Link to home pageLanguagesLink to all Bible versions on this site
13
ಅಬ್ರಾಮನು ಲೋಟನನ್ನು ಅಗಲಿದ್ದು

1 ಆಗ ಅಬ್ರಾಮನು ತನ್ನ ಹೆಂಡತಿಯೊಂದಿಗೆ ತನಗೆ ಇದ್ದದ್ದನ್ನೆಲ್ಲಾ ತೆಗೆದುಕೊಂಡು ಲೋಟನ ಸಂಗಡ ಈಜಿಪ್ಟನ್ನು ಬಿಟ್ಟು ನೆಗೆವಕ್ಕೆ ಪ್ರಯಾಣಮಾಡಿದನು. 2 ಅಬ್ರಾಮನು ಪಶುಗಳು, ಬೆಳ್ಳಿ ಮತ್ತು ಬಂಗಾರವನ್ನು ಹೊಂದಿ ಬಹು ಧನವಂತನಾಗಿದ್ದನು.

3 ಅವನು ತನ್ನ ಪ್ರಯಾಣಗಳಲ್ಲಿ ನೆಗೆವದಿಂದ ಬೇತೇಲಿಗೆ, ಎಂದರೆ ಮೊದಲು ಬೇತೇಲಿಗೂ ಆಯಿ ಎಂಬ ಊರಿಗೂ ಮಧ್ಯದಲ್ಲಿ ಅವನ ಗುಡಾರವಿದ್ದ ಸ್ಥಳಕ್ಕೆ ಬಂದನು. 4 ಅಲ್ಲಿ ಅಬ್ರಾಮನು ಯೆಹೋವ ದೇವರ ಹೆಸರನ್ನು ಹೇಳಿಕೊಂಡು ಆರಾಧಿಸಿದನು.

5 ಅಬ್ರಾಮನ ಸಂಗಡ ಬಂದ ಲೋಟನಿಗೆ ಸಹ ಕುರಿ ದನಗಳೂ ಗುಡಾರಗಳೂ ಇದ್ದವು. 6 ಆಗ ಅವರು ಒಂದಾಗಿ ವಾಸಿಸಲಿಕ್ಕೆ ಆ ಸ್ಥಳ ಸಾಲದೆ ಹೋಯಿತು. ಅವರಿಬ್ಬರ ಸಂಪತ್ತು ಬಹಳವಾಗಿದ್ದರಿಂದ ಒಂದೇ ಸ್ಥಳದಲ್ಲಿ ಅವರು ವಾಸವಾಗಿರಲು ಆಗಲಿಲ್ಲ. 7 ಆಗ ಅಬ್ರಾಮನ ದನ ಕಾಯುವವರಿಗೂ ಲೋಟನ ದನ ಕಾಯುವವರಿಗೂ ಜಗಳವಾಯಿತು. ಕಾನಾನ್ಯರೂ ಪೆರಿಜೀಯರೂ ಆಗ ದೇಶದಲ್ಲಿ ವಾಸವಾಗಿದ್ದರು.

8 ಅಬ್ರಾಮನು ಲೋಟನಿಗೆ, “ನನಗೂ, ನಿನಗೂ; ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಿರಬಾರದು. ಏಕೆಂದರೆ ನಾವು ಬಳಗದವರು. 9 ದೇಶವೆಲ್ಲಾ ನಿನ್ನ ಮುಂದೆ ಇರುತ್ತದೆಯಲ್ಲವೆ? ನಾವು ಪ್ರತ್ಯೇಕವಾಗೋಣ. ನೀನು ಎಡಕ್ಕೆ ಹೋದರೆ, ನಾನು ಬಲಕ್ಕೆ ಹೋಗುವೆನು; ನೀನು ಬಲಕ್ಕೆ ಹೋದರೆ, ನಾನು ಎಡಕ್ಕೆ ಹೋಗುವೆನು,” ಎಂದನು.

10 ಲೋಟನು ತನ್ನ ಕಣ್ಣುಗಳನ್ನೆತ್ತಿ ನೋಡಿ ಯೊರ್ದನಿನ ಮೈದಾನವನ್ನೆಲ್ಲಾ ಕಂಡನು. ಏಕೆಂದರೆ ಯೆಹೋವ ದೇವರು ಸೊದೋಮನ್ನೂ ಗೊಮೋರವನ್ನೂ ನಾಶ ಮಾಡುವುದಕ್ಕಿಂತ ಮುಂಚೆ, ಅದೆಲ್ಲಾ ಚೋಗರಿನವರೆಗೆ ನೀರಾವರಿ ಪ್ರದೇಶವಾಗಿದ್ದು, ಯೆಹೋವ ದೇವರ ತೋಟದಂತೆಯೂ ಈಜಿಪ್ಟ್ ದೇಶದಂತೆಯೂ ಇತ್ತು. 11 ಆದುದರಿಂದ ಲೋಟನು ಯೊರ್ದನಿನ ಕಣಿವೆಯನ್ನೆಲ್ಲಾ ತನಗಾಗಿ ಆರಿಸಿಕೊಂಡನು. ಲೋಟನು ಪೂರ್ವದಿಕ್ಕಿನ ಕಡೆಗೆ ಹೊರಟಿದ್ದರಿಂದ, ಅವರು ಒಬ್ಬರಿಂದೊಬ್ಬರು ಪ್ರತ್ಯೇಕವಾದರು. 12 ಅಬ್ರಾಮನು ಕಾನಾನ್ ದೇಶದಲ್ಲಿ ವಾಸಮಾಡಿದನು. ಲೋಟನಾದರೋ ಸಮತಟ್ಟಾದ ಊರುಗಳಲ್ಲಿ ವಾಸಿಸುತ್ತಾ ಸೊದೋಮಿನ ಬಳಿ ತನ್ನ ಗುಡಾರವನ್ನು ಹಾಕಿದನು. 13 ಸೊದೋಮಿನ ಜನರು ದುಷ್ಟರಾಗಿದ್ದರು ಮತ್ತು ಯೆಹೋವ ದೇವರ ವಿರುದ್ಧ ಬಹಳ ಪಾಪಮಾಡುತ್ತಿದ್ದರು.

14 ಲೋಟನು ಅಬ್ರಾಮನಿಂದ ಹೋದ ಮೇಲೆ ಯೆಹೋವ ದೇವರು ಅವನಿಗೆ, “ಈಗ ನೀನಿರುವ ಸ್ಥಳದಿಂದ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಪಶ್ಚಿಮಕ್ಕೂ ಕಣ್ಣೆತ್ತಿ ನೋಡು. 15 ಏಕೆಂದರೆ ನೀನು ಕಾಣುವ ದೇಶವನ್ನೆಲ್ಲಾ ನಾನು ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು. 16 ಭೂಮಿಯ ಧೂಳನ್ನು ಒಬ್ಬನು ಲೆಕ್ಕಿಸಬಹುದಾದರೆ, ನಿನ್ನ ಸಂತಾನದವರನ್ನು ಸಹ ಲೆಕ್ಕಿಸಲು ಸಾಧ್ಯವಾಗುವುದು. 17 ಎದ್ದು ದೇಶದ ಉದ್ದಗಲಕ್ಕೂ ನಡೆದಾಡು. ನಾನು ನಿನಗೆ ಅದನ್ನು ಕೊಡುವೆನು,” ಎಂದರು.

18 ಅನಂತರ ಅಬ್ರಾಮನು ತನ್ನ ಗುಡಾರವನ್ನು ಹಾಕಿಸಿಕೊಳ್ಳುತ್ತಾ, ಹೆಬ್ರೋನಿನಲ್ಲಿರುವ ಮಮ್ರೆಯ ತೋಪಿಗೆ ಬಂದು, ಅಲ್ಲಿ ವಾಸವಾಗಿದ್ದನು. ಅಲ್ಲಿ ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿದನು.

<- ಆದಿಕಾಂಡ 12ಆದಿಕಾಂಡ 14 ->