Link to home pageLanguagesLink to all Bible versions on this site
5
ಕ್ರಿಸ್ತ ಯೇಸುವಿನಲ್ಲಿ ಸ್ವಾತಂತ್ರ್ಯ
1 ಕ್ರಿಸ್ತ ಯೇಸು ನಮ್ಮನ್ನು ಸ್ವತಂತ್ರಕ್ಕಾಗಿಯೇ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಸ್ಥಿರವಾಗಿ ನಿಲ್ಲಿರಿ. ನೀವು ನಿಯಮದ ದಾಸತ್ವದ ನೊಗದಲ್ಲಿ ಪುನಃ ಸಿಕ್ಕಿಕೊಳ್ಳಬೇಡಿರಿ.

2 ಇಗೋ, ಪೌಲನೆಂಬ ನಾನು ನಿಮಗೆ ಹೇಳುವುದೇನೆಂದರೆ, ನೀವು ಸುನ್ನತಿ ಮಾಡಿಸಿಕೊಂಡರೆ, ಕ್ರಿಸ್ತ ಯೇಸುವಿನ ಮುಖಾಂತರ ನಿಮಗೆ ಏನೂ ಪ್ರಯೋಜನವಾಗುವುದಿಲ್ಲ. 3 ಸುನ್ನತಿ ಮಾಡಿಸಿಕೊಳ್ಳಲು ಬಯಸುವ ಪ್ರತಿಯೊಬ್ಬನೂ ನಿಯಮವನ್ನೆಲ್ಲಾ ಕೈಗೊಳ್ಳುವ ಹಂಗಿನಲ್ಲಿದ್ದಾನೆ ಎಂದು ಪುನಃ ದೃಢವಾಗಿ ಹೇಳುತ್ತೇನೆ. 4 ನೀವು ನಿಯಮದ ಮೂಲಕ ನೀತಿವಂತರಾಗಬೇಕೆಂದು ಪ್ರಯತ್ನಿಸುವವರು, ಕ್ರಿಸ್ತ ಯೇಸುವಿನಿಂದ ಬೇರ್ಪಟ್ಟಿದ್ದೀರಿ. ನೀವು ಕೃಪೆಯಿಂದ ಬಿದ್ದವರಾಗಿದ್ದೀರಿ. 5 ನಾವಾದರೋ ನಂಬಿಕೆಯಿಂದ ನೀತಿವಂತರಾಗುವ ನಮ್ಮ ನಿರೀಕ್ಷೆಯನ್ನು ದೇವರ ಆತ್ಮನ ಮೂಲಕ ಆತುರದಿಂದ ಎದುರುನೋಡುತ್ತಿದ್ದೇವೆ. 6 ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವವರಿಗೆ ಸುನ್ನತಿಯಾದರೂ ಸುನ್ನತಿ ಆಗದಿದ್ದರೂ ಯಾವ ವ್ಯತ್ಯಾಸವಿರುವುದಿಲ್ಲ. ಆದರೆ ಪ್ರೀತಿಯಿಂದ ಕಾರ್ಯ ನಡೆಸುವ ನಂಬಿಕೆಯು ಮಾತ್ರ ಪ್ರಯೋಜನವಾಗಿರುತ್ತದೆ.

7 ನೀವು ಚೆನ್ನಾಗಿ ಓಡುತ್ತಿದ್ದಿರಿ. ನೀವು ಸತ್ಯಕ್ಕೆ ವಿಧೇಯರಾಗದಂತೆ ನಿಮ್ಮನ್ನು ತಡೆದವರು ಯಾರು? 8 ಈ ಪ್ರೇರಣೆಯು ನಿಮ್ಮನ್ನು ಕರೆದ ದೇವರಿಂದ ಬಂದದ್ದಲ್ಲ. 9 ಸ್ವಲ್ಪ ಹುಳಿಯು ಹಿಟ್ಟನ್ನೆಲ್ಲಾ ಹುಳಿಮಾಡುವುದು. 10 ನೀವು ಬೇರೆ ರೀತಿಯಿಂದ ಯೋಚಿಸುವುದಿಲ್ಲವೆಂದು ಕರ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತು ನನಗೆ ಭರವಸೆ ಇದೆ. ಆದರೆ ನಿಮ್ಮನ್ನು ತೊಂದರೆ ಪಡಿಸುವವನು ಯಾವನಾದರೂ ಸರಿ, ಅವನು ದಂಡನೆಯನ್ನು ಅನುಭವಿಸುವನು. 11 ಆದರೆ ಪ್ರಿಯರೇ, ನಾನು ಸುನ್ನತಿಯಾಗಬೇಕೆಂದು ಇನ್ನೂ ಬೋಧಿಸುವವನಾಗಿದ್ದರೆ, ಈಗಲೂ ನನಗೆ ಹಿಂಸೆಯಾಗುತ್ತಿರುವುದು ಏಕೆ? ಹಾಗಾದರೆ ಶಿಲುಬೆಯ ಸಂದೇಶ ಸಾರುವುದರಿಂದ ಯಾವ ಆತಂಕವೂ ಉಂಟಾಗುತ್ತಿರಲಿಲ್ಲವಲ್ಲಾ? 12 ನಿಮ್ಮನ್ನು ಸುನ್ನತಿ ಮಾಡಿಸಿಕೊಳ್ಳಬೇಕೆಂದು ತೊಂದರೆ ಪಡಿಸುವವರಿಗೆ ಆ ಅಂಗಚ್ಛೇದವನ್ನಾದರೂ ಮಾಡಿಕೊಂಡರೆ ಲೇಸು ಎಂದು ಬಯಸುತ್ತೇನೆ!

ಪವಿತ್ರಾತ್ಮರಿಗೆ ಅನುಗುಣವಾಗಿ ನಡೆಯತಕ್ಕದ್ದು
13 ಪ್ರಿಯರೇ, ನೀವು ಸ್ವಾತಂತ್ರ್ಯಕ್ಕಾಗಿ ಕರೆಹೊಂದಿದವರು. ಆದರೆ ಆ ಸ್ವಾತಂತ್ರ್ಯವನ್ನು ಶಾರೀರಿಕ ಅನುಕೂಲಕ್ಕಾಗಿ ಉಪಯೋಗಿಸದೆ, ಪ್ರೀತಿಯಿಂದ ಒಬ್ಬರಿಗೊಬ್ಬರು ದೀನರಾಗಿ ಸೇವೆಮಾಡಿರಿ. 14 ಏಕೆಂದರೆ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು,”[a] ಎಂಬ ಒಂದೇ ಆಜ್ಞೆಯಲ್ಲಿ ನಿಯಮವೆಲ್ಲಾ ಅಡಕವಾಗಿದೆ. 15 ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಿ ನುಂಗುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರಿಕೆ.

16 ನಾನು ಹೇಳುವುದೇನೆಂದರೆ, ಪವಿತ್ರಾತ್ಮರ ನಡೆಸುವಿಕೆಯಿಂದ ಬಾಳಿರಿ, ಆಗ ನೀವು ದೈಹಿಕ ಆಸೆಗಳನ್ನು ಎಂದೂ ಪೂರೈಸಲಾರಿರಿ. 17 ಏಕೆಂದರೆ ಮಾಂಸಭಾವವು ಆತ್ಮನಿಗೆ ವಿರುದ್ಧವಾಗಿಯೂ ಆತ್ಮನು ಮಾಂಸಭಾವಕ್ಕೆ ವಿರುದ್ಧವಾಗಿಯೂ ಆಶಿಸುತ್ತದೆ. ನೀವು ಮಾಡಬಯಸುವುದನ್ನು ಮಾಡದಂತೆ ಇವು ಒಂದಕ್ಕೊಂದು ವಿರೋಧವಾಗಿವೆ. 18 ಆದರೆ ನೀವು ದೇವರ ಆತ್ಮದಿಂದ ನಡೆಸಿಕೊಳ್ಳುವವರಾದರೆ, ನಿಯಮದ ಅಧೀನತೆಯಲ್ಲಿ ಇರುವವರಲ್ಲ.

19 ಮಾಂಸಭಾವದ ಕೃತ್ಯಗಳು ಹೀಗೆ ಸ್ಪಷ್ಟವಾಗಿವೆ: ಜಾರತ್ವ, ಅಶುದ್ಧತ್ವ, ಸಡಿಲ ಜೀವನ, 20 ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಸ್ವಾರ್ಥತ್ವ, ವಿರೋಧತ್ವ, ಭಿನ್ನತೆ, 21 ಮತ್ಸರ, ಕುಡಿಕತನ, ದುಂದೌತಣ ಈ ಮೊದಲಾದವುಗಳೇ. ಇಂಥ ಕೃತ್ಯಗಳನ್ನು ನಡೆಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂದು ನಾನು ನಿಮಗೆ ಮುಂಚೆಯೇ ಹೇಳಿದಂತೆ ಈಗಲೂ ಹೇಳುತ್ತೇನೆ.

22 ಪವಿತ್ರಾತ್ಮರ ಫಲವೇನೆಂದರೆ: ಪ್ರೀತಿ, ಆನಂದ, ಸಮಾಧಾನ, ಸಹನೆ, ದಯೆ, ಸದ್ಗುಣ, ನಂಬಿಗಸ್ತಿಕೆ, 23 ಸಾತ್ವಿಕತೆ, ಸಂಯಮ ಇಂಥವುಗಳೇ. ಇವುಗಳಿಗೆ ವಿರೋಧವಾಗಿ ಯಾವ ನಿಯಮವೂ ಇಲ್ಲ. 24 ಕ್ರಿಸ್ತ ಯೇಸುವಿನವರು ತಮ್ಮ ಮಾಂಸಭಾವವನ್ನೂ ಅದರ ಆಶೆ ಹಾಗೂ ಅಪೇಕ್ಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದ್ದಾರೆ. 25 ನಾವು ದೇವರ ಆತ್ಮದಿಂದ ಜೀವಿಸುತ್ತಿರಲಾಗಿ ಆತ್ಮರನ್ನನುಸರಿಸಿ ನಡೆಯೋಣ. 26 ನಾವು ಅಹಂಕಾರಿಗಳಾಗಿರಬಾರದು. ಒಬ್ಬರನ್ನೊಬ್ಬರು ಕೆಣಕದೆಯೂ ಒಬ್ಬರ ಮೇಲೊಬ್ಬರು ಮತ್ಸರಗೊಳ್ಳದೆಯೂ ಇರೋಣ.

<- ಗಲಾತ್ಯದವರಿಗೆ 4ಗಲಾತ್ಯದವರಿಗೆ 6 ->