ಈಜಿಪ್ಟಿನ ಗೋತ್ರಗಳ ಪ್ರಮುಖರು ಅದನ್ನು ಭ್ರಮೆಗೊಳಿಸಿದ್ದಾರೆ.
ಅದನ್ನು ತಪ್ಪು ದಾರಿಗೆಳೆದಿದ್ದಾರೆ.
14 ಯೆಹೋವ ದೇವರು ಅವರ ಮಧ್ಯದಲ್ಲಿ
ತತ್ತರಿಸುವ ಆತ್ಮವನ್ನು ಸುರಿಸಿದ್ದಾರೆ.
ಅಮಲೇರಿದವನು ಕಕ್ಕುತ್ತಾ ಓಲಾಡುವ ಪ್ರಕಾರ
ಈಜಿಪ್ಟ್ ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾರೆ.
15 ಈಜಿಪ್ಟಿನಲ್ಲಿ ತಲೆಯಾಗಲಿ, ಬಾಲವಾಗಲಿ, ಕೊಂಬೆಯಾಗಲಿ,
ಒಂದು ಕಡ್ಡಿಯಾಗಲಿ ಸಾಧಿಸಲು ಸಾಧ್ಯವಾಗದ ಯಾವ ಕೆಲಸವೂ ಇರುವುದಿಲ್ಲ.
16 ಆ ದಿನದಲ್ಲಿ ಈಜಿಪ್ಟಿನವರು ಹೆಂಗಸರ ಹಾಗೆ ಇರುವರು. ಸೇನಾಧೀಶ್ವರ ಯೆಹೋವ ದೇವರು ಅದರ ಮೇಲೆ ಎತ್ತಿದ ಕೈಯನ್ನು ಬೀಸುತ್ತಿರುವುದರಿಂದ ಅವರು ಹೆದರಿ ಭಯಪಡುವರು. 17 ಈಜಿಪ್ಟ್ ಬೆಚ್ಚಿ ಬೀಳುವುದಕ್ಕೆ ಯೆಹೂದ ದೇಶವು ಕಾರಣವಾಗುವುದು, ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನು ಸೇನಾಧೀಶ್ವರ ಯೆಹೋವ ದೇವರು ಈಜಿಪ್ಟಿಗೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಆಲೋಚನೆಯನ್ನು ತಿಳಿದು ಬೆರಗಾಗುವನು.
18 ಆ ದಿವಸದಲ್ಲಿ ಈಜಿಪ್ಟಿನ ಐದು ಪಟ್ಟಣಗಳು ಸೇನಾಧೀಶ್ವರ ಯೆಹೋವ ದೇವರಿಗೆ ಆಣೆಯಿಟ್ಟುಕೊಳ್ಳುವವು. ಕಾನಾನಿನ ಭಾಷೆಯನ್ನಾಡುವವರಿಂದ ತುಂಬಿದ ಐದು ಪಟ್ಟಣಗಳು ಈಜಿಪ್ಟ್ ದೇಶದಲ್ಲಿರುವುವು. ಅವುಗಳಲ್ಲಿ ಒಂದರ ಹೆಸರು “ನಾಶಪುರ†ನಾಶಪುರ ಕೆಲವು ಹಸ್ತಪ್ರತಿಗಳಲ್ಲಿ ರವಿಪುರ.”
19 ಆ ದಿನದಲ್ಲಿ ಈಜಿಪ್ಟ್ ದೇಶದ ಮಧ್ಯದಲ್ಲಿ ಯೆಹೋವ ದೇವರಿಗೆ ಬಲಿಪೀಠವು ದೇಶದ ಎಲ್ಲೆಯಲ್ಲಿ ಯೆಹೋವ ದೇವರಿಗೆ ಒಂದು ಸ್ತಂಭವು ಇರುವುದು. 20 ಅದು ಸೇನಾಧೀಶ್ವರ ಯೆಹೋವ ದೇವರಿಗೆ ಈಜಿಪ್ಟ್ ದೇಶದಲ್ಲಿ ಗುರುತಾಗಿ ಸಾಕ್ಷಿಯಾಗಿರುವುದು. ಏಕೆಂದರೆ ಹಿಂಸಕರ ದೆಸೆಯಿಂದ ಯೆಹೋವ ದೇವರನ್ನು ಕೂಗಿಕೊಳ್ಳಲು, ದೇವರು ಅವರಿಗೆ ಒಬ್ಬ ಶೂರನಾದ ರಕ್ಷಕನನ್ನು ಕಳುಹಿಸಿ, ಅವರನ್ನು ಬಿಡುಗಡೆ ಮಾಡುವರು. 21 ಯೆಹೋವ ದೇವರು ತಮ್ಮನ್ನು ಈಜಿಪ್ಟಿನವರಿಗೆ ತಿಳಿಯಪಡಿಸಲು, ಅವರು ಆ ದಿನದಲ್ಲಿ ಯೆಹೋವ ದೇವರನ್ನು ತಿಳಿದುಕೊಳ್ಳುವರು ಮತ್ತು ಬಲಿಕಾಣಿಕೆಗಳಿಂದ ಸೇವೆಮಾಡುವರು. ಹೌದು, ಅವರು ಯೆಹೋವ ದೇವರಿಗೆ ಪ್ರಮಾಣ ಮಾಡಿಕೊಂಡು ನೆರವೇರಿಸುವರು. 22 ಇದಲ್ಲದೆ ಯೆಹೋವ ದೇವರು ಈಜಿಪ್ಟಿನವರನ್ನು ಹೊಡೆಯುವರು; ಗಾಯಮಾಡಿ ಸ್ವಸ್ಥ ಮಾಡುವರು. ಅವರು ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು, ದೇವರು ಅವರನ್ನು ಆಲೈಸಿ ಸ್ವಸ್ಥ ಮಾಡುವರು.
23 ಆ ದಿವಸದಲ್ಲಿ ಈಜಿಪ್ಟಿನಿಂದ ಅಸ್ಸೀರಿಯಕ್ಕೆ ಹೋಗುವ ಒಂದು ರಾಜ ಮಾರ್ಗವಿರುವುದು. ಅಸ್ಸೀರಿಯದವರು ಈಜಿಪ್ಟಿಗೂ, ಈಜಿಪ್ಟಿನವರು ಅಸ್ಸೀರಿಯಕ್ಕೂ ಹೋಗಿ ಬರುವರು. ಈಜಿಪ್ಟಿನವರು, ಅಸ್ಸೀರಿಯರೊಂದಿಗೆ ಯೆಹೋವ ದೇವರನ್ನು ಆರಾಧಿಸುವರು. 24 ಆ ದಿನದಲ್ಲಿ ಇಸ್ರಾಯೇಲು ಈಜಿಪ್ಟಿನವರ ಮತ್ತು ಅಸ್ಸೀರಿಯದವರ ಸಂಗಡ ಮೂರನೆಯದಾಗಿ ದೇಶದ ಮಧ್ಯದಲ್ಲಿ ಆಶೀರ್ವಾದವಾಗಿರುವುದು. 25 ನನ್ನ ಪ್ರಜೆಯಾದ ಈಜಿಪ್ಟಿಗೂ, ನನ್ನ ಕೈಕೆಲಸವಾದ ಅಸ್ಸೀರಿಯಕ್ಕೂ ಮತ್ತು ನನ್ನ ಸೊತ್ತಾದ ಇಸ್ರಾಯೇಲಿಗೂ, “ನಿಮಗೆ ಆಶೀರ್ವಾದ,” ಎಂದು ಸೇನಾಧೀಶ್ವರ ಯೆಹೋವ ದೇವರು ಅವುಗಳನ್ನು ಆಶೀರ್ವಾದ ಮಾಡುವರು.