6 ಇವುಗಳು ಹೀಗೆ ಸಿದ್ಧವಾದ ಬಳಿಕ ಯಾಜಕರು ಯಾವಾಗಲೂ ಹೊರಗಿನ ಗುಡಾರವನ್ನು ಪ್ರವೇಶಿಸಿ ದೈವಿಕ ಆರಾಧನೆಯನ್ನು ನಡೆಸುತ್ತಿದ್ದರು. 7 ಆದರೆ ಎರಡನೆಯ ಭಾಗದೊಳಗೆ ಮಹಾಯಾಜಕನೊಬ್ಬನೇ ವರ್ಷಕ್ಕೆ ಒಂದೇ ಸಾರಿ ಪ್ರವೇಶಿಸುತ್ತಿದ್ದನು. ಅವನು ರಕ್ತವನ್ನು ತೆಗೆದುಕೊಳ್ಳದೆ ಎಂದಿಗೂ ಹೋಗುತ್ತಿರಲಿಲ್ಲ. ಬಲಿಯ ರಕ್ತವನ್ನು ತನಗೋಸ್ಕರವೂ ಜನರು ತಿಳಿಯದೆ ಮಾಡಿದ ಪಾಪಗಳಿಗೋಸ್ಕರವೂ ಸಮರ್ಪಿಸುತ್ತಿದ್ದನು. 8 ಹೊರಗಿನ ಗುಡಾರವು ಇನ್ನೂ ಇರುವ ತನಕ ಅತಿ ಪವಿತ್ರ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಲಿಲ್ಲವೆಂಬುದನ್ನು ಪವಿತ್ರಾತ್ಮ ದೇವರು ವ್ಯಕ್ತಪಡಿಸುತ್ತಾರೆ 9 ಈ ಗುಡಾರವು ಈ ಕಾಲವನ್ನು ಸೂಚಿಸುವ ಒಂದು ಮಾದರಿಯಾಗಿದೆ. ಆಗ ಆರಾಧಿಸುವವರ ಮನಸ್ಸಾಕ್ಷಿಯನ್ನು ಪರಿಪೂರ್ಣ ಮಾಡಲಾರದ ಕಾಣಿಕೆಗಳೂ ಯಜ್ಞಗಳೂ ಅರ್ಪಿಸಲಾಗುತ್ತಿದ್ದವು. 10 ಅವು ಅನ್ನಪಾನಾದಿಗಳಲ್ಲಿಯೂ ವಿವಿಧ ಸ್ನಾನಗಳಲ್ಲಿಯೂ ಮುಂತಾದ ಬಾಹ್ಯಾಚಾರದ ಕ್ರಮಗಳಾಗಿದ್ದವು. ಅವು ಹೊಸ ಕ್ರಮಕಾಲದವರೆಗೆ ಮಾತ್ರ ನೇಮಕವಾಗಿದ್ದವು.
15 ಈ ಕಾರಣದಿಂದ ಕರೆಯಲಾದವರು ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಸ್ವೀಕರಿಸುವಂತೆ ಕ್ರಿಸ್ತ ಯೇಸು ಹೊಸ ಒಡಂಬಡಿಕೆಗೆ ಮಧ್ಯಸ್ಥರಾಗಿದ್ದಾರೆ. ಮೊದಲಿನ ಒಡಂಬಡಿಕೆಯ ಕೆಳಗೆ ಮಾಡಿದ ಪಾಪಗಳಿಂದ ಅವರನ್ನು ವಿಮೋಚಿಸಲು ಯೇಸು ಆಗಲೇ ಈಡಾಗಿ ತಮ್ಮ ಪ್ರಾಣಕೊಟ್ಟಿದ್ದಾರೆ.
16 ಮರಣ ಶಾಸನವು ಎಲ್ಲಿದೆಯೋ ಅಲ್ಲಿ ಅದನ್ನು ಮಾಡಿಕೊಂಡಾತನ ಮರಣ ಅವಶ್ಯ ಎಂಬುದನ್ನು ರುಜುಪಡಿಸಬೇಕು. 17 ಮರಣ ಶಾಸನವು ಬರೆದವನು ಜೀವದಿಂದಿರುವವರೆಗೂ ಅದು ಎಂದಿಗೂ ಜಾರಿಗೆ ಬರುವುದಿಲ್ಲ. 18 ಆದ್ದರಿಂದ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಪ್ರತಿಷ್ಠಾಪನೆ ಆಗಲಿಲ್ಲ. 19 ಮೋಶೆಯು ಪ್ರತಿಯೊಂದು ಆಜ್ಞೆಯನ್ನು ನಿಯಮದ ಪ್ರಕಾರ ಜನರೆಲ್ಲರಿಗೆ ಹೇಳಿದ ಮೇಲೆ ಅವನು ನೀರು, ಕೆಂಪು ಉಣ್ಣೆ, ಹಿಸ್ಸೋಪು ಇವುಗಳೊಂದಿಗೆ ಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಸುರುಳಿಗಳ ಮೇಲೆಯೂ ಎಲ್ಲಾ ಜನರ ಮೇಲೆಯೂ ಚಿಮುಕಿಸಿದನು. 20 ಹಾಗೆ ಚಿಮುಕಿಸುವಾಗ ಮೋಶೆಯು, “ಇದು ದೇವರು ನಿಮಗೆ ಆಜ್ಞಾಪಿಸಿದ ಒಡಂಬಡಿಕೆಯ ರಕ್ತ,”[b] ಎಂದು ಹೇಳಿದನು. 21 ಅದೇ ರೀತಿಯಾಗಿ ಮೋಶೆಯು ಗುಡಾರದ ಮೇಲೆಯೂ ಸೇವೆಯ ಎಲ್ಲಾ ಉಪ ಪಾತ್ರೆಗಳ ಮೇಲೆಯೂ ರಕ್ತವನ್ನು ಚಿಮುಕಿಸಿದನು. 22 ಹೀಗೆ ದೇವರ ನಿಯಮದ ಪ್ರಕಾರ ಎಲ್ಲವೂ ರಕ್ತದಿಂದಲೇ ಶುದ್ಧಿಯಾಗಬೇಕು. ರಕ್ತಧಾರೆ ಇಲ್ಲದೆ ಪಾಪಪರಿಹಾರವು ಉಂಟಾಗುವುದಿಲ್ಲ.
23 ಆದ್ದರಿಂದ ಪರಲೋಕದಲ್ಲಿರುವ ವಸ್ತುಗಳ ಛಾಯೆಯಂತೆ ಇರುವ ವಸ್ತುಗಳನ್ನು ಈ ಯಜ್ಞಗಳಿಂದ ಶುದ್ಧಿಮಾಡುವುದು ಅವಶ್ಯವಾಗಿದೆ. ಹಾಗಾದರೆ ಪರಲೋಕದ ನಿಜ ವಸ್ತುಗಳಿಗೆ ಇವುಗಳಿಗಿಂತ ಉತ್ತಮವಾದ ಯಜ್ಞಗಳು ಅವಶ್ಯಕವಾಗಿವೆ. 24 ಏಕೆಂದರೆ ಕ್ರಿಸ್ತ ಯೇಸು ನಿಜ ದೇವಾಲಯದ ಪ್ರತಿರೂಪದಂತಿರುವ, ಕೈಯಿಂದ ಕಟ್ಟಿದ ಪವಿತ್ರ ಸ್ಥಳವನ್ನು ಪ್ರವೇಶಿಸದೆ, ದೇವರ ಸನ್ನಿಧಿಯಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವಂತೆ ಪರಲೋಕದಲ್ಲಿಯೇ ಪ್ರವೇಶಿಸಿದರು. 25 ಇದಲ್ಲದೆ ಮಹಾಯಾಜಕನು ಪ್ರತಿವರ್ಷವೂ ತನ್ನ ಸ್ವಂತದ್ದಾಗಿರದ ರಕ್ತವನ್ನು ತೆಗದುಕೊಂಡು ಅತಿ ಪವಿತ್ರ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ ಯೇಸು ತಮ್ಮನ್ನು ಅನೇಕ ಸಾರಿ ಸಮರ್ಪಿಸುವುದಕ್ಕೆ ಪ್ರವೇಶಿಸಲಿಲ್ಲ. 26 ಹಾಗಿದ್ದರೆ, ಕ್ರಿಸ್ತ ಯೇಸುವು ಲೋಕದ ಅಸ್ತಿವಾರದಿಂದ ಅನೇಕ ಸಾರಿ ಬಾಧೆಪಡಬೇಕಾಗಿತ್ತು. ಆದರೆ ಈಗ ಅವರು ಒಂದೇ ಸಾರಿ ಲೋಕಾಂತ್ಯದಲ್ಲಿ ಪಾಪ ನಿವಾರಣೆ ಮಾಡುವುದಕ್ಕೆ ತಮ್ಮನ್ನು ತಾವೇ ಯಜ್ಞ ಮಾಡಿಕೊಳ್ಳುವವರಾಗಿ ಪ್ರತ್ಯಕ್ಷರಾದರು. 27 ಒಂದೇ ಸಾರಿ ಸಾಯುವುದೂ ತರುವಾಯ ನ್ಯಾಯತೀರ್ಪು ಪಡೆಯುವುದೂ ಮನುಷ್ಯರಿಗಾಗಿ ನೇಮಕವಾಗಿದೆ. 28 ಅದರಂತೆಯೇ ಕ್ರಿಸ್ತ ಯೇಸು ಬಹುಜನರ ಪಾಪಗಳನ್ನು ಹೊತ್ತುಕೊಳ್ಳುವುದಕ್ಕೋಸ್ಕರ ಒಂದೇ ಸಾರಿ ಸಮರ್ಪಿತರಾದರು. ತಮಗಾಗಿ ಕಾದಿರುವವರಿಗೆ ರಕ್ಷಣೆ ಕೊಡಲು ಕ್ರಿಸ್ತ ಯೇಸು ಎರಡನೆಯ ಸಲ ಕಾಣಿಸಿಕೊಳ್ಳುವರು. ಆಗ ಪಾಪ ಹೊತ್ತುಕೊಳ್ಳುವುದಕ್ಕಾಗಿ ಬರುವುದಿಲ್ಲ.
<- ಇಬ್ರಿಯರಿಗೆ 8ಇಬ್ರಿಯರಿಗೆ 10 ->