10 ಕೊಠಡಿಗಳು ಪೂರ್ವದ ಕಡೆಗೆ ಅಂಗಳದ ಗೋಡೆಯ ಪ್ರತ್ಯೇಕ ಸ್ಥಳಕ್ಕೂ ಕಟ್ಟಡಕ್ಕೂ ಎದುರಾಗಿದ್ದವು. 11 ಅವುಗಳ ಮುಂದಿನ ದಾರಿಯು ಉತ್ತರದ ಕಡೆಯಲ್ಲಿದ್ದ ಕೊಠಡಿಗಳ ಆಕಾರದ ಹಾಗೆಯೇ ಇತ್ತು. ಅವುಗಳ ಉದ್ದವೂ ಅಗಲವೂ ಒಂದೇ ಆಗಿತ್ತು. ಉತ್ತರ ದಿಕ್ಕಿನ ಬಾಗಿಲುಗಳು 12 ದಕ್ಷಿಣ ಕಡೆಗಿದ್ದ ಕೊಠಡಿಗಳ ಬಾಗಿಲುಗಳ ಪ್ರಕಾರ ಅವುಗಳನ್ನು ಒಬ್ಬನು ಪ್ರವೇಶಿಸುವಂತೆ ಪೂರ್ವದ ಕಡೆಯ ಗೋಡೆಗೆ ಸರಿಯಾದ ಮಾರ್ಗದ ಕೊನೆಯಲ್ಲಿ ಒಂದು ಬಾಗಿಲಿತ್ತು.
13 ಆಗ ಅವನು ನನಗೆ, “ಪ್ರತ್ಯೇಕ ಸ್ಥಳದ ಮುಂದೆ ಇರುವ ಉತ್ತರ ಮತ್ತು ದಕ್ಷಿಣದ ಕೊಠಡಿಗಳು ಪರಿಶುದ್ಧವಾದವು. ಅಲ್ಲಿ ಯೆಹೋವ ದೇವರಿಗಾಗಿ ಬರುವ ಯಾಜಕರು ಅತಿ ಪರಿಶುದ್ಧ ಪದಾರ್ಥಗಳನ್ನು ಭುಜಿಸುತ್ತಾರೆ. ಮತ್ತು ಕಾಣಿಕೆಯನ್ನೂ ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ಅಲ್ಲಿಡುತ್ತಾರೆ. ಆ ಸ್ಥಳವು ಪರಿಶುದ್ಧ. 14 ಯಾಜಕರು ಅವುಗಳಲ್ಲಿ ಪ್ರವೇಶಿಸುವಾಗ ಅವರು ಪರಿಶುದ್ಧ ಸ್ಥಳವನ್ನು ಬಿಟ್ಟು ಹೊರಗಿನ ಅಂಗಳಕ್ಕೆ ಹೋಗಬಾರದು. ಅವರು ತಾವು ಸೇವೆಗಾಗಿ ಧರಿಸಿದ ವಸ್ತ್ರಗಳನ್ನು ಅಲ್ಲೇ ತೆಗೆದಿಡಬೇಕು. ಏಕೆಂದರೆ ಅವು ಪರಿಶುದ್ಧವಾಗಿವೆ. ಅವರು ಜನರಿಗೆ ಸಂಬಂಧಪಟ್ಟ ಬೇರೆ ವಸ್ತ್ರಗಳನ್ನು ಧರಿಸಿಕೊಂಡು ಸಮೀಪಿಸಬೇಕು,” ಎಂದನು.
15 ಹೀಗೆ ಅವನು ಒಳಗಿನ ಆಲಯದ ಅಳತೆಮಾಡಿ ಮುಗಿಸಿದ ಮೇಲೆ ನನ್ನನ್ನು ಪೂರ್ವದ ಕಡೆಗೆ ಅಭಿಮುಖವಾಗಿರುವ ಬಾಗಿಲಿನಿಂದ ಹೊರಗೆ ತಂದು ಅದನ್ನು ಸುತ್ತಲಾಗಿ ಅಳೆದನು. 16 ಅವನು ಅಳೆಯುವ ಕೋಲಿನಿಂದ ಪೂರ್ವದ ಭಾಗವನ್ನು ಅಳೆದನು. ಅದು ಅಳೆಯುವ ಕೋಲಿನ ಪ್ರಕಾರ ಸುಮಾರು 265 ಮೀಟರ್ ಆಗಿತ್ತು. 17 ಉತ್ತರದ ಕಡೆಯಲ್ಲಿಯೂ ಸಹ ಅವನು ಉತ್ತರದ ಭಾಗವನ್ನು ಅಳತೆಯ ಕೋಲಿನ ಪ್ರಕಾರ ಸುತ್ತಲಾಗಿ ಸುಮಾರು 265 ಮೀಟರ್ ಎಂದು ಅಳೆದನು. 18 ಅವನು ಅಳತೆಯ ಕೋಲಿನಿಂದ ದಕ್ಷಿಣದ ಭಾಗವನ್ನು ಸುಮಾರು 265 ಮೀಟರ್ ಎಂದು ಅಳೆದನು. 19 ಅವನು ಪಶ್ಚಿಮದ ಕಡೆಗೆ ತಿರುಗಿ ಅಳತೆಯ ಕೋಲಿನಿಂದ ಸುಮಾರು 265 ಮೀಟರ್ ಎಂದು ಅಳೆದನು. 20 ಅವನು ನಾಲ್ಕು ಕಡೆಗಳಿಂದ ಅಳೆದನು. ಪರಿಶುದ್ಧವಾದ ಮತ್ತು ಅಪರಿಶುದ್ಧವಾದ ಸ್ಥಳವನ್ನೂ ಪ್ರತ್ಯೇಕಪಡಿಸುವ ಹಾಗೆ ಅದಕ್ಕೆ ಸುತ್ತಲು ಸುಮಾರು 265 ಮೀಟರ್ ಉದ್ದ ಮತ್ತು ಸುಮಾರು 265 ಮೀಟರ್ ಗೋಡೆ ಇತ್ತು.
<- ಯೆಹೆಜ್ಕೇಲನು 41ಯೆಹೆಜ್ಕೇಲನು 43 ->