Link to home pageLanguagesLink to all Bible versions on this site
15
ಅಬ್ರಾಮನೊಂದಿಗೆ ಯೆಹೋವ ದೇವರ ಒಡಂಬಡಿಕೆ
1 ಇವುಗಳಾದ ಮೇಲೆ ಯೆಹೋವ ದೇವರ ವಾಕ್ಯವು ಅಬ್ರಾಮನಿಗೆ ದರ್ಶನದಲ್ಲಿ ಉಂಟಾಗಿ ಹೇಳಿದ್ದೇನೆಂದರೆ:
“ಅಬ್ರಾಮನೇ, ಭಯಪಡಬೇಡ.
ನಾನು ನಿನಗೆ ಗುರಾಣಿಯಾಗಿದ್ದೇನೆ.
ನಾನೇ ನಿನಗೆ ಅತ್ಯಧಿಕ ಬಹುಮಾನವಾಗಿದ್ದೇನೆ.”

2 ಅದಕ್ಕೆ ಅಬ್ರಾಮನು, “ಸಾರ್ವಭೌಮ ಯೆಹೋವ ದೇವರೇ, ಮಕ್ಕಳಿಲ್ಲದವನಾಗಿರುವ ನನಗೆ ಏನು ಕೊಡುವಿರಿ? ಈ ದಮಸ್ಕದ ಎಲೀಯೆಜೆರನಿಗೆ ನನ್ನ ಆಸ್ತಿ ಪಾಲಾಗಿಬಿಡುವುದು,” ಎಂದನು. 3 ಅನಂತರ ಅಬ್ರಾಮನು, “ನೀವು ನನಗೆ ಸಂತಾನವನ್ನು ಕೊಡಲಿಲ್ಲ. ನನ್ನ ಮನೆಯಲ್ಲಿರುವ ದಾಸನೇ ಉತ್ತರಾಧಿಕಾರಿಯಾಗಿರುವನು,” ಎಂದನು.

4 ಆಗ ಯೆಹೋವ ದೇವರ ವಾಕ್ಯವು, “ಈ ಮನುಷ್ಯನು ನಿನ್ನ ಉತ್ತರಾಧಿಕಾರಿಯಾಗುವುದಿಲ್ಲ. ನಿನ್ನಿಂದಲೇ ಹುಟ್ಟಿಬರುವ ನಿನ್ನ ಮಗನು ನಿನ್ನ ವಾರಸುದಾರನಾಗುವನು,” ಎಂದು ಹೇಳಿ, 5 ಯೆಹೋವ ದೇವರು ಅವನನ್ನು ಹೊರಗೆ ಕರೆದುಕೊಂಡು ಬಂದು, “ಈಗ ನೀನು ಆಕಾಶವನ್ನು ದೃಷ್ಟಿಸಿ, ನಕ್ಷತ್ರಗಳನ್ನು ಲೆಕ್ಕಿಸಲು ನಿನ್ನಿಂದಾದರೆ, ಲೆಕ್ಕಿಸು. ಅದರಂತೆಯೇ ನಿನ್ನ ಸಂತತಿಯು ಆಗುವುದು,” ಎಂದು ಹೇಳಿದರು.

6 ಅಬ್ರಾಮನು ಯೆಹೋವ ದೇವರನ್ನು ನಂಬಿದನು, ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು.

7 ದೇವರು ಅವನಿಗೆ, “ಈ ದೇಶವನ್ನು ಸೊತ್ತಾಗಿ ನಿನಗೆ ಕೊಡಲು, ಕಸ್ದೀಯರ ಊರ್ ಎಂಬ ಪ್ರದೇಶದಿಂದ ನಿನ್ನನ್ನು ಹೊರಗೆ ತಂದ ಯೆಹೋವ ದೇವರು ನಾನೇ,” ಎಂದು ಹೇಳಿದರು.

8 ಅದಕ್ಕೆ ಅವನು, “ಸಾರ್ವಭೌಮ ಯೆಹೋವ ದೇವರೇ ನಾನು ಅದನ್ನು ನನ್ನ ಸೊತ್ತಾಗಿ ಹೊಂದುವೆನೆಂದು ಯಾವುದರಿಂದ ತಿಳಿದುಕೊಳ್ಳಲಿ?” ಎಂದನು.

9 ಅದಕ್ಕೆ ಯೆಹೋವ ದೇವರು ಅಬ್ರಾಮನಿಗೆ, “ಮೂರು ವರ್ಷದ ಕಡಸನ್ನು, ಮೂರು ವರ್ಷದ ಮೇಕೆಯನ್ನು, ಮೂರು ವರ್ಷದ ಟಗರನ್ನು, ಒಂದು ಬೆಳವಕ್ಕಿಯನ್ನು, ಒಂದು ಪಾರಿವಾಳವನ್ನು ನನಗಾಗಿ ತೆಗೆದುಕೊಂಡು ಬಾ,” ಎಂದರು.

10 ಅನಂತರ ಅವನು ಇವುಗಳನ್ನೆಲ್ಲಾ ಯೆಹೋವ ದೇವರಿಗಾಗಿ ತೆಗೆದುಕೊಂಡು ಬಂದು ಎರಡೆರಡು ಹೋಳುಮಾಡಿ, ಒಂದು ತುಂಡನ್ನು ಇನ್ನೊಂದರ ಎದುರಾಗಿ ಇಟ್ಟನು. ಆದರೆ ಅವನು ಪಕ್ಷಿಗಳನ್ನು ತುಂಡು ಮಾಡಲಿಲ್ಲ. 11 ರಣಹದ್ದುಗಳು ಆ ಶವಗಳ ಮೇಲೆ ಇಳಿದು ಬಂದಾಗ, ಅಬ್ರಾಮನು ಅವುಗಳನ್ನು ಓಡಿಸಿದನು.

12 ಸೂರ್ಯನು ಅಸ್ತಮಿಸಲಾಗಿ ಅಬ್ರಾಮನಿಗೆ ಗಾಢನಿದ್ರೆ ಹತ್ತಿತ್ತು. ಭೀಕರವಾದ ಕಾರ್ಗತ್ತಲು ಅವನ ಮೇಲೆ ಕವಿಯಿತು. 13 ಯೆಹೋವ ದೇವರು ಅಬ್ರಾಮನಿಗೆ, “ನಿನ್ನ ಸಂತತಿಯವರು ತಮ್ಮದಲ್ಲದ ದೇಶದಲ್ಲಿ ಪ್ರವಾಸಿಗಳಾಗಿರುವರು, ಅವರು ಗುಲಾಮರಾಗಿ ನಾಲ್ಕುನೂರು ವರ್ಷಗಳವರೆಗೆ ದಬ್ಬಾಳಿಕೆಗೆ ಗುರಿಯಾಗುವರು ಎಂಬುದನ್ನು ನೀನು ಖಂಡಿತವಾಗಿಯೂ ತಿಳಿಯತಕ್ಕದ್ದು. 14 ಆದರೆ ಅವರು ಗುಲಾಮರಾಗಿ ಸೇವೆ ಸಲ್ಲಿಸುತ್ತಿದ್ದ ದೇಶಕ್ಕೆ ನಾನು ನ್ಯಾಯತೀರಿಸುವೆನು. ತರುವಾಯ ಮಹಾ ಸಂಪತ್ತಿನೊಂದಿಗೆ ಅವರು ಹೊರಗೆ ಬರುವರು. 15 ನೀನಾದರೋ ಸಮಾಧಾನದಿಂದ ನಿನ್ನ ಪಿತೃಗಳ ಬಳಿಗೆ ಸೇರುವೆ. ಬಹಳ ಮುದಿ ಪ್ರಾಯದವನಾಗಿ ಮರಣಹೊಂದುವೆ. 16 ಆಗ ನಾಲ್ಕನೆಯ ಸಂತಾನದವರು ಇಲ್ಲಿಗೆ ತಿರುಗಿ ಬರುವರು. ಏಕೆಂದರೆ ಅಮೋರಿಯರ ಅಪರಾಧವು ಇನ್ನೂ ಪೂರ್ಣಸ್ಥಿತಿಗೆ ಬರಲಿಲ್ಲ,” ಎಂದು ಹೇಳಿದರು.

17 ಇದಾದ ಮೇಲೆ ಹೊತ್ತು ಮುಳುಗಿ ಕತ್ತಲಾಗುತ್ತಿರಲು, ಹೊಗೆ ಹಾಯುವ ಒಲೆಯೂ ಉರಿಯುವ ದೀಪವೂ ಆ ತುಂಡುಗಳ ಮಧ್ಯದಲ್ಲಿ ಹಾದು ಹೋದವು. 18 ಅದೇ ದಿನದಲ್ಲಿ ಯೆಹೋವ ದೇವರು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು, “ಈಜಿಪ್ಟ್ ದೇಶದ ನದಿಯಿಂದ ಮಹಾನದಿ ಯೂಫ್ರೇಟೀಸ್ ನದಿಯವರೆಗೆ ವಾಸಿಸುವ 19 ಕೇನ್ಯರೂ ಕೆನಿಜ್ಜೀಯರೂ ಕದ್ಮೋನಿಯರೂ 20 ಹಿತ್ತಿಯರೂ ಪೆರಿಜೀಯರೂ ರೆಫಾಯರೂ 21 ಅಮೋರಿಯರೂ ಕಾನಾನ್ಯರೂ ಗಿರ್ಗಾಷಿಯರೂ ಯೆಬೂಸಿಯರೂ ವಾಸವಾಗಿರುವ ದೇಶವನ್ನು ನಾನು ನಿನ್ನ ಸಂತತಿಗೆ ಕೊಟ್ಟಿದ್ದೇನೆ,” ಎಂದು ಹೇಳಿದರು.

<- ಆದಿಕಾಂಡ 14ಆದಿಕಾಂಡ 16 ->