Link to home pageLanguagesLink to all Bible versions on this site
47
1 ಯೋಸೇಫನು ಹೋಗಿ ಫರೋಹನಿಗೆ, “ನನ್ನ ತಂದೆಯೂ, ನನ್ನ ಸಹೋದರರೂ ತಮ್ಮ ಕುರಿದನಗಳನ್ನೂ, ತಮಗಿದ್ದ ಎಲ್ಲವುಗಳನ್ನೂ ತೆಗೆದುಕೊಂಡು ಕಾನಾನ್ ದೇಶದಿಂದ ಬಂದಿದ್ದಾರೆ. ಅವರು ಗೋಷೆನ್ ಪ್ರಾಂತದಲ್ಲಿ ಇದ್ದಾರೆ,” ಎಂದನು. 2 ಅವನು ತನ್ನ ಸಹೋದರರಲ್ಲಿ ಐದು ಮಂದಿಯನ್ನು ಕರೆದುಕೊಂಡು ಬಂದು ಫರೋಹನ ಮುಂದೆ ನಿಲ್ಲಿಸಿದನು.

3 ಫರೋಹನು ಯೋಸೇಫನ ಸಹೋದರರಿಗೆ, “ನಿಮ್ಮ ಕೆಲಸವೇನು?” ಎಂದು ಕೇಳಿದನು.

ಅವರು ಫರೋಹನಿಗೆ, “ನಿನ್ನ ದಾಸರಾದ ನಾವೂ, ನಮ್ಮ ತಂದೆಯವರೂ ಕುರಿಕಾಯುವವರಾಗಿದ್ದೇವೆ. 4 ದೇಶದಲ್ಲಿ ಪ್ರವಾಸಮಾಡುವುದಕ್ಕಾಗಿ ಬಂದಿದ್ದೇವೆ. ಏಕೆಂದರೆ ಕಾನಾನ್ ದೇಶದಲ್ಲಿ ಕ್ಷಾಮವು ಕಠಿಣವಾಗಿರುವುದರಿಂದ, ನಿನ್ನ ದಾಸರ ಮಂದೆಗಳಿಗೆ ಹುಲ್ಲುಗಾವಲು ಇಲ್ಲ. ಹೀಗಿರುವುದರಿಂದ ನಿನ್ನ ದಾಸರು ಗೋಷೆನ್ ಪ್ರಾಂತದ ನಿವಾಸಿಗಳಾಗುವಂತೆ ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇವೆ,” ಎಂದರು.

5 ಅದಕ್ಕೆ ಫರೋಹನು ಯೋಸೇಫನಿಗೆ, “ನಿನ್ನ ತಂದೆಯೂ, ನಿನ್ನ ಸಹೋದರರೂ ನಿನ್ನ ಬಳಿಗೆ ಬಂದಿದ್ದಾರೆ. 6 ಈಜಿಪ್ಟ್ ದೇಶವು ನಿನ್ನ ಮುಂದೆ ಇದೆ. ದೇಶದ ಉತ್ತಮವಾದ ಕಡೆ ನಿನ್ನ ತಂದೆಯೂ, ಸಹೋದರರೂ ವಾಸಮಾಡುವಂತೆ ಮಾಡು. ಗೋಷೆನ್ ಪ್ರಾಂತದಲ್ಲಿ ಅವರು ವಾಸವಾಗಿರಲಿ. ಅವರಲ್ಲಿ ಯಾರಾದರೂ ಸಮರ್ಥರೆಂದು ನೀನು ತಿಳಿದರೆ, ಅವರನ್ನು ನಮಗಿರುವ ಪಶುಗಳ ಮೇಲೆ ವಿಚಾರಕರನ್ನಾಗಿ ಇರಿಸು,” ಎಂದನು.

7 ಯೋಸೇಫನು ತನ್ನ ತಂದೆ ಯಾಕೋಬನನ್ನು ಕರೆದುಕೊಂಡು ಬಂದು, ಫರೋಹನ ಮುಂದೆ ನಿಲ್ಲಿಸಿದನು. ಯಾಕೋಬನು ಫರೋಹನನ್ನು ಆಶೀರ್ವದಿಸಿದನು. 8 ಫರೋಹನು ಯಾಕೋಬನಿಗೆ, “ನಿನಗೆ ಎಷ್ಟು ವರ್ಷಗಳು?” ಎಂದು ಕೇಳಿದನು.

9 ಯಾಕೋಬನು ಫರೋಹನಿಗೆ, “ನಾನು ಲೋಕದಲ್ಲಿ ಸಂಚಾರಮಾಡಿದ್ದು ನೂರಮೂವತ್ತು ವರುಷಗಳೇ. ನನ್ನ ವರ್ಷಗಳು ಕಡಿಮೆಯಾದರೂ ಕಠಿಣವಾದವುಗಳು ಆಗಿವೆ. ಅವು ನನ್ನ ಪಿತೃಗಳ ಪ್ರಯಾಣದ ವರ್ಷಗಳಿಗೆ ಸಮವಾಗಿಲ್ಲ,” ಎಂದನು. 10 ಆಗ ಯಾಕೋಬನು ಫರೋಹನನ್ನು ಆಶೀರ್ವದಿಸಿ, ಅವನಿಂದ ಬೀಳ್ಕೊಂಡನು.

11 ಯೋಸೇಫನು ತನ್ನ ತಂದೆಗೂ, ತನ್ನ ಸಹೋದರರಿಗೂ ನಿವಾಸವನ್ನು ಕೊಟ್ಟು, ಫರೋಹನ ಅಪ್ಪಣೆಯ ಪ್ರಕಾರ, ಅವರಿಗೆ ಈಜಿಪ್ಟ್ ದೇಶದ ಉತ್ತಮವಾದ ರಮ್ಸೇಸ್ ಸೀಮೆಯ ಸ್ವತ್ತನ್ನು ಕೊಟ್ಟನು. 12 ಯೋಸೇಫನು ತನ್ನ ತಂದೆಯನ್ನೂ, ತನ್ನ ಸಹೋದರರನ್ನೂ, ತನ್ನ ತಂದೆಯ ಮನೆಯವರೆಲ್ಲರನ್ನೂ ಅವರ ಮಕ್ಕಳ ಲೆಕ್ಕದ ಪ್ರಕಾರ ಆಹಾರಕೊಟ್ಟು, ಅವರನ್ನು ಸಂರಕ್ಷಿಸಿದನು.

ಬರಗಾಲದಲ್ಲಿ ಯೋಸೇಫನ ಆಡಳಿತ
13 ಆದರೆ ಬರವು ಅತಿ ಘೋರವಾಗಿದ್ದದ್ದರಿಂದ ದೇಶದಲ್ಲೆಲ್ಲಾ ಆಹಾರ ಇರಲಿಲ್ಲ. ಈಜಿಪ್ಟ್ ದೇಶವೂ, ಕಾನಾನ್ ದೇಶವೂ ಕ್ಷಾಮದಿಂದ ಕ್ಷೀಣವಾದವು. 14 ಆಗ ಯೋಸೇಫನು ಈಜಿಪ್ಟ್ ದೇಶದಲ್ಲಿಯೂ, ಕಾನಾನ್ ದೇಶದಲ್ಲಿಯೂ ಜನರು ಕೊಂಡುಕೊಂಡ ಧಾನ್ಯಕ್ಕೆ ಬದಲಾಗಿ ಕೊಟ್ಟ ಹಣವನ್ನೆಲ್ಲಾ ಕೂಡಿಸಿ, ಅದನ್ನು ಫರೋಹನ ಮನೆಗೆ ತಂದನು. 15 ಈಜಿಪ್ಟ್ ದೇಶದಲ್ಲಿಯೂ, ಕಾನಾನ್ ದೇಶದಲ್ಲಿಯೂ ಹಣವು ಮುಗಿದಾಗ, ಈಜಿಪ್ಟಿನವರೆಲ್ಲರೂ ಯೋಸೇಫನ ಬಳಿಗೆ ಬಂದು, “ನಮಗೆ ಆಹಾರವನ್ನು ಕೊಡು, ನಾವು ನಿನ್ನ ಮುಂದೆ ಏಕೆ ಸಾಯಬೇಕು? ಏಕೆಂದರೆ ಹಣವೆಲ್ಲಾ ತೀರಿತು,” ಎಂದರು.

16 ಆಗ ಯೋಸೇಫನು, “ನಿಮ್ಮ ಪಶುಗಳನ್ನು ತೆಗೆದುಕೊಂಡು ಬನ್ನಿರಿ, ಹಣ ತೀರಿದ್ದೇಯಾದರೆ, ನಿಮ್ಮ ಪಶುಗಳಿಗೆ ಬದಲಾಗಿ ಧಾನ್ಯವನ್ನು ಕೊಡುತ್ತೇನೆ,” ಎಂದನು. 17 ಅವರು ತಮ್ಮ ಪಶುಗಳನ್ನೆಲ್ಲಾ ಯೋಸೇಫನ ಬಳಿಗೆ ತಂದರು. ಅವುಗಳ ಬದಲಾಗಿ ಅವನು ಆಹಾರ ಧಾನ್ಯ ಕೊಟ್ಟನು. ಅವರ ಕುದುರೆಗಳನ್ನೂ ಕುರಿಗಳನ್ನೂ ಆಡುಗಳನ್ನೂ ದನಗಳನ್ನೂ ಕತ್ತೆಗಳನ್ನೂ ಬದಲಾಗಿ ತೆಗೆದುಕೊಂಡನು. ಆ ವರ್ಷ ಅವರು ಆಹಾರಕ್ಕಾಗಿ ತಮ್ಮ ಎಲ್ಲಾ ಪಶುಪ್ರಾಣಿಗಳನ್ನು ಮಾರಿಕೊಂಡರು.

18 ಆ ವರ್ಷವಾದ ಮೇಲೆ ಮಾರನೆಯ ವರ್ಷದಲ್ಲಿ, ಅವರು ಅವನ ಬಳಿಗೆ ಬಂದು ಅವನಿಗೆ, “ಹಣವೂ ಪಶುಗಳ ಮಂದೆಗಳೂ ನಮ್ಮ ಒಡೆಯನ ವಶವಾಗಿ ಮುಗಿದಿರುವುದರಿಂದ, ನಮ್ಮ ಶರೀರಗಳೂ, ನಮ್ಮ ಭೂಮಿಯೂ ಹೊರತು ನಮ್ಮ ಒಡೆಯನ ಮುಂದೆ ಏನೂ ಉಳಿಯಲಿಲ್ಲವೆಂಬುದನ್ನು ನಮ್ಮ ಒಡೆಯನಿಗೆ ಮರೆಮಾಡದೆ ತಿಳಿಸುತ್ತಿದ್ದೇವೆ. 19 ನಾವೂ, ನಮ್ಮ ಭೂಮಿಯೂ ನಿನ್ನ ಕಣ್ಣೆದುರಿಗೆ ಸಾಯುವುದು ಏಕೆ? ನಮ್ಮನ್ನೂ, ನಮ್ಮ ಭೂಮಿಯನ್ನೂ ಆಹಾರಕ್ಕಾಗಿ ಕೊಂಡುಕೋ. ಆಗ ನಾವೂ, ನಮ್ಮ ಭೂಮಿಯೂ ಫರೋಹನಿಗೆ ದಾಸರಾಗಿರುವೆವು. ನಮಗೆ ಬೀಜವನ್ನು ಕೊಡು, ಆಗ ನಾವು ಸಾಯದೆ ಬದುಕುವೆವು, ಭೂಮಿಯು ಹಾಳಾಗದೆ ಇರುವುದು,” ಎಂದರು.

20 ಆಗ ಯೋಸೇಫನು ಈಜಿಪ್ಟ್ ದೇಶವನ್ನೆಲ್ಲಾ ಫರೋಹನಿಗಾಗಿ ಕೊಂಡುಕೊಂಡನು. ಬರವು ಅವರಿಗೆ ಘೋರವಾಗಿದ್ದುದರಿಂದ ಈಜಿಪ್ಟನವರು ತಮ್ಮ ತಮ್ಮ ಹೊಲಗಳನ್ನು ಮಾರಿಬಿಟ್ಟರು. ಹೀಗೆ ದೇಶವು ಫರೋಹನದಾಯಿತು. 21 ಯೋಸೇಫನು ಈಜಿಪ್ಟ್ ದೇಶದ ಒಂದು ಮೇರೆಯಿಂದ ಇನ್ನೊಂದು ಮೇರೆಯವರೆಗೂ ಜನರನ್ನು ದಾಸರನ್ನಾಗಿ ಮಾಡಿದನು. 22 ಯಾಜಕರ ಭೂಮಿಯನ್ನು ಮಾತ್ರ ಅವನು ಕೊಂಡುಕೊಳ್ಳಲಿಲ್ಲ. ಏಕೆಂದರೆ ಫರೋಹನು ಯಾಜಕರಿಗೆ ಭತ್ಯೆಗಳನ್ನು ನೇಮಿಸಿದ್ದನು. ಅವನು ಅವರಿಗೆ ನೇಮಿಸಿದ್ದನ್ನು, ಅವರು ಊಟಮಾಡುತ್ತಿದ್ದರು. ಆದ್ದರಿಂದ ಅವರು ತಮ್ಮ ಭೂಮಿಗಳನ್ನು ಮಾರಲಿಲ್ಲ.

23 ಯೋಸೇಫನು ಜನರಿಗೆ, “ಇಂದು ನಿಮ್ಮನ್ನೂ, ನಿಮ್ಮ ಭೂಮಿಯನ್ನೂ ಫರೋಹನಿಗಾಗಿ ಕೊಂಡುಕೊಂಡಿದ್ದೇನೆ. ಇಲ್ಲಿ ನಿಮಗೆ ಬೀಜವಿದೆ. ನೀವು ಭೂಮಿಯಲ್ಲಿ ಬೀಜ ಬಿತ್ತಿರಿ. 24 ಬೆಳೆ ಬಂದಾಗ ಐದನೆಯ ಪಾಲನ್ನು ಫರೋಹನಿಗೆ ಕೊಡಬೇಕು. ಉಳಿದ ನಾಲ್ಕು ಪಾಲು ಹೊಲದ ಬೀಜಕ್ಕಾಗಿಯೂ, ನಿಮ್ಮ ಆಹಾರಕ್ಕಾಗಿಯೂ, ನಿಮ್ಮ ಮಕ್ಕಳ ಆಹಾರಕ್ಕಾಗಿಯೂ ನಿಮಗೆ ಇರಲಿ,” ಎಂದನು.

25 ಆಗ ಅವರು, “ನೀನೇ ನಮ್ಮನ್ನು ಬದುಕಿಸಿದ್ದೀ, ನಮ್ಮ ಒಡೆಯನ ಕಣ್ಣುಗಳ ಮುಂದೆ ನಮಗೆ ದಯೆ ದೊರಕಲಿ. ನಾವು ಫರೋಹನ ದಾಸರಾಗಿರುವೆವು,” ಎಂದರು.

26 ಹೀಗೆ ಯೋಸೇಫನು ಫರೋಹನಿಗೆ ಐದನೆಯ ಪಾಲು ಆಗಬೇಕೆಂಬುದನ್ನು ಈಜಿಪ್ಟಿನ ಭೂಮಿಗೆ ಇಂದಿನವರೆಗೂ ನಿಯಮವಾಗಿ ಸ್ಥಾಪಿಸಿದನು. ಯಾಜಕರ ಭೂಮಿಯು ಮಾತ್ರ ಫರೋಹನದಾಗಲಿಲ್ಲ.

27 ಇಸ್ರಾಯೇಲರು ಈಜಿಪ್ಟ್ ದೇಶದ ಗೋಷೆನ್ ಪ್ರಾಂತದಲ್ಲಿ ವಾಸವಾಗಿದ್ದು, ಆಸ್ತಿಯನ್ನು ಸಂಪಾದಿಸಿ, ಬೆಳೆದು ಬಹಳವಾಗಿ ವೃದ್ಧಿಹೊಂದಿದರು.

28 ಇದಲ್ಲದೆ ಯಾಕೋಬನು ಈಜಿಪ್ಟ್ ದೇಶದಲ್ಲಿ ಹದಿನೇಳು ವರುಷ ಬದುಕಿದನು. ಯಾಕೋಬನು ಬದುಕಿದ ದಿನಗಳು ನೂರ ನಲ್ವತ್ತೇಳು ವರ್ಷಗಳು. 29 ಇಸ್ರಾಯೇಲನ ಮರಣದ ಸಮಯವು ಸಮೀಪಿಸಿದಾಗ, ಅವನು ತನ್ನ ಮಗ ಯೋಸೇಫನನ್ನು ಕರೆಯಿಸಿ ಅವನಿಗೆ, “ಈಗ ನಿನ್ನ ಸಮ್ಮುಖದಲ್ಲಿ ನಾನು ದಯೆ ಹೊಂದಿದ್ದೇಯಾದರೆ, ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು, ನನಗೆ ಉಪಕಾರವನ್ನೂ, ನಂಬಿಗಸ್ತಿಕೆಯನ್ನೂ ತೋರಿಸು. ಈಜಿಪ್ಟಿನಲ್ಲಿ ನನ್ನನ್ನು ಹೂಳಿಡಬೇಡ. 30 ನನ್ನ ತಂದೆಯ ಸಂಗಡ ನಾನು ಮಲಗಬೇಕು. ಈಜಿಪ್ಟಿನಿಂದ ನನ್ನನ್ನು ತೆಗೆದುಕೊಂಡುಹೋಗಿ, ಅವರ ಸಮಾಧಿಯ ಸ್ಥಳದಲ್ಲಿ ನನ್ನನ್ನು ಹೂಳಿಡು,” ಎಂದನು.

ಅದಕ್ಕವನು, “ನಿನ್ನ ಮಾತಿನ ಪ್ರಕಾರ ನಾನು ಮಾಡುತ್ತೇನೆ,” ಎಂದನು.

31 ಯಾಕೋಬನು ತನಗೆ ಪ್ರಮಾಣಮಾಡು ಎಂದಾಗ ಯೋಸೇಫನು ಅವನಿಗೆ ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ತನ್ನ ಊರುಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.

<- ಆದಿಕಾಂಡ 46ಆದಿಕಾಂಡ 48 ->