7 “ ‘ನೀನು ಸಿದ್ಧನಾಗಿ ನಿನ್ನ ಸಂಗಡ ಕೂಡಿಬಂದಿರುವ ನಿನ್ನ ಎಲ್ಲಾ ಕೂಟಗಳನ್ನು ಸಿದ್ಧಮಾಡಿಕೊಂಡು ನೀನು ಅವರ ಅಧಿಕಾರವನ್ನು ತೆಗೆದುಕೊ. 8 ಬಹಳ ದಿವಸಗಳಾದ ಮೇಲೆ ನಾನು ನಿನ್ನನ್ನು ಕರೆಯುವೆನು; ನೀನು ಯುದ್ಧದಿಂದ ಉಳಿದುಕೊಂಡ ದೇಶಕ್ಕೂ, ಯಾವಾಗಲೂ ಹಾಳಾಗಿದ್ದ ಇಸ್ರಾಯೇಲ್ ಪರ್ವತಗಳ ಮೇಲೆಯೂ, ಜನಾಂಗಗಳಿಂದ ಒಟ್ಟುಗೂಡಿ ಭದ್ರವಾಗಿ ವಾಸಿಸುವವರ ವಿರೋಧವಾಗಿ ವರ್ಷಗಳ ಅಂತ್ಯದಲ್ಲಿ ಬರುವೆ. 9 ನೀನು ಮೇಲೇರಿ ಬಿರುಗಾಳಿಯಂತೆ ಬರುವೆ. ನೀನೂ ನಿನ್ನ ಎಲ್ಲಾ ದಂಡುಗಳೂ ಅನೇಕ ಜನರಸಹಿತವಾಗಿ ಮೇಘದಂತೆ ದೇಶವನ್ನು ಮುಚ್ಚುವಿರಿ.
10 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಆ ದಿನದಲ್ಲಿ ನಿನ್ನ ಮನಸ್ಸಿಗೆ ಕೆಲವು ಆಲೋಚನೆಗಳು ಬರುವುವು ಮತ್ತು ನೀನು ಒಂದು ಕುತಂತ್ರವನ್ನು ಮಾಡುವೆ. 11 ನೀವು ಹೇಳುವಿರಿ, “ಗೋಡೆಯಿಲ್ಲದ ಹಳ್ಳಿಗಳಿಲ್ಲದ ದೇಶದ ಮೇಲೆ ನಾನು ಆಕ್ರಮಣ ಮಾಡುತ್ತೇನೆ. ಪೌಳಿಗೋಡೆಗಳಿಲ್ಲದೆ ಇಲ್ಲವೆ ಬಾಗಿಲುಗಳು ಅಗುಳಿಗಳು ಇಲ್ಲದೆ ಅವರು ಶಾಂತಿಯುತ ಮತ್ತು ನಿರ್ಭಯವಾಗಿ ವಾಸಿಸುವವರ ಮೇಲೆ ದಾಳಿಮಾಡುತ್ತೇನೆ. 12 ನಾನು ಸುಲಿಗೆಯನ್ನು ಮತ್ತು ಕೊಳ್ಳೆಯನ್ನು ತೆಗೆದುಕೊಳ್ಳುವೆನು. ಹೀಗೆ ನಿರ್ಜನವಾಗಿದ್ದು ಜನಭರಿತವಾದ ಪ್ರದೇಶಗಳನ್ನು ಎದುರಿಸುವೆನು. ಜನಾಂಗಗಳಿಂದ ಒಟ್ಟುಗೂಡಿ, ಪಶುಗಳೂ ಸಂಪತ್ತೂ ಉಳ್ಳಂಥ ಮತ್ತು ಭೂಮಿಯ ಮಧ್ಯದಲ್ಲಿ ವಾಸಿಸುವವರ ಮೇಲೆಯೂ ಕೈಹಾಕುವೆನು,” ಎಂದು ಹೇಳುವೆ. 13 ಶೆಬ, ದೆದಾನ್ ಮತ್ತು ತಾರ್ಷೀಷಿನ ವರ್ತಕರು, ಅವಳ ಎಲ್ಲಾ ಹಳ್ಳಿಗಳೊಂದಿಗೆ ಅಲ್ಲಿ ನಿನಗೆ, “ನೀನು ಸುಲಿಗೆ ತೆಗೆದುಕೊಳ್ಳಬೇಕೆಂದು ಬಂದೆಯಾ? ಕೊಳ್ಳೆ ಹೊಡೆಯುವುದಕ್ಕಾಗಿಯೇ ನಿನ್ನ ತಂಡವನ್ನು ಕೂಡಿಸಿದೆಯೋ? ಬಂಗಾರ ಮತ್ತು ಬೆಳ್ಳಿಯನ್ನು ಹೊತ್ತುಕೊಂಡು ಪಶುಗಳನ್ನೂ ಸಂಪತ್ತನ್ನೂ ತೆಗೆದುಕೊಂಡು ಮಹಾ ಸುಲಿಗೆ ತೆಗೆದುಕೊಳ್ಳಬೇಕೆಂದೋ?” ಎನ್ನುವರು.’
14 “ಆದ್ದರಿಂದ ಮನುಷ್ಯಪುತ್ರನೇ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ಗೋಗಿಗೆ ಪ್ರವಾದಿಸಿ ಹೇಳು, ನನ್ನ ಜನರಾದ ಇಸ್ರಾಯೇಲರು ಸುಖವಾಗಿ ವಾಸಿಸುವರೋ ಆ ದಿನದಲ್ಲಿ ಅದು ನಿನಗೆ ತಿಳಿಯುವುದಿಲ್ಲವೋ 15 ನೀನು ಉತ್ತರ ಭಾಗಗಳ ನಿನ್ನ ಸ್ಥಳದಿಂದ ಬರುವೆ. ನೀನೂ ನಿನ್ನ ಸಂಗಡ ಅನೇಕ ಜನರೂ ಕುದುರೆಗಳನ್ನು ಹತ್ತಿದವರಾಗಿ ಬಲವಾದ ಸೈನ್ಯವಾಗಿಯೂ ಮಹಾ ದಂಡಾಗಿಯೂ ಬರುವೆ. 16 ನೀನು ದೇಶವನ್ನು ಮುಚ್ಚುವ ಮೇಘದಂತೆ ನನ್ನ ಜನರಾಗಿರುವ ಇಸ್ರಾಯೇಲರಿಗೆ ವಿರೋಧವಾಗಿ ಅವರ ಮೇಲೆ ಬರುವೆ. ಇದು ನಡೆಯುವ ಕೊನೆಯ ದಿವಸಗಳಲ್ಲಿ ಓ ಗೋಗನೇ, ನಾನು ಅವರ ಕಣ್ಣುಗಳ ಮುಂದೆ ನಿನ್ನಲ್ಲಿ ಪರಿಶುದ್ಧನಾಗುವಾಗ, ಇತರ ಜನಾಂಗಗಳು ನನ್ನನ್ನು ತಿಳಿಯುವ ಹಾಗೆ ನಿನ್ನನ್ನು ನನ್ನ ದೇಶಕ್ಕೆ ವಿರೋಧವಾಗಿ ಬರಮಾಡುವೆನು.
17 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಯಾವನ ವಿಷಯವಾಗಿ ನನ್ನ ಸೇವಕರಾದ ಇಸ್ರಾಯೇಲಿನ ಪ್ರವಾದಿಗಳಿಂದ ಪೂರ್ವಕಾಲದಲ್ಲಿ ಮಾತನಾಡಿದೆನೋ ಅವನು ನೀನೇ ಅಲ್ಲವೇ? ನಿನ್ನನ್ನು ಅವರಿಗೆ ವಿರೋಧವಾಗಿ ಬರಮಾಡುತ್ತೇನೆಂದು ಆ ದಿನಗಳಲ್ಲಿ ಅನೇಕ ವರ್ಷಗಳಿಗೆ ಮುಂಚೆ ಪ್ರವಾದಿಸಿದೆಯಲ್ಲವೇ? 18 ಆ ದಿನದಲ್ಲಿ ಗೋಗನು ಇಸ್ರಾಯೇಲ್ ದೇಶಕ್ಕೆ ವಿರೋಧವಾಗಿ ಬರುವಾಗ, ನಾನು ರೋಷದಿಂದ ಬುಸುಗುಟ್ಟುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. 19 ಏಕೆಂದರೆ ನನ್ನ ಈ ರೋಷದಲ್ಲಿ ಮತ್ತು ನನ್ನ ಕೋಪದ ಬೆಂಕಿಯಲ್ಲಿ ನಾನು ಮಾತನಾಡುತ್ತೇನೆ. ನಿಶ್ಚಯವಾಗಿ ಆ ದಿನದಂದು ಇಸ್ರಾಯೇಲ್ ದೇಶದಲ್ಲಿ ಮಹಾಕಂಪನ ಉಂಟಾಗುವುದು. 20 ಆಗ ಸಮುದ್ರದ ಮೀನುಗಳು ಆಕಾಶದ ಪಕ್ಷಿಗಳು ಬಯಲಿನ ಮೃಗಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಎಲ್ಲಾ ಜಂತುಗಳು, ಭೂಮಿಯ ಎಲ್ಲಾ ಮನುಷ್ಯರ ಸಂಗಡ ನನ್ನ ಸಮ್ಮುಖದಲ್ಲಿ ನಡುಗುವುವು; ಪರ್ವತಗಳು ಉರುಳಿಹೋಗುವುವು. ಝರಿಗಳು ಕವಚಿಕೊಳ್ಳುತ್ತಾ, ಪ್ರತಿಯೊಂದು ಗೋಡೆಯೂ ನೆಲಕ್ಕೆ ಉರುಳುವುದು. 21 ನನ್ನ ಎಲ್ಲಾ ಪರ್ವತಗಳಲ್ಲೂ ನಾನು ಅವನಿಗೆ ವಿರುದ್ಧವಾಗಿ ಖಡ್ಗವನ್ನು ಕರೆಯುವೆನೆಂದೂ ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಪ್ರತಿಯೊಬ್ಬ ಮನುಷ್ಯನ ಖಡ್ಗವೂ ಅವನ ಸಹೋದರನಿಗೆ ವಿರೋಧವಾಗಿರುವುದು. 22 ನಾನು ಅವನೊಂದಿಗೆ ವ್ಯಾಜ್ಯಮಾಡುತ್ತಾ ಅವನನ್ನು ವ್ಯಾಧಿಗೂ ಸಾವಿಗೂ ಗುರಿಮಾಡುವೆನು. ನಾನು ಅವನ ಮೇಲೆ ಅವನ ದಂಡುಗಳ ಮೇಲೆ ಮಳೆಯನ್ನು ಸುರಿಸುವೆನು. ಅವನೊಂದಿಗಿರುವ ಅನೇಕ ಜನರ ಮೇಲೆ ಬೆಂಕಿಯನ್ನೂ ಗಂಧಕವನ್ನೂ ನುಣುಪಾದ ಕಲ್ಲುಗಳಿಂದ ತುಂಬಿ ಹರಿಯುವಂತಹ ಮಹಾ ಮಳೆಯನ್ನು ಸುರಿಸುವೆನು. 23 ಹೀಗೆ ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ, ನನ್ನ ಗೌರವವನ್ನು ಕಾಪಾಡಿಕೊಂಡು, ಬಹು ಜನಾಂಗಗಳು ನಾನೇ ಯೆಹೋವ ದೇವರೆಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತವಾಗುವೆನು.’
<- ಯೆಹೆಜ್ಕೇಲನು 37ಯೆಹೆಜ್ಕೇಲನು 39 ->