇನೆ, ನೀವು ನನಗೆ ಆಶ್ರಯರಾಗಿರಿ.”
 
15 ಆದರೆ, ನಾನು ಏನು ಹೇಳಲಿ,
ಆತನು ನನಗೆ ಮಾತುಕೊಟ್ಟು, ತಾನೇ ಅದನ್ನು ನೆರವೇರಿಸಿದ್ದಾನೆ.
ನನ್ನ ಆತ್ಮಕ್ಕೆ ಸಂಭವಿಸಿದ ದುಃಖದಲ್ಲಿ
ನನ್ನ ವರುಷಗಳಲ್ಲೆಲ್ಲಾ ವಿನಯದಿಂದ ನಡೆಯುವೆನು.
16 ಕರ್ತದೇವರೇ, ಇಂಥಾ ಸಂಬಂಧಗಳಿಂದ ಮನುಷ್ಯರು ಬದುಕುತ್ತಾರೆ.
ಇವೆಲ್ಲವುಗಳಿಂದಲೇ ನನ್ನ ಆತ್ಮದಲ್ಲಿ ಜೀವವುಂಟು.
ಹೀಗೆ ನನ್ನನ್ನು ನೀವು ಸ್ವಸ್ಥಮಾಡಿ
ಬದುಕುವಂತೆ ಮಾಡಿದಿರಿ.
17 ಆ ಬಹು ವ್ಯಥೆಯು ನನ್ನ
ಸಮಾಧಾನಕ್ಕಾಗಿಯೇ ಆಯಿತು.
ಆದರೆ ನನ್ನ ಆತ್ಮವನ್ನು ನಾಶದಿಂದ
ಬಿಡುಗಡೆ ಮಾಡಿದ್ದು ನಿಮ್ಮ ಪ್ರೀತಿಯೇ.
ನನ್ನ ಪಾಪಗಳನ್ನೆಲ್ಲಾ ನಿನ್ನ
ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.
18 ಸಮಾಧಿಯು ನಿನ್ನನ್ನು ಹೊಗಳುವುದಿಲ್ಲ.
ಮರಣವು ನಿನ್ನನ್ನು ಕೊಂಡಾಡುವುದಿಲ್ಲ.
ಕುಣಿಯೊಳಕ್ಕೆ ಹೋಗುವವರು
ನಿಮ್ಮ ಸತ್ಯತೆಯಲ್ಲಿ ಭರವಸವಿಡಲಾರರು.
19 ಜೀವಂತನು; ಜೀವಂತನೇ ನಿನ್ನನ್ನು ಸ್ತುತಿಸುವೆನು.
ಹೌದು, ಜೀವಂತನಾದ
ನಾನೇ ಈ ಹೊತ್ತು ನಿಮ್ಮನ್ನು ಹೊಗಳುವೆನು.
ತಂದೆಯು ಮಕ್ಕಳಿಗೆ ನಿಮ್ಮ ನಿಷ್ಠೆಯನ್ನು ಬೋಧಿಸುವನು.
 
20 ಯೆಹೋವ ದೇವರು ನನ್ನನ್ನು ರಕ್ಷಿಸುವರು.
ಆದ್ದರಿಂದ ಯೆಹೋವ ದೇವರ ಆಲಯದಲ್ಲಿ
ನಮ್ಮ ಜೀವಮಾನದ ದಿವಸಗಳಲ್ಲೆಲ್ಲಾ
ತಂತಿವಾದ್ಯಗಳಿಂದ ನಮ್ಮ ಹಾಡುಗಳನ್ನು ನಾವು ಹಾಡುವೆವು.

21 “ಅಂಜೂರದ ಹಣ್ಣುಗಳ ಉಂಡೆಯನ್ನು ತರಿಸಿ, ಹುಣ್ಣಿನ ಮೇಲೆ ಇಟ್ಟರೆ, ಅವನು ಗುಣಹೊಂದುವನು,” ಎಂದು ಯೆಶಾಯನು ಹೇಳಿದನು.

22 ಇದಲ್ಲದೆ ಹಿಜ್ಕೀಯನು, “ನಾನು ಯೆಹೋವ ದೇವರ ಆಲಯಕ್ಕೆ ಹೋಗುವೆನೆಂಬುದಕ್ಕೆ ನನಗೆ ಗುರುತೇನು?” ಎಂದು ಕೇಳಿದ್ದನು.

<- ಯೆಶಾಯ 37ಯೆಶಾಯ 39 ->